Shelly Kittleson | ಅಮೆರಿಕ ಮೂಲದ ಪತ್ರಕರ್ತೆ ಶೆಲ್ಲಿ ಕಿಟಲ್ಸನ್
Shelly Kittleson: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಮಂಗಳವಾರ ಸಂಜೆ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ರನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದು, ಅಲ್-ಸಾದೌನ್ ಸ್ಟ್ರೀಟ್‌ನಲ್ಲಿರುವ ಪ್ರಸಿದ್ಧ ಬಾಗ್ದಾದ್ ಹೋಟೆಲ್ ಸಮೀಪ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ರಸ್ತೆಬದಿಯಲ್ಲಿ ನಿಂತಿದ್ದ ಕಿಟಲ್ಸನ್ರನ್ನು ಕಾರಿನಲ್ಲಿ ಬಂದ ತಂಡವೊಂದು ಬಲವಂತವಾಗಿ ಅಪಹರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದೇಶಿ ಪತ್ರಕರ್ತೆಯ ಅಪಹರಣವನ್ನು ಇರಾಕ್‌ನ ಆಂತರಿಕ ಸಚಿವಾಲಯವು ದೃಢಪಡಿಸಿರುವುದಾಗಿ ತಿಳಿದುಬಂದಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಅಪಹರಣಕಾರರನ್ನು ಬೆನ್ನಟ್ಟಿದ್ದು, ಈ ಕಾರ್ಯಾಚರಣೆಯ ವೇಳೆ ಅಪಹರಣಕಾರರ ವಾಹನ ಪಲ್ಟಿಯಾಗಿದ್ದು, ಒಬ್ಬ ಶಂಕಿತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಶೆಲ್ಲಿ ಕಿಟಲ್ಸನ್ ಇರುವ ಸ್ಥಳ ಮತ್ತು ಸ್ಥಿತಿಯ ಬಗ್ಗೆ ಇನ್ನೂ ಯಾವುದೇ ಸುಳಿವು ಲಭ್ಯವಾಗಿಲ್ಲ.
ಯಾರು ಈ ಶೆಲ್ಲಿ ಕಿಟಲ್ಸನ್..?
ಶೆಲ್ಲಿ ಕಿಟಲ್ಸನ್ ಇರಾಕ್, ಅಫ್ಘಾನಿಸ್ತಾನ ಸೇರಿದಂತೆ ಮಧ್ಯಪ್ರಾಚ್ಯದ ಅತ್ಯಂತ ಅಸ್ಥಿರ ಮತ್ತು ಸಂಘರ್ಷಪೂರಿತ ಪ್ರದೇಶಗಳಿಂದ ವರದಿ ಮಾಡುವಲ್ಲಿ ದಶಕಗಳ ಅನುಭವ ಹೊಂದಿದ್ದು, ಪ್ರಸ್ತುತ ನಡೆಯುತ್ತಿರುವ ಇರಾನ್ ಮೇಲಿನ ಯುಎಸ್-ಇಸ್ರೇಲ್ ಯುದ್ಧದ ಪ್ರಭಾವವನ್ನು ಸ್ಥಳೀಯ ಮಟ್ಟದಲ್ಲಿ ವರದಿ ಮಾಡಲು ಅವರು ಇರಾಕ್‌ಗೆ ಆಗಮಿಸಿದ್ದರು. ಅಲ್ ಮಾನಿಟರ್, ಫಾರಿನ್ ಪಾಲಿಸಿ, ಬಿಬಿಸಿ ಮತ್ತು ಪೊಲಿಟಿಕೊ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳೊಂದಿಗೆ ಕೆಲಸ ಮಾಡಿರುವ ಕಿಟಲ್ಸನ್, ಈ ಹಿಂದೆ ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದ ಸಮಯದಲ್ಲಿ ಮುಂಚೂಣಿಯಲ್ಲಿ ನಿಂತು ವರದಿ ಮಾಡಿದ್ದರು ಎನ್ನಲಾಗಿದೆ.
ಬಾಗ್ದಾದ್‌ನಲ್ಲಿ ಪತ್ರಕರ್ತರು ಮತ್ತು ಸಂಶೋಧಕರ ಅಪಹರಣ ನಡೆಯುತ್ತಿರುವುದು ಇದೇ ಮೊದಲೆನಲ್ಲ, 2023ರ ಮಾರ್ಚ್‌ನಲ್ಲಿ ರಷ್ಯಾ-ಇಸ್ರೇಲಿ ಸಂಶೋಧಕಿ ಎಲಿಜಬೆತ್ ಟ್ಸುರ್ಕೋವ್ರನ್ನು ಇದೇ ರೀತಿ ಕೆಫೆಯೊಂದರಿಂದ ಅಪಹರಿಸಲಾಗಿತ್ತು. ಅವರನ್ನು ಇರಾಕಿ ಪರ ಮಿಲಿಟಿಯಾ ಕಟೈಬ್ ಹೆಜ್ಬೊಲ್ಲಾ ಸುಮಾರು 903 ದಿನಗಳ ಕಾಲ ತನ್ನ ವಶದಲ್ಲಿರಿಸಿಕೊಂಡು ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು. ಈಗ ಶೆಲ್ಲಿ ಕಿಟಲ್ಸನ್ ಅವರ ಅಪಹರಣವು ಪತ್ರಕರ್ತರ ಸುರಕ್ಷತೆಯ ಬಗ್ಗೆ ಮತ್ತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದ್ದು, ಸದ್ಯ ಇರಾಕ್ ಭದ್ರತಾ ಪಡೆಗಳು ಪತ್ರಕರ್ತೆಯನ್ನು ಪತ್ತೆಹಚ್ಚಲು ತೀವ್ರ ಶೋಧ ನಡೆಸುತ್ತಿವೆ ಎಂದು ತಿಳಿದುಬಂದಿದೆ(ಏಜೆನ್ಸೀಸ್).