ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ಇರಾನ್ ಮೇಲೆ ದೊಡ್ಡ ದಾಳಿಗೆ ಅಮೆರಿಕ ಪಣ
- ಇನ್ನೂ ಮೂರೇ ದಿನಗಳಲ್ಲಿ ಯುಎಸ್ ಸೇನಾ ಮಿಲಿಟರಿಯಿಂದ ಕಾರ್ಯಾಚರಣೆ
- ಇರಾನ್‌ನ ವಿದ್ಯುತ್ ಸ್ಥಾವರ, ಬೃಹತ್ ಸೇತುವೆಗಳೇ ಟಾರ್ಗೆಟ್
ವಾಷಿಂಗ್ಟನ್: ಶಾಂತಿ ಒಪ್ಪಂದವನ್ನು ಮೂಲೆಗೆಸೆದಿರುವ ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ರಾಷ್ಟ್ರಗಳ ಮಧ್ಯೆ ದಾಳಿಗೆ ಪ್ರತಿದಾಳಿ ನಡೆಯುತ್ತಿದ್ದು, ಮುಂದಿನ ವಾರ ಇರಾನೀನ ಬೃಹತ್ ಸೇತುವೆಗಳು, ಸ್ಥಾವರಗಳನ್ನು ಉಡೀಸ್ ಮಾಡಲು ಬೃಹತ್ ಮಟ್ಟದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಪಣತೊಟ್ಟಿದೆ.
ಬುಧವಾರ (ಜು.15) ತಡರಾತ್ರಿ ಶ್ವೇತಭವನದಲ್ಲಿ ಅತ್ಯಂತ ಉನ್ನತ ಮಟ್ಟದ ಸಭೆ ಕೈಗೊಂಡ ಡೊನಾಲ್ಡ್ ಟ್ರಂಪ್, ಹೊರ್ಮುಜ್ ಜಲಸಂಧಿಯ ಆಚೆಗೂ ಇರಾನ್ ಮೇಲಿನ ದಾಳಿಯನ್ನು ವಿಸ್ತರಿಸಲು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಇರಾನ್‌ನ ದಕ್ಷಿಣ ಕರಾವಳಿಯುದ್ದಕ್ಕೂ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ನೆಟ್‌ವರ್ಕ್, ಹಡಗು ವಿರೋಧಿ ಕ್ಷಿಪಣಿ ನೆಲೆಗಳು ಮತ್ತು ಡ್ರೋನ್ ಉಡಾವಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಸೇನಾ ಪಡೆ ಸತತ ನಾಲ್ಕನೇ ದಿನವೂ ಭೀಕರ ವೈಮಾನಿಕ ದಾಳಿ ನಡೆಸಿದೆ.
ಮುಂದಿನ ವಾರ ಎಲ್ಲವೂ ಧೂಳೀಪಟ
ಫಾಕ್ಸ್ ನ್ಯೂಸ್ ಜತೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ಸಂಧಾನಕ್ಕೆ ಒಪ್ಪದಿದ್ದರೆ ಮುಂದಿನ ವಾರ ಭೀಕರ ಯುದ್ಧ ಸಂಭವಿಸುವುದು ಖಚಿತ. ಇನ್ನೂ ಮೂರು ದಿನಗಳಲ್ಲಿ ಅಮೆರಿಕದ ಮಿಲಿಟರಿ ಇರಾನ್ ಮೇಲೆ ದೊಡ್ಡ ದಾಳಿಯನ್ನು ನಡೆಸಲಿದೆ. ಈ ಸಮಯದಲ್ಲಿ, ಇರಾನ್‌ನ ಎಲ್ಲ ವಿದ್ಯುತ್ ಸ್ಥಾವರಗಳು ಮತ್ತು ಬೃಹತ್ ಸೇತುವೆಗಳನ್ನು ಚಿಂದಿ ಉಡಾಯಿಸಲಿದ್ದೇವೆ ಎಂದು ಟ್ರಂಪ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ,(ಏಜೆನ್ಸೀಸ್).