ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ(US Iran War 2026) ಮಿತಿಮೀರಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದಾರೆ. "ಇಡೀ ಇರಾನ್ ದೇಶವನ್ನು ಕೇವಲ ಒಂದೇ ರಾತ್ರಿಯಲ್ಲಿ ಭೂಪಟದಿಂದ ಅಳಿಸಿಹಾಕುವ ಶಕ್ತಿ ಅಮೆರಿಕಕ್ಕಿದೆ. ಆ ರಾತ್ರಿ ನಾಳೆಯೇ (ಮಂಗಳವಾರ) ಆಗಿರಬಹುದು" ಎಂದು ಟ್ರಂಪ್ ಗುಡುಗಿದ್ದಾರೆ. ಕದನ ವಿರಾಮದ ಗಡುವು ಮುಗಿಯುವ ಮುನ್ನವೇ ಟ್ರಂಪ್ ಈ ಹೇಳಿಕೆ ನೀಡಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ ಸೃಷ್ಟಿಸಿದೆ.
ಟ್ರಂಪ್ ನೀಡಿದ ಭೀಕರ 'ಡೆಡ್‌ಲೈನ್'
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ಅಮೆರಿಕದ ಬಳಿ ಹಲವಾರು ಕಠಿಣ ಆಯ್ಕೆಗಳಿವೆ ಎಂದು ತಿಳಿಸಿದರು. ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಅಸಭ್ಯ ಪದಗಳನ್ನು ಬಳಸಿ ಇರಾನ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, "ಮಂಗಳವಾರ ರಾತ್ರಿ 8 ಗಂಟೆ (ಅಮೆರಿಕ ಕಾಲಮಾನ)" ಅಂತಿಮ ಗಡುವು ಎಂದು ಘೋಷಿಸಿದ್ದಾರೆ. "ಹಾರ್ಮುಜ್ ಜಲಸಂಧಿಯನ್ನು ಕೂಡಲೇ ಮುಕ್ತಗೊಳಿಸಿ, ಇಲ್ಲದಿದ್ದರೆ ನೀವು ನರಕದಲ್ಲಿ ಬದುಕಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಪವರ್ ಪ್ಲಾಂಟ್ ಮತ್ತು ಸೇತುವೆಗಳ ಮೇಲೆ ಕಣ್ಣು
ಮಂಗಳವಾರವನ್ನು 'ಪವರ್ ಪ್ಲಾಂಟ್ ಮತ್ತು ಬ್ರಿಡ್ಜ್ ಡೇ' ಎಂದು ಟ್ರಂಪ್ ಕರೆದಿದ್ದಾರೆ. ಅಂದರೆ, ಇರಾನ್ ತನ್ನ ಹಠಮಾರಿ ಧೋರಣೆ ಮುಂದುವರಿಸಿದರೆ ಆ ದೇಶದ ವಿದ್ಯುತ್ ಸ್ಥಾವರಗಳು, ಸೇತುವೆಗಳು ಮತ್ತು ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡುವುದಾಗಿ ಅವರು ಬೆದರಿಕೆ ಹಾಕಿದ್ದಾರೆ. "ಅವರ ಬಳಿ ಸೇತುವೆಗಳೂ ಇರುವುದಿಲ್ಲ, ವಿದ್ಯುತ್ ಕೂಡ ಇರುವುದಿಲ್ಲ. ಇದಕ್ಕಿಂತಲೂ ಭೀಕರವಾದ ಶಿಕ್ಷೆ ಅವರಿಗೆ ಕಾದಿದೆ" ಎಂದು ಅವರು ಹೇಳಿದ್ದಾರೆ.
"ಇರಾನ್ ಜನರಿಗೆ ಬಾಂಬ್ ಸದ್ದು ಕೇಳುವ ಆಸೆ ಇದೆ!"
ವಿಚಿತ್ರವೆಂಬಂತೆ, ಇರಾನ್ ಜನತೆ ತಮ್ಮ ಸರ್ಕಾರದ ವಿರುದ್ಧ ತಿರುಗಿಬೀಳಲು ಸಿದ್ಧರಿದ್ದಾರೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. "ಇರಾನ್ ಜನರಿಗೆ ಬಾಂಬ್ ಸದ್ದು ಕೇಳಬೇಕಿದೆ, ಏಕೆಂದರೆ ಅವರಿಗೆ ಸ್ವಾತಂತ್ರ್ಯ ಬೇಕು. ಬಾಂಬ್ ದಾಳಿ ನಿಂತಾಗ ಅಲ್ಲಿನ ಜನರು ಹೆಚ್ಚು ಅತೃಪ್ತರಾಗುತ್ತಾರೆ ಎಂಬ ಮಾಹಿತಿ ನನಗಿದೆ. ನಾವು ಅವರಿಗಾಗಿ, ಅವರ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೇವೆ" ಎಂಬ ವಿವಾದಾತ್ಮಕ ಹೇಳಿಕೆಯನ್ನು ಟ್ರಂಪ್ ನೀಡಿದ್ದಾರೆ. ಅಲ್ಲದೆ, ಇರಾನ್‌ನ ತೈಲ ಸಂಪತ್ತನ್ನು ವಶಪಡಿಸಿಕೊಳ್ಳುವ ಇಚ್ಛೆಯನ್ನೂ ಅವರು ಹೊರಹಾಕಿದ್ದಾರೆ.
ಕದನ ವಿರಾಮ ಪ್ರಸ್ತಾವನೆ ತಿರಸ್ಕಾರ
ಮಧ್ಯಸ್ಥಿಕೆ ವಹಿಸಿರುವ ರಾಷ್ಟ್ರಗಳು ನೀಡಿದ್ದ 45 ದಿನಗಳ ಕದನ ವಿರಾಮದ ಪ್ರಸ್ತಾವನೆಯನ್ನು ಟ್ರಂಪ್ "ಸಾಕಷ್ಟು ಉತ್ತಮವಾಗಿಲ್ಲ" ಎಂದು ತಳ್ಳಿಹಾಕಿದ್ದಾರೆ. ಇತ್ತ ಇರಾನ್ ಕೂಡ ತಾತ್ಕಾಲಿಕ ಶಾಂತಿಯನ್ನು ಒಪ್ಪುತ್ತಿಲ್ಲ. ಇದರಿಂದಾಗಿ ಸಂಧಾನದ ಹಾದಿ ಮುಚ್ಚಿಹೋಗಿದ್ದು, ಮಂಗಳವಾರ ರಾತ್ರಿಯ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ,(ಏಜೆನ್ಸೀಸ್).