ಇಸ್ಲಾಮಾಬಾದ್: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಕೊನೆಗಾಣಿಸಲು ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆದ ಅಮೆರಿಕ-ಇರಾನ್ ನಡುವಿನ ಮಾತುಕತೆ ವಿಫಲವಾಗಿದ್ದು, ಅಮೆರಿಕದ ಅಸಮಂಜಸ ಬೇಡಿಕೆಗಳೇ ಮಾತುಕತೆ ವಿಫಲತೆಗೆ ಕಾರಣ ಎಂದು ಭಾನುವಾರ(ಏ. 12) ಇರಾನ್(Iran) ಹೇಳಿದೆ.
ಈ ಕುರಿತು ಟೆಲಿಗ್ರಾಮ್ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಇರಾನ್ ರಾಜ್ಯ ಪ್ರಸಾರಕ IRIB, ಇರಾನ್ ಜನರ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಇರಾನ್ ನಿಯೋಗವು 21 ಗಂಟೆಗಳ ಕಾಲ ನಿರಂತರವಾಗಿ ಮತ್ತು ತೀವ್ರವಾಗಿ ಮಾತುಕತೆ ನಡೆಸಿತು. ಇರಾನ್ ನಿಯೋಗದ ವಿವಿಧ ಉಪಕ್ರಮಗಳ ಹೊರತಾಗಿಯೂ, ಅಮೆರಿಕದ ಕಡೆಯ ಅಸಮಂಜಸ ಬೇಡಿಕೆಗಳು ಮಾತುಕತೆಯ ಪ್ರಗತಿಯನ್ನು ತಡೆಯಿತು. ಹೀಗಾಗಿ ಶಾಂತಿ ಮಾತುಕತೆ ವಿಫಲವಾಯಿತು ಎಂದು ತಿಳಿಸಿದೆ.
ಅಮೆರಿಕ ಇಟ್ಟ ಪ್ರಮುಖ ಷರತ್ತುಗಳೇನು?
- ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂಬ ಬಗ್ಗೆ ಲಿಖಿತ ಮತ್ತು ದೃಢವಾದ ಭರವಸೆ ನೀಡಬೇಕು.
- ಪರಮಾಣು ಬಾಂಬ್ ತಯಾರಿಕೆಗೆ ಬಳಸಬಹುದಾದ ಸಾಧನಗಳ ಸಂಶೋಧನೆಯನ್ನು ನಿಲ್ಲಿಸಬೇಕು.
- ಇರಾನಿನ ಪರಮಾಣು ಕೇಂದ್ರಗಳನ್ನು ಅಂತರಾಷ್ಟ್ರೀಯ ತಂಡಗಳು ಮುಕ್ತವಾಗಿ ತಪಾಸಣೆ ನಡೆಸಲು ಅನುಮತಿ ನೀಡಬೇಕು.
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದೇನು?
ಅಮೆರಿಕದ ನಿಯೋಗದ ನೇತೃತ್ವ ವಹಿಸಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ನಾವು ಯಾವುದೇ ಒಪ್ಪಂದಕ್ಕೆ ಬರದೇ ಇರುವುದು ಕೆಟ್ಟ ಸುದ್ದಿ. ಅದು ಅಮೆರಿಕಾಗೆ ಅನ್ನುವುದಕ್ಕಿಂತ ಇರಾನ್‌ಗೆ ಕೆಟ್ಟ ಸುದ್ದಿ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ನಾವು ಒಪ್ಪಂದಕ್ಕೆ ಬರದ ಕಾರಣ ಅಮೆರಿಕಕ್ಕೆ ಹಿಂತಿರುಗುತ್ತೇವೆ. ಅವರು ನಮ್ಮ ಷರತ್ತುಗಳನ್ನು ಒಪ್ಪದಿರಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಒಂದು ದಿನದ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಅವರು ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳದಿರಲು ನಿರ್ಧರಿಸಿದ್ದಾರೆ. ನಮ್ಮ ಅಧ್ಯಕ್ಷರು ನಾವು ಉತ್ತಮ ನಂಬಿಕೆಯಿಂದ ಬಂದು ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದ್ದರು. ಅದರೆ ದುರದೃಷ್ಟವಶಾತ್, ಯಾವುದೇ ಪ್ರಗತಿಯಾಗಲಿಲ್ಲ ಎಂದಿದ್ದಾರೆ.
ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಹಾಗೂ ಟ್ರಂಪ್ ಅಳಿಯ ಜೇರೆಡ್ ಕುಶ್ನರ್ ಅಮೆರಿಕದ ನಿಯೋಗವನ್ನು ಮುನ್ನಡೆಸಿದರೆ, ಇರಾನ್ ನಿಯೋಗದ ನೇತೃತ್ವವನ್ನು ಸಂಸದೀಯ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ವಹಿಸಿದ್ದರು (ಏಜೆನ್ಸೀಸ್).