ಓಮನ್‌ನಲ್ಲಿ ಅಮೆರಿಕ-ಇರಾನ್ ಪರಮಾಣು ಮಾತುಕತೆ ಫಿಕ್ಸ್; ಖಮೇನಿಗೆ ಟ್ರಂಪ್​ ಕೊಟ್ಟ ಎಚ್ಚರಿಕೆ ಏನು..?  
ವಿದೇಶ

ಓಮನ್‌ನಲ್ಲಿ ಅಮೆರಿಕ-ಇರಾನ್ ಪರಮಾಣು ಮಾತುಕತೆ ಫಿಕ್ಸ್; ಖಮೇನಿಗೆ ಟ್ರಂಪ್​ ಕೊಟ್ಟ ಎಚ್ಚರಿಕೆ ಏನು..? US-Iran nuclear talks

ಮಸ್ಕತ್: ಜಾಗತಿಕ ರಾಜಕೀಯದ ದೃಷ್ಟಿಯಿಂದ ಅತ್ಯಂತ ಕುತೂಹಲ ಮೂಡಿಸಿರುವ ಅಮೆರಿಕ ಮತ್ತು ಇರಾನ್(US-Iran nuclear talks) ನಡುವಿನ ಪರಮಾಣು ಮಾತುಕತೆ ಫೆಬ್ರವರಿ 6ರ ಶುಕ್ರವಾರದಂದು ಓಮನ್‌ನ ರಾಜಧಾನಿ ಮಸ್ಕತ್‌ನಲ್ಲಿ ನಡೆಯಲಿದೆ. ಕಳೆದ ಕೆಲವು ತಿಂಗಳುಗಳಿಂದ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದ್ದರೂ, ಕೊನೆಯ ಕ್ಷಣದಲ್ಲಿ ರಾಜತಾಂತ್ರಿಕ ಮಾರ್ಗವನ್ನು ಆಯ್ದುಕೊಳ್ಳಲಾಗಿದೆ.

ಟರ್ಕಿಯಿಂದ ಓಮನ್‌ಗೆ ಬದಲಾದ ವೇದಿಕೆ: ಇರಾನ್ ಹಠವೇನು..?

ಈ ಮೊದಲು ಈ ಮಾತುಕತೆಗಳು ಟರ್ಕಿಯಲ್ಲಿ ನಡೆಯಬೇಕಿತ್ತು. ಆದರೆ, ಇರಾನ್ ಸರ್ಕಾರವು ವೇದಿಕೆಯನ್ನು ಓಮನ್‌ಗೆ ಬದಲಾಯಿಸುವಂತೆ ಒತ್ತಾಯಿಸಿತ್ತು. ಮೂಲಗಳ ಪ್ರಕಾರ, ಇರಾನ್ ಈ ಚರ್ಚೆಯನ್ನು ಕೇವಲ ತನ್ನ ಪರಮಾಣು ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸಲು ಬಯಸಿದೆ. ಆದರೆ, ಅಮೆರಿಕವು ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಪ್ರಾದೇಶಿಕ ಉಗ್ರ ಗುಂಪುಗಳಿಗೆ ನೀಡುತ್ತಿರುವ ಬೆಂಬಲದ ಬಗ್ಗೆಯೂ ಚರ್ಚಿಸಲು ಪಟ್ಟು ಹಿಡಿದಿದೆ.
ಡೊನಾಲ್ಡ್ ಟ್ರಂಪ್ ನೇರ ಎಚ್ಚರಿಕೆ: ಖಮೇನಿ ಚಿಂತಿತರಾಗಲೇಬೇಕು
ಈ ಮಾತುಕತೆಯ ಮುನ್ನಾದಿನದಂದು ಎನ್‌ಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅತ್ಯಂತ ಉಗ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಅವರು ಈ ಮಾತುಕತೆ ಬಗ್ಗೆ ಚಿಂತಿತರಾಗಿರಬೇಕೇ ಎಂಬ ಪ್ರಶ್ನೆಗೆ, ಖಂಡಿತವಾಗಿಯೂ ಅವರು ತೀರಾ ಚಿಂತಿತರಾಗಲೇಬೇಕು ಎಂದು ಉತ್ತರಿಸಿದ್ದಾರೆ. ಇರಾನ್ ಮೇಲೆ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಟ್ರಂಪ್ ಈಗಾಗಲೇ ಹಲವು ಬಾರಿ ತೆರೆದಿಟ್ಟಿದ್ದಾರೆ.

ಶ್ವೇತಭವನದ ಸಂಶಯ ಮತ್ತು ಪ್ರಾದೇಶಿಕ ಒತ್ತಡ

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಈ ಮಾತುಕತೆಯಿಂದ ದೊಡ್ಡ ಫಲಿತಾಂಶ ಬರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಆದರೂ, ಅರಬ್ ರಾಷ್ಟ್ರಗಳ ನಾಯಕರ ಮನವಿಯ ಮೇರೆಗೆ ಅಮೆರಿಕ ಈ ಮಾತುಕತೆಗೆ ಒಪ್ಪಿಕೊಂಡಿದೆ. ಇರಾನ್‌ನ ರಾಜಕೀಯ ವ್ಯವಸ್ಥೆಯು ಅತ್ಯಂತ ವಿಚಿತ್ರವಾಗಿದೆ, ಅಲ್ಲಿ ಅಧಿಕಾರ ಹೊಂದಿರುವವರ ಜೊತೆ ನೇರವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ವ್ಯಾನ್ಸ್ ಟೀಕಿಸಿದ್ದಾರೆ,(ಏಜೆನ್ಸೀಸ್).