ಸಿರಿಯಾದಲ್ಲಿನ ಇಸ್ಲಾಮಿಕ್ ಪ್ರದೇಶಗಳ ಮೇಲೆ ಅಮೆರಿಕ ವೈಮಾನಿಕ ದಾಳಿ
- ಕಳೆದ ವಾರ ನಡೆಸಿದ ಪಾಲ್ಮಿರಾ ದಾಳಿಗೆ ಪ್ರತೀಕಾರ
- ಸಿರಿಯಾದಲ್ಲಿ ಅಮೆರಿಕದ ಜೆಟ್‌ಗಳಿಂದ ದಾಳಿ
- ಐಸಿಸ್ ಉಗ್ರರನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ
ಯುಎಸ್: ಕಳೆದ ವಾರ ತಮ್ಮ ದೇಶದ ಇಬ್ಬರು ಸೈನಿಕರನ್ನು ಬಲಿ ಪಡೆದ ಕಾರಣ, ಅದಕ್ಕೆ ಪ್ರತೀಕಾರವಾಗಿ ಇಂದು ಸಿರಿಯಾದಲ್ಲಿ ಐಸಿಸ್ ಉಗ್ರರನ್ನು ಗುರಿಯಾಗಿಸಿಕೊಂಡು ಅಮೆರಿಕ ವಾಯುದಾಳಿ ನಡೆಸಿದೆ.
ಸೇಡಿಗೆ ಕಾರಣವೇನು?
ಸಿರಿಯಾದಲ್ಲಿ ಇಸ್ಲಾಮಿಕ್ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿಕೊಂಡಿರುವ ಟ್ರಂಪ್ ರಾಷ್ಟ್ರ, ತನ್ನ ಫೈಟರ್ ಜೆಟ್‌ಗಳ ಮೂಲಕ ವೈಮಾನಿಕ ದಾಳಿಯನ್ನು ಪ್ರಾರಂಭಿಸಿವೆ. ಸಿರಿಯಾದಾದ್ಯಂತ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ಕೈಗೊಂಡಿದೆ. ಡಿ.13ರಂದು ಪಾಲ್ಮಿರಾದಲ್ಲಿ ಐಸಿಸ್ ಉಗ್ರರು ಇಬ್ಬರು ಅಮೆರಿಕದ ಸೇನಾ ಸೈನಿಕರು ಮತ್ತು ನಾಗರಿಕರನ್ನು ಕೊಂದ ಹಿನ್ನೆಲೆ ಯುಎಸ್ ಈ ಸೇಡಿಗೆ ಮುಂದಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಸೇನೆಯು ಸಿರಿಯಾದಲ್ಲಿ ವಾಯುದಾಳಿ ನಡೆಸಿದೆ. ಐಸಿಸ್ ಉಗ್ರರು ಮತ್ತು ಅವರ ಮೂಲಸೌಕರ್ಯಗಳ ಮೇಲೆ ಅಮೆರಿಕದ ಜೆಟ್‌ಗಳು ದಾಳಿ ನಡೆಸಿವೆ ಎಂದು ವರದಿಗಳು ಉಲ್ಲೇಖಿಸಿವೆ. ಶಂಕಿತ ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳು, ಪೂರೈಕೆ ಕೇಂದ್ರಗಳು ಮತ್ತು ಕಾರ್ಯಾಚರಣೆಯ ಕಟ್ಟಡಗಳು ಸೇರಿ ಹಲವಾರು ಸ್ಥಳಗಳನ್ನು ಸಿರಿಯಾದಾದ್ಯಂತ ಗುರಿಯಾಗಿಸಿಕೊಂಡಿದ್ದೇವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಸಿರಿಯಾದಲ್ಲಿ ಐಸಿಸ್ ನಮ್ಮ ದೇಶಭಕ್ತರನ್ನು ಕ್ರೂರವಾಗಿ ಹತ್ಯೆ ಮಾಡಿದೆ. ಈ ಕೊಲೆಗಾರ ಉಗ್ರರ ವಿರುದ್ಧ ಅಮೆರಿಕ ಗಟ್ಟಿಯಾದ ಸೇಡು ತೀರಿಸಿಕೊಳ್ಳಲಿದೆ. ಸಿರಿಯಾದಲ್ಲಿರುವ ಐಸಿಸ್ ಭದ್ರಕೋಟೆಗಳ ಮೇಲೆ ನಾವು ದಾಳಿ ಮಾಡುತ್ತಿದ್ದೇವೆ. ಈ ರಕ್ತಸಿಕ್ತ ಸ್ಥಳದಲ್ಲಿ ಅನೇಕ ಸಮಸ್ಯೆಗಳಿವೆ. ಐಸಿಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾದರೆ, ಉಜ್ವಲ ಭವಿಷ್ಯ ಖಚಿತ. ಅಮೆರಿಕನ್ನರ ಮೇಲೆ ದಾಳಿ ಮಾಡುವಷ್ಟು ದುಷ್ಟರಾಗಿರುವ ಎಲ್ಲಾ ಭಯೋತ್ಪಾದಕರಿಗೆ ಇದು ಖಡಕ್ ಎಚ್ಚರಿಕೆ. ನೀವು ಯಾವುದೇ ರೀತಿಯಲ್ಲಿ ಅಮೆರಿಕ ಮೇಲೆ ದಾಳಿ ಮಾಡಿದರೆ ಅಥವಾ ಬೆದರಿಕೆಯೊಡ್ಡಿದರೆ, ನೀವು ಹಿಂದೆಂದೂ ಕಾಣದ ರೀತಿಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ನಲ್ಲಿ ಉಗ್ರರ ಪಡೆಗೆ ಎಚ್ಚರಿಕೆ ರವಾನಿಸಿದ್ದಾರೆ.
"ಡಿ.13ರಂದು ಸಿರಿಯಾದ ಪಾಲ್ಮಿರಾದಲ್ಲಿ ಯುಎಸ್ ಪಡೆಗಳ ಮೇಲೆ ಐಸಿಸಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಐಸಿಸಿ ನೆಲೆಗಳನ್ನು ಛಿದ್ರಗೊಳಿಸಲು ಅಮೆರಿಕ ಪಡೆಗಳು ಈಗ ಸಿರಿಯಾದಲ್ಲಿ ಆಪರೇಷನ್ ಹಾಕೈ ಸ್ಟ್ರೈಕ್ ಅನ್ನು ಪ್ರಾರಂಭಿಸಿವೆ" ಎಂದು ಯುಎಸ್ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ,(ಏಜೆನ್ಸೀಸ್).