ಮುಖದ ಮೇಲಿರೋದು ಕಣ್ಣುಗಳೇ ಅಲ್ಲ... ಸಮುದ್ರದ ಆಳದಲ್ಲಿರೋ ಈ 'ಭೂತದ ಮೀನಿನ' ರಹಸ್ಯ ಕೇಳಿದ್ರೆ ಬೆರಗಾಗ್ತೀರಾ! Unknown Facts
- ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಆಳ ಸಮುದ್ರದ ಹಲವು ವಿಸ್ಮಯಗಳನ್ನು ಬೇಧಿಸಲು ಇಂದಿಗೂ ಸಾಧ್ಯವಾಗಿಲ್ಲ
- ಕಡುಗತ್ತಲಿನ ಒಡಲಿನಲ್ಲಿ ಬದುಕುವ ವಿಲಕ್ಷಣ ಜೀವಿಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸುವುದೇ 'ಬ್ಯಾರೆಲ್ ಐ ಫಿಶ್'
- ಭೂತದ ಮೀನು ಎಂದೇ ಕರೆಯಲಾಗುವ ಈ ವಿಚಿತ್ರ ಜೀವಿಯ ಪ್ರಮುಖ ಆಕರ್ಷಣೆಯೆಂದರೆ ಅದರ ತಲೆಯ ಭಾಗ
- ತಲೆಯ ಮೇಲ್ಭಾಗದಲ್ಲಿ ಹಸಿರು ಬಣ್ಣದ ಕಣ್ಣುಗಳಿರುವುದು ಪ್ರಕೃತಿಯ ಮತ್ತೊಂದು ಸೌಂದರ್ಯ ಹಾಗೂ ವಿಸ್ಮಯಕ್ಕೆ ಸಾಕ್ಷಿ
Unknown Facts : ಪ್ರಸ್ತುತ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಅದೃಶ್ಯ ರಹಸ್ಯಗಳ ನಿಗೂಢ ಲೋಕವಾಗಿರುವ ಆಳ ಸಮುದ್ರದ ಹಲವು ವಿಸ್ಮಯಗಳನ್ನು ಬೇಧಿಸಲು ಇಂದಿಗೂ ಮಾನವನಿಗೆ ಸಾಧ್ಯವಾಗಿಲ್ಲ. ಈ ಕಡುಗತ್ತಲಿನ ಒಡಲಿನಲ್ಲಿ ಬದುಕುವ ವಿಲಕ್ಷಣ ಜೀವಿಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸುವುದೇ 'ಬ್ಯಾರೆಲ್ ಐ ಫಿಶ್' (Barrel Eye Fish).
ಹೌದು, 'ಸ್ಪೂಕ್ ಫಿಶ್' (ಭೂತದ ಮೀನು) ಎಂದೇ ಕರೆಯಲಾಗುವ ಈ ವಿಚಿತ್ರ ಜೀವಿಯ ಪ್ರಮುಖ ಆಕರ್ಷಣೆಯೆಂದರೆ, ಇದರ ತಲೆಯ ಮೇಲ್ಭಾಗವು ಗಾಜಿನಂತೆ ಸಂಪೂರ್ಣ ಪಾರದರ್ಶಕ (Transparent) ಆಗಿರುತ್ತದೆ! ಅಷ್ಟೇ ಅಲ್ಲ, ಆ ಪಾರದರ್ಶಕ ಗುಮ್ಮಟದ ಒಳಗಡೆಯೇ ಇದರ ಬ್ಯಾರೆಲ್ ಆಕಾರದ ಹಸಿರು ಬಣ್ಣದ ಕಣ್ಣುಗಳಿರುವುದು ಪ್ರಕೃತಿಯ ಮತ್ತೊಂದು ಸೌಂದರ್ಯ ಮತ್ತು ವಿಸ್ಮಯಕ್ಕೆ ಸಾಕ್ಷಿಯಾಗಿದೆ.
ಈ ಮೀನಿನ ತಲೆಯ ಮುಂಭಾಗವು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಅದರ ಒಳಗಡೆ ದ್ರವದಿಂದ ತುಂಬಿದ ವಿಶಿಷ್ಟವಾದ ಗುಮ್ಮಟದಂತಹ ರಚನೆಯಿರುತ್ತದೆ. ಈ ಪಾರದರ್ಶಕ ಭಾಗದ ಮೂಲಕವೇ ಅದರ ಕಣ್ಣುಗಳು ಮತ್ತು ಇತರ ಕೆಲವು ಆಂತರಿಕ ಅಂಗಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಅತ್ಯಂತ ವಿಶೇಷವೆಂದರೆ, ಇವು ತಮ್ಮ ಕಣ್ಣುಗಳನ್ನು ನೇರವಾಗಿ ಹಾಗೂ ಮೇಲ್ಮುಖವಾಗಿ ತಿರುಗಿಸಿ ನೋಡಬಲ್ಲವು. ಈ ಅದ್ಭುತ ದೃಷ್ಟಿ ಸಾಮರ್ಥ್ಯವು ಕಡುಗತ್ತಲಿನಲ್ಲಿ ತಮಗೆ ಬೇಕಾದ ಆಹಾರವನ್ನು ಸುಲಭವಾಗಿ ಹುಡುಕಲು ನೆರವಾಗುತ್ತದೆ. ಕೇವಲ 15 ಸೆಂಟಿಮೀಟರ್ (ಆರು ಇಂಚು) ಉದ್ದವಿರುವ ಇವು ಗಾತ್ರದಲ್ಲಿ ತೀರಾ ಚಿಕ್ಕದಾಗಿರುತ್ತವೆ.
ವಾಸಸ್ಥಾನ ಮತ್ತು ಆಹಾರ
ಬ್ಯಾರೆಲ್ ಐ ಮೀನುಗಳು ಪ್ರಮುಖವಾಗಿ ಅಟ್ಲಾಂಟಿಕ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಅತ್ಯಂತ ಆಳವಾದ ಪ್ರದೇಶಗಳಲ್ಲಿ ವಾಸಿಸುತ್ತವೆ. ಸಮುದ್ರದ ಮೇಲ್ಮೈಯಿಂದ ಸುಮಾರು 600 ರಿಂದ 800 ಮೀಟರ್ (2000 - 2600 ಅಡಿ) ಆಳದಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ.
ಇಷ್ಟು ಆಳದ ಪ್ರದೇಶಕ್ಕೆ ಸೂರ್ಯನ ಬೆಳಕು ಕಿಂಚಿತ್ತೂ ತಲುಪದ ಕಾರಣ ಅಲ್ಲಿ ಸಂಪೂರ್ಣ ಕತ್ತಲಿರುತ್ತದೆ. ಇಂತಹ ಪರಿಸರದಲ್ಲೇ ಬದುಕುವ ಇವು, ಸಣ್ಣ ಸಣ್ಣ ಮೀನುಗಳು ಮತ್ತು ಇತರ ಸೂಕ್ಷ್ಮ ಸಮುದ್ರ ಜೀವಿಗಳನ್ನು ಬೇಟೆಯಾಡಿ ತಿನ್ನುತ್ತವೆ.
ಸುಳ್ಳು ಕಣ್ಣುಗಳ ರಹಸ್ಯ
ಸಾಮಾನ್ಯವಾಗಿ ಈ ಮೀನಿನ ಮುಖದ ಮುಂಭಾಗವನ್ನು ನೋಡಿದಾಗ ಕಣ್ಣುಗಳಂತೆ ಕಾಣುವ ಎರಡು ಸಣ್ಣ ರಂಧ್ರಗಳು ವಾಸ್ತವದಲ್ಲಿ ಅದರ ಕಣ್ಣುಗಳೇ ಅಲ್ಲ! ಅವು ಮನುಷ್ಯರ ಮೂಗಿನ ಹೊಳ್ಳೆಗಳಿಗೆ ಹೋಲುವಂತಹ, ವಾಸನೆ ಗ್ರಹಿಸುವ ಜ್ಞಾನೇಂದ್ರಿಯಗಳಾಗಿವೆ. ಇದರ ನಿಜವಾದ ಕಣ್ಣುಗಳು ತಲೆಯ ಪಾರದರ್ಶಕ ಗುಮ್ಮಟದ ಒಳಗಿರುವ ಹಸಿರು ಬಣ್ಣದ ಬ್ಯಾರೆಲ್ ಆಕಾರದ ಗೋಳಗಳಾಗಿವೆ. ಪ್ರಕೃತಿಯ ಈ ವಿಚಿತ್ರ ವಿನ್ಯಾಸವು ಇಂದಿಗೂ ವಿಜ್ಞಾನಿಗಳನ್ನು ಆಶ್ಚರ್ಯಚಕಿತಗೊಳಿಸುತ್ತಿದೆ.
ಸ್ಥಿರವಾಗಿ ನಿಲ್ಲುವ ಕಲೆ
ಸಮುದ್ರದ ಬಲವಾದ ನೀರಿನ ಹರಿವಿನ ಮಧ್ಯೆಯೂ ಬ್ಯಾರೆಲ್ ಐ ಮೀನುಗಳು ನೀರಿನಲ್ಲಿ ಒಂದೇ ಕಡೆ ಅಲುಗಾಡದೆ ದೀರ್ಘಕಾಲದವರೆಗೆ ಸ್ಥಿರವಾಗಿ ನಿಲ್ಲಬಲ್ಲ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿವೆ. ಇವುಗಳ ದೇಹದಲ್ಲಿರುವ ದೊಡ್ಡದಾದ ಮತ್ತು ಚಪ್ಪಟೆಯಾದ ಈಜುರೆಕ್ಕೆಗಳು ನೀರಿನ ಸೆಳತಕ್ಕೆ ಕೊಚ್ಚಿಹೋಗದಂತೆ ತಡೆಯಲು ಸಹಾಯ ಮಾಡುತ್ತವೆ. ಈ ತಂತ್ರದ ಮೂಲಕ ಇವು ಒಂದೇ ಕಡೆ ಜಾಗರೂಕತೆಯಿಂದ ಹೊಂಚು ಹಾಕಿ, ಶತ್ರುಗಳ ಕಣ್ಣಿಗೆ ಬೀಳದೆ ತನ್ನ ಬೇಟೆಯನ್ನು ಹಿಡಿಯುತ್ತವೆ, (ಏಜೆನ್ಸೀಸ್).