ಇದೇನಾದ್ರೂ ನಡೆದರೆ ಯುದ್ಧಕ್ಕೆ ಎಂಟ್ರಿ ಆಗ್ತೀವಿ: ಇರಾನ್‌ಗೆ ವಾರ್ನಿಂಗ್​ ಕೊಟ್ಟ ಉಗಾಂಡ ಸೇನಾ ಮುಖ್ಯಸ್ಥ! Middle East War  
ವಿದೇಶ

ಇದೇನಾದ್ರೂ ನಡೆದರೆ ಯುದ್ಧಕ್ಕೆ ಎಂಟ್ರಿ ಆಗ್ತೀವಿ: ಇರಾನ್‌ಗೆ ವಾರ್ನಿಂಗ್​ ಕೊಟ್ಟ ಉಗಾಂಡ ಸೇನಾ ಮುಖ್ಯಸ್ಥ! Middle East War

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಮೇಲೆ ಇಸ್ರೇಲ್​ ಹಾಗೂ ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಯುದ್ಧ ಮುಂದುವರಿದಿದೆ
  • ಯುದ್ಧ ಬಗ್ಗೆ ಉಗಾಂಡದ ಸೇನಾ ಮುಖ್ಯಸ್ಥ ಜನರಲ್ ಮುಹೂಜಿ ಕೈನೆರುಗಾಬಾರಿಂದ ಮಹತ್ವದ ಹೇಳಿಕೆ
  • ಇಸ್ರೇಲ್​ ಪರವಾಗಿ ಯುದ್ಧಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಕೆಯ ಸಂದೇಶ ರವಾನೆ
Middle East War : ಇಸ್ರೇಲ್​ ಹಾಗೂ ಅಮೆರಿಕ ಸೇರಿ ಫೆ.28ರಂದು ಇರಾನ್​ ವಿರುದ್ಧ ಶುರು ಮಾಡಿದ ಯುದ್ಧ ಅಂತ್ಯವಾಗುವ ಭರವಸೆಗಳು ಗೋಚರಿಸುತ್ತಿರುವಾಗಲೇ ಉಗಾಂಡದ ಸೇನಾ ಮುಖ್ಯಸ್ಥ ಹಾಗೂ ಅಧ್ಯಕ್ಷ ಯೊವೆರಿ ಮುಸೆವೇನಿ ಅವರ ಮಗ ಜನರಲ್ ಮುಹೂಜಿ ಕೈನೆರುಗಾಬಾ ಯುದ್ಧಕ್ಕೆ ಇಳಿಯುವ ಖಡಕ್​ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಮುಹೂಜಿ ಕೈನೆರುಗಾಬಾ, ಮದ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಕೊನೆಯಾಗಲಿ ಎಂದು ನಾವು ಕೂಡ ಬಯಸುತ್ತೇವೆ. ಈ ಯುದ್ಧದಿಂದ ಇಡೀ ವಿಶ್ವವೂ ಬಳಲಿದೆ. ಆದರೆ, ಇಸ್ರೇಲ್​ನ ನಾಶ ಮಾಡುವ ಅಥವಾ ಸೋಲಿಸುವ ಯಾವುದೇ ಪ್ರಯತ್ನಗಳು ನಡೆದಿದ್ದಲ್ಲಿ ನಾವು ಕೂಡ ಇಸ್ರೇಲ್​ ಪರವಾಗಿ ಯುದ್ಧಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಸದ್ಯ ಅಮೆರಿಕ, ಇರಾನ್​ ಮೇಲೆ ದಾಳಿಗೆ ಐದು ದಿನಗಳ ತಾತ್ಕಾಲಿಕ ವಿರಾಮವನ್ನು ಘೋಷಣೆ ಮಾಡಿದ್ದರೂ ಇಸ್ರೇಲ್​ ಮಾತ್ರ ತನ್ನ ದಾಳಿಯನ್ನು ಮುಂದುವರಿಸಿದೆ. ಇದರ ನಡುವೆ ಅಮೆರಿಕ ಮತ್ತು ಇರಾನ್​ ನಡುವೆ ಯುದ್ಧ ನಿಲ್ಲಿಸುವ ಸಂಬಂಧ ಷರತ್ತುಗಳ ಬಗ್ಗೆ ಚರ್ಚೆಯಾಗುತ್ತಿದೆ. ಶಾಂತಿ ಸ್ಥಾಪನೆಗಾಗಿ ಅಮೆರಿಕ ಮುಂದಿಟ್ಟಿದ್ದ 15 ಅಂಶಗಳ ಪ್ರಸ್ತಾವನೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಅಮೆರಿಕದ ಬೇಡಿಕೆಗಳು "ಅತಿಯಾದವು" ಎಂದು ಕರೆದಿರುವ ಇರಾನ್, ತನ್ನದೇ ಆದ 5 ಕಠಿಣ ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳನ್ನು ಒಪ್ಪುವವರೆಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಉಗಾಂಡ ಮುಖ್ಯಸ್ಥನಿಂದ ಈ ಎಚ್ಚರಿಕೆ ಸಂದೇಶ ಬಂದಿದೆ.
ಇಸ್ರೇಲ್ ರಾಷ್ಟ್ರದ ಅಸ್ತಿತ್ವದ ಹಕ್ಕನ್ನು ಪ್ರತಿಪಾದಿಸಿರುವ ಅವರು, ಒಂದು ವೇಳೆ ಇಸ್ರೇಲ್ ಅನ್ನು ಸೋಲಿಸುವ ಅಥವಾ ನಾಶಪಡಿಸುವ ಯಾವುದೇ ಪ್ರಯತ್ನ ನಡೆದರೆ ಉಗಾಂಡ ಇಸ್ರೇಲ್ ಪರವಾಗಿ ಯುದ್ಧಕ್ಕೆ ಪ್ರವೇಶಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್ ಮತ್ತು ಉಗಾಂಡ ನಡುವಿನ ಐತಿಹಾಸಿಕ ಸಂಬಂಧಗಳನ್ನು ಉಲ್ಲೇಖಿಸಿರುವ ಅವರು, ಈ ಹಿಂದೆ ಉಗಾಂಡಕ್ಕೆ ಸಂಕಷ್ಟದ ಸಮಯದಲ್ಲಿ ಇಸ್ರೇಲ್ ನೀಡಿದ್ದ ಬೆಂಬಲವನ್ನು ನೆನಪಿಸಿಕೊಂಡು ಈಗ ತಾವು ಇಸ್ರೇಲ್ ಬೆನ್ನಿಗೆ ನಿಲ್ಲುವುದು ಅಗತ್ಯ ಎಂದಿದ್ದಾರೆ.
1976ರಲ್ಲಿ ಉಗಾಂಡಾದ ಎಂಟೆಬ್ಬೆ ವಿಮಾನ ನಿಲ್ದಾಣದಲ್ಲಿ ನಡೆದ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿ ಮೃತಪಟ್ಟ ಇಸ್ರೇಲಿ ಕಮಾಂಡೋ ಯೋನಾತನ್ "ಯೋನಿ" ನೆತನ್ಯಾಹು ಅವರ ಗೌರವಾರ್ಥವಾಗಿ ಪ್ರತಿಮೆಯೊಂದನ್ನು ಸ್ಥಾಪಿಸುವುದಾಗಿ ಮುಹೂಜಿ ಕೈನೆರುಗಬಾ ಅವರು ಇತ್ತೀಚೆಗೆ ಘೋಷಿಸಿದ್ದಾರೆ. ಈ ಯೋನಾತನ್ ಅವರು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹೋದರ ಎಂಬುದು ಗಮನಾರ್ಹ, (ಏಜೆನ್ಸೀಸ್​).