Pakistani minister 
ವಿದೇಶ

ಭಾರತ, ಅಫ್ಘಾನ್​ ವಿರುದ್ಧದ ಎರಡು ಯುದ್ಧಕ್ಕೆ ನಾವು ಸಿದ್ಧ: ಪಾಕ್​ ಸಚಿವ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆ | Pakistan

ಪಾಕಿಸ್ತಾನ: ಪೂರ್ವ ಗಡಿಯಲ್ಲಿ ಭಾರತ ಮತ್ತು ಪಶ್ಚಿಮ ಗಡಿಯಲ್ಲಿ ತಾಲಿಬಾನ್ ವಿರುದ್ಧ ಎರಡು-ಯುದ್ಧಕ್ಕೆ ನಮ್ಮ ದೇಶ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಪಾಕಿಸ್ತಾನದ(Pakistan) ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತೊಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಸಿಫ್, "ನಾವು ಎರಡು ರಂಗಗಳಲ್ಲಿ ಯುದ್ಧಕ್ಕೆ ಸಿದ್ಧರಿದ್ದೇವೆ. ಪೂರ್ವ (ಭಾರತ) ಮತ್ತು ಪಶ್ಚಿಮ ಗಡಿ (ಅಫ್ಘಾನಿಸ್ತಾನ) ಎರಡನ್ನೂ ಎದುರಿಸಲು ನಾವು ಸಿದ್ಧರಿದ್ದೇವೆ. ಮೊದಲ ಸುತ್ತಿನಲ್ಲಿ ಅಲ್ಲಾಹನು ನಮಗೆ ಸಹಾಯ ಮಾಡಿದನು ಮತ್ತು ಎರಡನೇ ಸುತ್ತಿನಲ್ಲಿ ಅವನು ನಮಗೆ ಸಹಾಯ ಮಾಡುತ್ತಾನೆ" ಎಂದು ಹೇಳಿದರು.
ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಮೃತಪಟ್ಟಿದ್ದು, 36 ಗಾಯಗೊಂಡಿದ್ದಾರೆ. ಈ ಘಟನೆ ಬಳಿಕ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಇನ್ನು ಇದಕ್ಕೂ ಮುನ್ನ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, "ಭಾರತದ ಬೆಂಬಲದೊಂದಿಗೆ ಸಕ್ರಿಯವಾಗಿರುವ" ಗುಂಪುಗಳು ದಾಳಿಯಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಸಚಿವ ಖವಾಜಾ ಆಸಿಫ್ ಕೂಡ ಇದೇ ದಾಟಿಯಲ್ಲೇ ಹೇಳಿಕೆ ನೀಡಿದ್ದಾರೆ. ಅಫ್ಘಾನ್ ತಾಲಿಬಾನ್ ಬಾಂಬ್ ದಾಳಿಯ ಮೂಲಕ ಸಂದೇಶವನ್ನು (ಭಾರತ) ರವಾನಿಸಿದೆ ಎಂದಿದ್ದಾರೆ.

ಕಾರು ಸ್ಫೋಟ ಅಲ್ಲ, ಗ್ಯಾಸ್ ಸ್ಫೋಟ!

ದೆಹಲಿಯ ಕೆಂಪು ಕೋಟೆ ಬಳಿ 13 ಜನರ ಸಾವಿಗೆ ಕಾರಣವಾದ ಸ್ಫೋಟವನ್ನು ಅದು ಕೇವಲ "ಗ್ಯಾಸ್ ಸಿಲಿಂಡರ್ ಸ್ಫೋಟ" ಎಂದು ಪಾಕ್​ ಸಚಿವ ಆಸಿಫ್ ಹೇಳಿಕೆ ನೀಡಿದ್ದರು. ಭಾರತವು "ಘಟನೆಯನ್ನು ರಾಜಕೀಯಗೊಳಿಸುತ್ತಿದೆ" ಎಂದು ಆರೋಪಿಸಿದರು.
"ನಿನ್ನೆಯವರೆಗೂ ಅದು ಗ್ಯಾಸ್ ಸಿಲಿಂಡರ್ ಸ್ಫೋಟವಾಗಿತ್ತು. ಈಗ ಅವರು ಇದನ್ನು ವಿದೇಶಿ ಪಿತೂರಿ ಎಂದು ಹಣೆಪಟ್ಟಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಭಾರತ ಶೀಘ್ರದಲ್ಲೇ ಇದಕ್ಕೆ ಪಾಕಿಸ್ತಾನವನ್ನು ದೂಷಿಸಬಹುದು" ಎಂದು ಆಸಿಫ್ ಹೇಳಿದರು (ಏಜೆನ್ಸೀಸ್​).