US Iran Conflict | ಇರಾನ್ ಕ್ಷಿಪಣಿ ದಾಳಿಗೆ ಇಬ್ಬರು ಯುಎಸ್ ಸೈನಿಕರು ಬಲಿ: ಅಮೆರಿಕಕ್ಕೆ ಮರೆಯಲಾಗದ ಪಾಠ ಕಲಿಸುತ್ತೇವೆ ಎಂದು ಮೊಜ್ತಬಾ ಖಮೇನಿ ಎಚ್ಚರಿಕೆ!
US Iran Conflict: ಜೋರ್ಡಾನ್‌ನಲ್ಲಿರುವ ಅಮೆರಿಕ ಮತ್ತು ಅದರ ಮಿತ್ರಪಡೆಗಳ ಮೇಲಿನ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ ಇಬ್ಬರು ಯುಎಸ್ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಶನಿವಾರ ತಿಳಿಸಿದೆ.
ಜುಲೈ 17 ರಂದು ಅಮೆರಿಕ ಹಾಗೂ ಅದರ ಮಿತ್ರಪಡೆಗಳು ಇರಾನ್‌ನ ದಾಳಿಯ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸೆಂಟಕಾಂ ತನ್ನ ಅಧಿಕೃತ ಹೇಳಿಕೆಯಲ್ಲಿ ವಿವರಿಸಿದೆ.
ದಾಳಿಯಲ್ಲಿ ಗಾಯಗೊಂಡಿದ್ದ ನಾಲ್ವರು ಅಮೆರಿಕನ್ ಸೈನಿಕರನ್ನು ಜೋರ್ಡಾನ್‌ನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಸದ್ಯ ಅವರನ್ನು ಬಿಡುಗಡೆ ಮಾಡಲಾಗಿದೆ. ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದ ಇತರ ಸಿಬ್ಬಂದಿ ಮತ್ತೆ ಕರ್ತವ್ಯಕ್ಕೆ ಮರಳಿದ್ದು, ಮೃತರ ಕುಟುಂಬಗಳಿಗೆ ಮಾಹಿತಿ ನೀಡುವವರೆಗೆ ಸೈನಿಕರ ಗುರುತನ್ನು ಬಹಿರಂಗಪಡಿಸುವುದಿಲ್ಲ ಎಂದು ಸೆಂಟಕಾಂ ಸ್ಪಷ್ಟಪಡಿಸಿದೆ. ಶನಿವಾರದ ಇರಾನ್ ದಾಳಿಯಿಂದ ಅತಿ ಹೆಚ್ಚಿನ ಹಾನಿ ವರದಿಯಾಗಿರುವುದು ಕುವೈತ್‌ನಲ್ಲಿ. ಕುವೈತ್ ಅಧಿಕಾರಿಗಳು ಮತ್ತು ಅಲ್ಲಿನ ಪೆಟ್ರೋಲಿಯಂ ಕಾರ್ಪೊರೇಷನ್ ನೀಡಿರುವ ಮಾಹಿತಿಯ ಪ್ರಕಾರ, ಅಲ್ಲಿನ ನೀರು ಶುದ್ಧೀಕರಣ ಘಟಕ ಮತ್ತು ತೈಲ ಸೌಲಭ್ಯದ ಮೇಲೆ ದಾಳಿ ನಡೆದಿದೆ.
ಅಮೆರಿಕಕ್ಕೆ ಮೊಜ್ತಬಾ ಖಮೇನಿ ಎಚ್ಚರಿಕೆ
ಸೇನಾ ಸಿಬ್ಬಂದಿಗಳ ಸಾವಿನ ವರದಿ ಹೊರಬೀಳುತ್ತಿದ್ದಂತೆಯೇ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಸಹಿ ಹಾಕಲಾಗಿದ್ದ ಮಧ್ಯಂತರ ಒಪ್ಪಂದದ ಬದ್ಧತೆಗಳನ್ನು ಇರಾನ್ ಅಮಾನತುಗೊಳಿಸಿದೆ. ಇದು ಸಂಘರ್ಷವನ್ನು ಕೊನೆಗೊಳಿಸುವ ಭರವಸೆಗಳ ಮೇಲೆ ಹೊಸ ಅನುಮಾನಗಳನ್ನು ಹುಟ್ಟುಹಾಕಿದೆ. ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಇರಾನ್ ಸರ್ಕಾರಿ ದೂರದರ್ಶನದಲ್ಲಿ ಮಾತನಾಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿ ನಿಷ್ಪ್ರಯೋಜಕ ಮತ್ತು ಅಮಾನ್ಯ ಎಂದು ಕರೆದಿದ್ದಾರೆ.
ಅಮೆರಿಕವು ಇರಾನ್ ಮೇಲೆ ದಾಳಿ ಮುಂದುವರಿಸಿದರೆ ಅದಕ್ಕೆ ಮರೆಯಲಾಗದ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮಧ್ಯಂತರ ಒಪ್ಪಂದದಿಂದ ಇರಾನ್ ಹಿಂದೆ ಸರಿಯುತ್ತಿದೆ ಎಂದು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಖಮೇನಿ ಅವರ ಈ ಹೇಳಿಕೆ ಹೊರಬಿದ್ದಿದೆ. ಇರಾನ್ ಮತ್ತು ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳ ಒಕ್ಕೂಟವಾದ ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ಅಮೆರಿಕದ ಮಿಲಿಟರಿ ಕ್ರಮಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಖಮೇನಿ ಎಚ್ಚರಿಸಿದ್ದು, ಇದು ಪ್ರಾದೇಶಿಕವಾಗಿ ಮತ್ತಷ್ಟು ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಮುನ್ಸೂಚನೆ ನೀಡಿದೆ.
ಜಾಗತಿಕ ತೈಲ ಮಾರುಕಟ್ಟೆಗೆ ಆತಂಕದಾಳಿ ಮತ್ತು ಬೆದರಿಕೆಗಳು ತೀವ್ರಗೊಳ್ಳುತ್ತಿದ್ದಂತೆ, ಹೊರ್ಮುಜ್ ಜಲಸಂಧಿಯ ಸುತ್ತಲೂ ಹೋರಾಟ ತೀವ್ರಗೊಂಡಿದೆ. ವಿಶ್ವದ ಒಟ್ಟು ಕಚ್ಚಾ ತೈಲದ ಸುಮಾರು ಐದನೇ ಒಂದು ಭಾಗ ಈ ಜಲಸಂಧಿಯ ಮೂಲಕವೇ ಸಾಗಣೆಯಾಗುವುದರಿಂದ, ಈ ಜಲಮಾರ್ಗದ ನಿಯಂತ್ರಣ ಸಾಧಿಸಲು ಉಭಯ ದೇಶಗಳು ಮುಗಿಬಿದ್ದಿವೆ. ಇದು ಜಾಗತಿಕ ಇಂಧನ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರುವ ಆತಂಕವನ್ನು ಮೂಡಿಸಿದ್ದು, ದೀರ್ಘಕಾಲದ ಯುದ್ಧದ ಭೀತಿಯನ್ನು ಎದುರು ಮಾಡಿದೆ(ಏಜೆನ್ಸೀಸ್).