Trishuli Rescue | ತ್ರಿಶೂಲಿ ಸುರಂಗದಲ್ಲಿ ಪವಾಡ: 9 ದಿನಗಳ ಬಳಿಕ ಇಬ್ಬರು ಸಜೀವವಾಗಿ ಪತ್ತೆ!
Trishuli Rescue: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಲುಕಿ ತ್ರಿಶೂಲಿ 3ಎ ಜಲವಿದ್ಯುತ್ ಯೋಜನೆಯ ಸುರಂಗದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ದುರಂತ ಸಂಭವಿಸಿದ ಒಂಬತ್ತು ದಿನಗಳ ನಂತರ ಸಜೀವವಾಗಿ ಹೊರಗೆ ತರಲಾಗಿದೆ. ರಕ್ಷಣಾ ಸಿಬ್ಬಂದಿ ಮಣ್ಣಿನಿಂದ ಆವೃತನಾಗಿದ್ದ ಒಬ್ಬ ವ್ಯಕ್ತಿಯನ್ನು ಸುರಂಗದ ದ್ವಾರದಿಂದ ಹೊರಗೆ ಎಳೆದು ಕಾಲಿನ ಮೇಲೆ ನಿಲ್ಲಲು ಸಹಾಯ ಮಾಡುತ್ತಿದ್ದಂತೆ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.
ಮತ್ತೊಂದು ವಿಡಿಯೋದಲ್ಲಿ, ಎರಡನೇ ವ್ಯಕ್ತಿ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಲ್ಪಟ್ಟು, ದೇವರಿಗೆ ಕೈಮುಗಿದು ಪ್ರಾರ್ಥಿಸುತ್ತಿರುವಾಗಲೇ ರಕ್ಷಣಾ ಸಿಬ್ಬಂದಿ ಆತನನ್ನು ಕಿತ್ತಳೆ ಬಣ್ಣದ ಸ್ಟ್ರೆಚರ್‌ನಲ್ಲಿ ಹೊತ್ತೊಯ್ಯುತ್ತಿರುವುದು ಕಂಡುಬಂದಿದೆ. ರಕ್ಷಿಸಲ್ಪಟ್ಟವರನ್ನು ನೇಪಾಳ ವಿದ್ಯುತ್ ಪ್ರಾಧಿಕಾರದ 30 ವರ್ಷದ ಮೆಕ್ಯಾನಿಕಲ್ ಫೋರ್‌ಮ್ಯಾನ್ ಸಂಜಯ್ ಶಾ ಹಾಗೂ 45 ವರ್ಷದ ಯೋಜನಾ ಮೇಲ್ವಿಚಾರಕ ಕಬೀರ್ ಮಹಾರ್ಜನ್ ಎಂದು ಗೃಹ ಸಚಿವ ಸುದನ್ ಗುರುಂಗ್ ಗುರುತಿಸಿದ್ದಾರೆ.
ತಮ್ಮ ಸಹೋದರ ಕಬೀರ್ ರಕ್ಷಣೆಯಾದ ಸುದ್ದಿ ತಿಳಿದ ಅಮೀರ್ ಮಹಾರ್ಜನ್, ನನಗೆ ತುಂಬಾ ಸಂತೋಷವಾಗಿದೆ, ನನ್ನ ಮನಸ್ಸು ಹಗುರವಾಗಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಸುರಂಗದ ಒಳಗಿನಿಂದ ಇನ್ನು ಕೆಲವು ಜನರ ಧ್ವನಿಗಳು ಕೇಳಿಬರುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಉಳಿದವರು ಜೀವಂತವಾಗಿರುವ ಭರವಸೆ ಮೂಡಿಸಿದೆ. ಆಗಸ್ಟ್ 26 ರಂದು ಹಿಮನದಿ ಕುಸಿತದಿಂದ ಸಂಭವಿಸಿದ ಎನ್ನಲಾದ ಈ ಭೀಕರ ಪ್ರವಾಹವು ನೇಪಾಳದ ನಗರಗಳು ಮತ್ತು ಕಣಿವೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿತ್ತು. ಪ್ರಸ್ತುತ 150 ಕ್ಕೂ ಹೆಚ್ಚು ಜನ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾದ 6 ಜಲವಿದ್ಯುತ್ ಸುರಂಗಗಳಲ್ಲಿ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಆಮ್ಲಜನಕದ ಕೊರತೆಯಾಗದಂತೆ ಎಂಜಿನಿಯರ್‌ಗಳು ನಿರಂತರವಾಗಿ ಗಾಳಿಯನ್ನು ಪಂಪ್ ಮಾಡುತ್ತಿದ್ದಾರೆ.
ಅಧಿಕಾರಿಗಳ ಪ್ರಕಾರ ನೇಪಾಳದ 12 ಜಲವಿದ್ಯುತ್ ಯೋಜನೆಗಳಿಂದ ಸುಮಾರು 900 ಕಾರ್ಮಿಕರು ನಾಪತ್ತೆಯಾಗಿದ್ದು, ಅವರಲ್ಲಿ 500 ಕ್ಕೂ ಹೆಚ್ಚು ಜನರು ಸುರಂಗಗಳಲ್ಲೇ ಸಿಲುಕಿರುವ ಶಂಕೆಯಿದೆ. ದೇಶದ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ ಈವರೆಗೆ ಕನಿಷ್ಠ 1,259 ಜನರು ಪ್ರವಾಹಕ್ಕೆ ಬಲಿಯಾಗಿದ್ದು, 5,000 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಇತ್ತ ಗಡಿಭಾಗದ ಚೀನಾ ವ್ಯಾಪ್ತಿಯ ಟಿಬೆಟ್‌ನಲ್ಲೂ ಪ್ರವಾಹಕ್ಕೆ 21 ಜನರು ಸಾವನ್ನಪ್ಪಿದ್ದು, 541 ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ(ಏಜೆನ್ಸೀಸ್).