48 ಗಂಟೆಗಳಲ್ಲಿ ಇಬ್ಬರು ಸಚಿವರು ಹತ್ಯೆ!: ಅಮೆರಿಕದ ಎಪಿಕ್ ಫ್ಯೂರಿ ಇರಾನ್‌ನ ಇಡೀ ನಾಯಕತ್ವವನ್ನೇ ನುಂಗಿ ಹಾಕುತ್ತಿದೆಯೇ..?
ಟೆಹ್ರಾನ್: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಈಗ ಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಆಪರೇಷನ್ ಎಪಿಕ್ ಫ್ಯೂರಿ ಇರಾನ್‌ನ(Syed Majid Ibn Al-Reza) ಇಡೀ ಆಡಳಿತ ಯಂತ್ರವನ್ನೇ ಬುಡಮೇಲು ಮಾಡಿದೆ. ಕೇವಲ ಎರಡು ದಿನಗಳ ಅಂತರದಲ್ಲಿ ಇರಾನ್‌ನ ಇಬ್ಬರು ರಕ್ಷಣಾ ಸಚಿವರು ಹತ್ಯೆಯಾಗಿರುವುದು ಇಡೀ ಜಗತ್ತನ್ನೇ ದಿಗ್ಭ್ರಮೆಗೊಳಿಸಿದೆ. ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಇರಾನ್ ಈಗ ನಾಯಕನಿಲ್ಲದ ದೇಶವಾಗಿ ಮಾರ್ಪಟ್ಟಿದೆ.
ಸಚಿವರ ಸಾಲು ಸಾಲು ಸಾವು: ಇಸ್ರೇಲ್ ನಡೆಸಿದ ಆ 'ಡೆತ್ ವಾರೆಂಟ್' ದಾಳಿ!
'ದಿ ಸ್ಪೆಕ್ಟೇಟರ್ ಇಂಡೆಕ್ಸ್' ವರದಿಯ ಪ್ರಕಾರ, ಶನಿವಾರ ನಡೆದ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಮೊಹಮ್ಮದ್ ಪಕ್ಪೋರ್ ಹತರಾಗಿದ್ದರು. ಅವರ ಸ್ಥಾನಕ್ಕೆ ತಕ್ಷಣವೇ ನೇಮಕಗೊಂಡಿದ್ದ ಹೊಸ ರಕ್ಷಣಾ ಸಚಿವ ಸೈಯದ್ ಮಜಿದ್ ಇಬ್ ಅಲ್-ರೆಜಾ ಅವರು ಕೂಡ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ನ ಭೀಕರ ವೈಮಾನಿಕ ದಾಳಿಗೆ ಬಲಿಯಾಗಿದ್ದಾರೆ. ಸತತವಾಗಿ ಉನ್ನತ ನಾಯಕರನ್ನು ಗುರಿಯಾಗಿಸಿ ನಡೆಸುತ್ತಿರುವ ಈ ಟಾರ್ಗೆಟೆಡ್ ಕಿಲ್ಲಿಂಗ್ ಇರಾನ್ ಮಿಲಿಟರಿಯ ನೈತಿಕ ಸ್ಥೈರ್ಯವನ್ನೇ ಕುಗ್ಗಿಸಿದೆ.
ದಶಕದ ಅತಿದೊಡ್ಡ ವಾಯು ಸಮರ: ಖಮೇನಿ ಕಚೇರಿ ಬಳಿಯೇ ಬಾಂಬ್ ಮಳೆ!
ದಶಕಗಳಲ್ಲೇ ಕಾಣದಂತಹ ಭೀಕರ ವೈಮಾನಿಕ ದಾಳಿಗಳು ಇರಾನ್‌ನಾದ್ಯಂತ ನಡೆಯುತ್ತಿವೆ. ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿ ಮತ್ತು ನಿವಾಸದ ಸಮೀಪದಲ್ಲೇ ಅಮೆರಿಕದ ಮಿಸೈಲ್‌ಗಳು ಅಪ್ಪಳಿಸಿವೆ. ಇರಾನ್‌ನ ಸರ್ಕಾರಿ ಮಾಧ್ಯಮಗಳೇ ಈಗ ಖಮೇನಿ ಸಾವನ್ನು ದೃಢಪಡಿಸಿವೆ. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜನತೆಗೆ ಕರೆ ನೀಡಿದ್ದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇದು ಇರಾನ್ ವಿಮೋಚನೆಯ ಹಾದಿ ಎಂದು ಬಣ್ಣಿಸಿದ್ದಾರೆ.
ಯುದ್ಧಕ್ಕೆ ಅಸಲಿ ಕಾರಣವೇನು..?
ಅಮೆರಿಕದ ವಿಶೇಷ ದೂತ ಸ್ಟೀವ್ ವಿಟ್ಕಾಫ್ ನೀಡಿರುವ ಮಾಹಿತಿಯಂತೆ, ಇರಾನ್ ಜೊತೆಗಿನ ಮಾತುಕತೆ ಸಂಪೂರ್ಣ ವಿಫಲವಾಗಲು ಇರಾನ್‌ನ ಹಠಮಾರಿ ಧೋರಣೆಯೇ ಕಾರಣವಾಗಿದೆ. ಇರಾನ್ ಬಳಿ ಸದ್ಯ 460 ಕೆಜಿಯಷ್ಟು ಶೇ. 60 ರಷ್ಟು ಪುಷ್ಟೀಕರಿಸಿದ ಯುರೇನಿಯಂ ಸಂಗ್ರಹವಿದೆ. ಇದು ಬರೋಬ್ಬರಿ 11 ಪರಮಾಣು ಬಾಂಬ್‌ಗಳನ್ನು ತಯಾರಿಸಲು ಸಾಕಾಗುತ್ತದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಎಚ್ಚರಿಸಿತ್ತು. ಈ ಅಪಾಯವನ್ನು ಶಾಶ್ವತವಾಗಿ ಅಳಿಸಲು ಟ್ರಂಪ್ ಆಡಳಿತವು ಈ ಬೃಹತ್ ಸೇನಾ ಕಾರ್ಯಾಚರಣೆಗೆ ಆದೇಶಿಸಿದೆ.
ಜಗತ್ತಿಗೆ ಎದುರಾದ ಹಾರ್ಮುಜ್ ಗಂಡಾಂತರ!
ಇರಾನ್ ಈ ದಾಳಿಗೆ ಸುಮ್ಮನೆ ಕುಳಿತಿಲ್ಲ. ಪ್ರತಿಬಂಧಕವಾಗಿ ಅದು ಇಸ್ರೇಲ್ ಮತ್ತು ಗಲ್ಫ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ನೂರಾರು ಡ್ರೋನ್ ಮತ್ತು ಮಿಸೈಲ್‌ಗಳನ್ನು ಹಾರಿಸಿದೆ. ಅತಿ ಮುಖ್ಯವಾಗಿ, ಜಗತ್ತಿನ ತೈಲ ಪೂರೈಕೆಯ ಜೀವನಾಡಿ ಎನಿಸಿದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ದಿನಕ್ಕೆ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲ ಸಾಗಣೆಯಾಗುವ ಈ ಮಾರ್ಗ ಸ್ಥಗಿತಗೊಂಡಿರುವುದು ಜಾಗತಿಕ ತೈಲ ಬೆಲೆ ಗಗನಕ್ಕೇರಲು ಮತ್ತು ವಿಶ್ವದ ಆರ್ಥಿಕತೆ ಕುಸಿಯಲು ಕಾರಣವಾಗಬಹುದು ಎಂಬ ಭೀತಿ ಭಾರತದಂತಹ ದೇಶಗಳನ್ನೂ ಕಾಡುತ್ತಿದೆ.
ಇರಾನ್ ಈಗ ಒಳಗಿನಿಂದ ದಂಗೆ ಮತ್ತು ಹೊರಗಿನಿಂದ ಯುದ್ಧ ಎರಡನ್ನೂ ಎದುರಿಸುತ್ತಿದೆ. ಅಮೆರಿಕದ ಈ ಎಪಿಕ್ ಫ್ಯೂರಿ ಕಾರ್ಯಾಚರಣೆಯು ಇರಾನ್‌ನ ಇಡೀ ಪರಮಾಣು ಮೂಲಸೌಕರ್ಯವನ್ನು ನಾಶಪಡಿಸುವವರೆಗೂ ನಿಲ್ಲುವ ಲಕ್ಷಣಗಳಿಲ್ಲ. ಇದು ಕೇವಲ ಮಧ್ಯಪ್ರಾಚ್ಯದ ಯುದ್ಧವಾಗಿ ಉಳಿಯದೆ, 3ನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಿದೆ,(ಏಜೆನ್ಸೀಸ್).