ಲಂಡನ್ ಬೀದಿಯಲ್ಲಿ ಪಾನ್ ಉಗುಳಿದ ಇಬ್ಬರು ಭಾರತೀಯರು
- ಲಂಡನ್ ಬೀದಿಯಲ್ಲಿ ಪಾನ್ ಉಗುಳಿದ ಇಬ್ಬರು ಭಾರತೀಯರು
- ಸ್ಥಳದಲ್ಲೇ 10,000 ದಂಡ ವಿಧಿಸಿದ್ದ ಲಂಡನ್ ಪೊಲೀಸರು
- ದಂಡ ಕಟ್ಟದೇ ಉದ್ಧಟತನ ತೋರಿದ ಹಿನ್ನಲೆ 1 ಲಕ್ಷ ದಂಡ ವಿಧಸಿದ ಲಂಡನ್ ನ್ಯಾಯಾಲಯ
ಲಂಡನ್: ವಿದೇಶಕ್ಕೆ ಹೋದರೂ ನಮ್ಮೂರಿನ ಅಭ್ಯಾಸಗಳು ಮಾತ್ರ ನಮ್ಮನ್ನು ಬಿಡುವುದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಲಂಡನ್ (Indians in London) ನ ಬೀದಿಗಳಲ್ಲಿ ಎಲ್ಲೆಂದರಲ್ಲಿ ಪಾನ್ ಉಗುಳುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಅಲ್ಲಿನ ನ್ಯಾಯಾಲಯ ಈಗ ಚಳಿ ಬಿಡಿಸಿದೆ. ಆರಂಭದಲ್ಲಿ ಕೇವಲ 100 ಪೌಂಡ್ (ಸುಮಾರು 10,000 ರೂ.) ದಂಡ ವಿಧಿಸಲಾಗಿದ್ದರೂ, ಅದನ್ನು ನಿರ್ಲಕ್ಷಿಸಿದ್ದಕ್ಕೆ ಈಗ ಅವರ ಜೇಬಿಗೆ ಬರೋಬ್ಬರಿ ಲಕ್ಷಾಂತರ ರೂಪಾಯಿ ಕತ್ತರಿ ಬಿದ್ದಿದೆ.
ಏನಿದು ಘಟನೆ?
ಎಡ್ಗ್‌ವೇರ್ ನಿವಾಸಿ ಅಕ್ಷಿತ್‌ಕುಮಾರ್ ಭದ್ರೆ ಪಟೇಲ್ ಎಂಬುವವರು ಕಿಂಗ್ಸ್‌ಬರಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಪಾನ್ ಉಗುಳುವಾಗ ಸಿಕ್ಕಿಬಿದ್ದಿದ್ದರು. ಅದೇ ರೀತಿ ಹಿತೇಶ್ ಪಟೇಲ್ ಎಂಬುವವರು ವೆಂಬ್ಲಿ ಹಿಲ್ ರಸ್ತೆಯಲ್ಲಿ ಇದೇ ತಪ್ಪು ಮಾಡಿದ್ದರು. ಅಧಿಕಾರಿಗಳು ಇಬ್ಬರಿಗೂ ಸ್ಥಳದಲ್ಲೇ 100 ಪೌಂಡ್ ದಂಡ ವಿಧಿಸಿದ್ದರು. ಆದರೆ, ಇವರಿಬ್ಬರೂ ಆ ದಂಡವನ್ನು ಕಟ್ಟದೆ ನಿರ್ಲಕ್ಷಿಸಿದ್ದರು.
ದಂಡ ಕಟ್ಟದ ಕಾರಣ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ವಿಚಾರಣೆಗೆ ಹಾಜರಾಗದ ಈ ಇಬ್ಬರ ಅನುಪಸ್ಥಿತಿಯಲ್ಲೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತೀರ್ಪು ಪ್ರಕಟಿಸಿತು. ದಂಡದ ಮೊತ್ತವನ್ನು ಹತ್ತು ಪಟ್ಟು ಹೆಚ್ಚಿಸಿ, ಹಿತೇಶ್ ಪಟೇಲ್ ಅವರಿಗೆ ಬರೋಬ್ಬರಿ 1,391 ಪೌಂಡ್ (ಸುಮಾರು 1.48 ಲಕ್ಷ ರೂಪಾಯಿ) ದಂಡ ವಿಧಿಸಿದೆ. ಆರಂಭದಲ್ಲಿ ಕಟ್ಟಿದ್ದರೆ ಕೇವಲ 10 ಸಾವಿರದಲ್ಲಿ ಮುಗಿಯುವ ಕೇಸ್, ಈಗ ಲಕ್ಷದ ಗಡಿದಾಟಿದೆ.
ಲಂಡನ್ ಅಧಿಕಾರಿಗಳ ಶೂನ್ಯ ಸಹಿಷ್ಣುತೆ
ವಾಯುವ್ಯ ಲಂಡನ್‌ನ ಬ್ರೆಂಟ್ ಮತ್ತು ಹ್ಯಾರೋ ಭಾಗಗಳಲ್ಲಿ ಪಾನ್ ಕಲೆಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಈ ಕಲೆಗಳನ್ನು ತೆಗೆಯುವುದು ಅಷ್ಟು ಸುಲಭವಲ್ಲ. ಬಿಬಿಸಿ ವರದಿಯ ಪ್ರಕಾರ, ಬ್ರೆಂಟ್ ಕೌನ್ಸಿಲ್ ಒಂದೇ ವರ್ಷಕ್ಕೆ ಪಾನ್ ಕಲೆಗಳನ್ನು ಸ್ವಚ್ಛಗೊಳಿಸಲು 30,000 ಪೌಂಡ್ (ಸುಮಾರು 32 ಲಕ್ಷ ರೂ.) ಖರ್ಚು ಮಾಡುತ್ತಿದೆ. ಇದರಿಂದ ಬೇಸತ್ತಿರುವ ಅಧಿಕಾರಿಗಳು ಈಗ ಶೂನ್ಯ-ಸಹಿಷ್ಣುತೆ (Zero Tolerance) ನೀತಿಯನ್ನು ಅಳವಡಿಸಿಕೊಂಡಿದ್ದಾರೆ.
ನಮ್ಮ ಬೀದಿಗಳನ್ನು ಹಾಳುಮಾಡಬೇಡಿ!
ಸಾರ್ವಜನಿಕ ಜಾರಿ ವಿಭಾಗದ ಕೌನ್ಸಿಲರ್ ಕೃಪಾ ಶೇತ್ ಈ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಮ್ಮ ಬೀದಿಗಳನ್ನು ಮತ್ತು ಸಾರ್ವಜನಿಕ ಆಸ್ತಿಯನ್ನು ಹಾಳುಮಾಡುವವರನ್ನು ನಾವು ಬಿಡುವುದಿಲ್ಲ. ನಮ್ಮ ಬೀದಿಗಳನ್ನು ನೀವು ಅಸ್ತವ್ಯಸ್ತಗೊಳಿಸಿದರೆ, ನಾವು ನಿಮ್ಮನ್ನು ಹುಡುಕುತ್ತೇವೆ ಮತ್ತು ನೀವು ಭಾರಿ ಬೆಲೆ ಪಾವತಿಸಬೇಕಾಗುತ್ತದೆ, ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್).