ಏನಿದು ವಿಚಿತ್ರ? ಒಂದೇ ದೇಹ ಎರಡು ತಲೆ... 4 ವಾರ ಕಳೆದರೂ ಆರೋಗ್ಯವಾಗಿರುವ ಈ ಹಲ್ಲಿ ಮರಿಯ ರಹಸ್ಯವೇನು? Two Heads Baby Lizard 
ವಿದೇಶ

ಏನಿದು ವಿಚಿತ್ರ? ಒಂದೇ ದೇಹ ಎರಡು ತಲೆ... 4 ವಾರ ಕಳೆದರೂ ಆರೋಗ್ಯವಾಗಿರುವ ಈ ಹಲ್ಲಿ ಮರಿಯ ರಹಸ್ಯವೇನು? Two Heads Baby Lizard

ಪ್ರಮುಖ ಮುಖ್ಯಾಂಶಗಳು

  • ಒಂದೇ ಮೈಯಲ್ಲಿ ಎರಡು ತಲೆಗಳ ಹಲ್ಲಿ ಜನನ
  • ನಾಲ್ಕು ವಾರಗಳಿಂದ ಆರೋಗ್ಯವಾಗಿ ಜೀವಿಸುತ್ತಿರುವ ಹಲ್ಲಿಗಳು
  • ಪೆನ್ಸಿಲ್ವೇನಿಯಾದ ಪ್ರಜನನ ಕೇಂದ್ರದಲ್ಲಿ ಬೆಳಕಿಗೆ ಬಂದ ಅಪರೂಪದ ಎರಡು ತಲೆಗಳ ಹಲ್ಲಿ ಮರಿ
  • ಅವಳಿ ಭ್ರೂಣಗಳ ಅಪೂರ್ಣ ಬೆಳವಣಿಗೆಯಿಂದ ಸಂಭವಿಸುವ ಡಿಸೆಫಲಿ ಸ್ಥಿತಿಯ ರೋಚಕ ಹಲ್ಲಿಯ ಕಥೆ
Two Heads Baby Lizard : ಮಾನವ ಆಧುನಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದುತ್ತಿದ್ದರೂ ಪ್ರಕೃತಿಯ ವಿಸ್ಮಯಗಳಿಗೆ ಮಾತ್ರ ಮಿತಿಯೇ ಇಲ್ಲ! ಈ ಕೌತುಕದ ವಿಶ್ವದಲ್ಲಿ ಒಂದಲ್ಲ ಒಂದು ಹುಬ್ಬೇರಿಸುವ ಸಂಗತಿ ಇಂದಿಗೂ ಜರುಗುತ್ತಲೇ ಇವೆ. ಮನುಷ್ಯ ಎಷ್ಟೊಂದು ನಿಗೂಢಗಳನ್ನು ಭೇದಿಸಿದರು ಸಹ ಪ್ರಕೃತಿ ಮಾತ್ರ ತನ್ನ ಒಡಲಲ್ಲಿ ಅಚ್ಚರಿಗಳ ಮಹಾಪೂರವನ್ನೇ ಅಡಗಿಸಿಟ್ಟುಕೊಂಡಿದೆ.
ತಾಜಾ ಸಂಗತಿ ಏನೆಂದರೆ, ಒಂದೇ ಮೈಯಲ್ಲಿ ಎರಡು ತಲೆಗಳೊಂದಿಗೆ ಜನಿಸಿರುವ ಅಪರೂಪದ ಹಲ್ಲಿಯೊಂದು ಅಚ್ಚರಿಯೆಂಬಂತೆ ನಾಲ್ಕು ವಾರಗಳನ್ನು ಯಶಸ್ವಿಯಾಗಿ ಪೂರೈಸಿ, ಆರೋಗ್ಯಯುತವಾಗಿ ಜೀವಿಸುತ್ತಿದೆ. ಈ ರೋಚಕ ಸುದ್ದಿ ಇದೀಗ ಜಗತ್ತಿನ ಗಮನ ಸೆಳೆದಿದೆ.
ಉತ್ತರಪೂರ್ವ ಪೆನ್ಸಿಲ್ವೇನಿಯಾದ 'ರಾಕ್‌ಸ್ಟಾರ್ ಗೆಕ್ಕೋಸ್' (Rockstar Geckos) ಸರೀಸೃಪ ಪ್ರಜನನ ಕೇಂದ್ರದಲ್ಲಿ ಜೂನ್ 29 ರಂದು ಈ ಅಪರೂಪದ ಮರಿಗಳು ಜನಿಸಿವೆ. ಎರಡು ತಲೆಗಳ ಹಲ್ಲಿ ಮರಿಗಳಿಗೆ 'ಸೈಮನ್ ಮತ್ತು ಗಾರ್ಫುಕೆಲ್' ಎಂದು ನಾಮಕರಣ ಮಾಡಲಾಗಿದೆ.
ಅಚ್ಚರಿಯ ಸಂಗತಿ ಏನೆಂದರೆ, ಮೊಟ್ಟೆ ಒಡೆಯುವವರೆಗೆ ಯಾವುದೇ ಅಸಾಮಾನ್ಯ ಸಂಗತಿ ಕಂಡುಬಂದಿರಲಿಲ್ಲ, ಆದರೆ ಮರಿಗಳು ಹೊರಬಂದಾಗ ಒಂದೇ ಮೈಯಲ್ಲಿ ಎರಡು ತಲೆಗಳಿರುವುದು ಬೆಳಕಿಗೆ ಬಂದಿದ್ದು, ಅದನ್ನು ನೋಡಿ ಅನೇಕ ಮಂದಿ ಹುಬ್ಬೇರಿಸಿದ್ದಾರೆ.

ಆರೋಗ್ಯ ಸ್ಥಿತಿ

ಆರಂಭದಲ್ಲಿ ಎರಡು ತಲೆಯ ಹಲ್ಲಿ ಹೆಚ್ಚು ದಿನ ಬದುಕುವುದು ಕಷ್ಟ ಎಂದು ತಜ್ಞರು ಅಂದಾಜಿಸಿದ್ದರೂ, ಪ್ರಸ್ತುತ ಈ ಎರಡೂ ತಲೆಗಳು ಮುಕ್ತವಾಗಿ ಆಹಾರ ಸೇವಿಸುತ್ತಿದ್ದು, ಆರೋಗ್ಯವೂ ಉತ್ತಮವಾಗಿದೆ. ಈ ಒಂದು ಬೆಳವಣಿಗೆ ವೈದ್ಯ ಲೋಕಕ್ಕೆ ಅಚ್ಚರಿ ಉಂಟು ಮಾಡಿದೆ.

ಅಂದಹಾಗೆ, ಹಲ್ಲಿ ಮರಿಗಳ ರಕ್ಷಕರು ನಿರಂತರವಾಗಿ ನಿಗಾ ವಹಿಸಿದ್ದು, ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಅತಿಯಾದ ಸಣ್ಣ ಗಾತ್ರದಲ್ಲಿರುವುದರಿಂದ ಆಂತರಿಕ ರಚನೆ ತಿಳಿಯಲು ಎಕ್ಸ್-ರೇ (X-ray) ಪರೀಕ್ಷೆ ನಡೆಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಅವುಗಳನ್ನು ಅವುಗಳ ಪಾಡಿಗೆ ಬಿಟ್ಟಿದ್ದಾರೆ. ಈ ಕ್ಷಣದವರೆಗೂ ಹಲ್ಲಿ ಮರಿಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

ವೈಜ್ಞಾನಿಕ ಹಿನ್ನೆಲೆ ಮತ್ತು ಸವಾಲುಗಳು

ಡಿಸೆಫಲಿ (Dicephaly): ಅವಳಿ ಭ್ರೂಣಗಳು ಸಂಪೂರ್ಣವಾಗಿ ಬೇರ್ಪಡದ ಕಾರಣದಿಂದ ಉಂಟಾಗುವ ಈ ಅಪರೂಪದ ಸ್ಥಿತಿಯನ್ನು 'ಡಿಸೆಫಲಿ' ಎಂದು ಕರೆಯಲಾಗುತ್ತದೆ. ಇದರಲ್ಲಿ ಎರಡು ತಲೆಗಳಿಗೆ ಪ್ರತ್ಯೇಕ ಮೆದುಳಿದ್ದರೂ, ಶರೀರ ಮಾತ್ರ ಒಂದೇ ಆಗಿರುತ್ತದೆ.

ಜೀವನದಾಸೆ ಕಡಿಮೆ: ಆಂತರಿಕ ಅಂಗಗಳ ದೋಷಗಳು ಮತ್ತು ಸ್ನಾಯು ವ್ಯವಸ್ಥೆಯ ಸಮಸ್ಯೆಗಳಿಂದಾಗಿ ಈ ಸ್ಥಿತಿಯಲ್ಲಿ ಜನಿಸುವ ಜೀವಿಗಳು ದೀರ್ಘಕಾಲ ಬದುಕುವುದು ಬಹಳ ಅಪರೂಪ. ಬದಕಿದ ಉದಾಹರಣೆಗಳು ಕೂಡ ನಮ್ಮ ಮುಂದೆ ಇಲ್ಲ.

ಕೆಲವೊಮ್ಮೆ ಎರಡು ಮೆದುಳುಗಳು ಏಕಕಾಲದಲ್ಲಿ ದೇಹವನ್ನು ನಿಯಂತ್ರಿಸಲು ಪ್ರಯತ್ನಿಸುವುದರಿಂದ ಅವುಗಳ ಚಲನೆ ಮತ್ತು ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಎರಡೂ ತಲೆಗಳು ವಿಭಿನ್ನವಾಗಿ ಚಿಂತಿಸುವುದರಿಂದ ಅವುಗಳ ದೇಹ ಸಮತೋಲನದಲ್ಲಿ ಇರುವುದು ತುಂಬಾ ಕಷ್ಟವಾಗಿದೆ.

ಸದ್ಯಕ್ಕೆ ಎರಡು ತಲೆಗಳ ಹಲ್ಲಿ ಮರಿಯನ್ನು ನೋಡಲ ಜನರು ಮುಗಿ ಬೀಳುತ್ತಿದ್ದಾರೆ. ಇನ್ನೂ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅದನ್ನು ನೋಡಿದವರು ಹುಬ್ಬೇರಿಸುತ್ತಿದ್ದಾರೆ, (ಏಜೆನ್ಸೀಸ್​).