ಹಮಾಸ್‌ಗೆ ಟ್ರಂಪ್ ಅಂತಿಮ ಎಚ್ಚರಿಕೆ: ಶಸ್ತ್ರ ಕೆಳಗಿಡಿ, ಇಲ್ಲದಿದ್ದರೆ ಧೂಳೀಪಟ ಮಾಡುತ್ತೇವೆ
ದಾವೋಸ್: ದಾವೋಸ್ನಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಡೊನಾಲ್ಡ್ ಟ್ರಂಪ್(Donald Trump) ಬೋರ್ಡ್ ಆಫ್ ಪೀಸ್ ಎಂಬ ಹೊಸ ಅಂತಾರಾಷ್ಟ್ರೀಯ ಮಂಡಳಿಯನ್ನು ಅನಾವರಣಗೊಳಿಸಿದ್ದಾರೆ. ಈ ವೇಳೆ ಹಮಾಸ್‌ಗೆ ಅತ್ಯಂತ ಕಠಿಣ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ, ಶಸ್ತ್ರಾಸ್ತ್ರತ್ಯಾಗ ಮಾಡದಿದ್ದರೆ ಹಮಾಸ್ ಸರ್ವನಾಶವಾಗಲಿದೆ ಎಂದು ಗುಡುಗಿದ್ದಾರೆ.
ಬೋರ್ಡ್ ಆಫ್ ಪೀಸ್; ಯುಎನ್‌ಗೆ ಪರ್ಯಾಯ?
ಟ್ರಂಪ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಈ ಮಂಡಳಿಯು ಗಾಜಾ ಪಟ್ಟಿಯ ಆಡಳಿತ, ಭದ್ರತೆ ಮತ್ತು ಪುನರ್ ನಿರ್ಮಾಣದ ಉಸ್ತುವಾರಿ ವಹಿಸಲಿದೆ. ಅಲ್ಲದೆ, ಅರ್ಜೆಂಟೀನಾ, ಈಜಿಪ್ಟ್, ಪಾಕಿಸ್ತಾನ, ಹಂಗೇರಿ ಮತ್ತು ಯುಎಇ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ರಾಷ್ಟ್ರಗಳು ಈಗಾಗಲೇ ಈ ಮಂಡಳಿಗೆ ಸಹಿ ಹಾಕಿವೆ. ವಿಶ್ವಸಂಸ್ಥೆ (UN) ಮಾಡದ ಕೆಲಸವನ್ನು ಈ ಬೋರ್ಡ್ ಮಾಡಲಿದೆ. ಇದು ಕೇವಲ ಹರಟೆ ಹೊಡೆಯುವ ಜಾಗವಲ್ಲ, ಕೆಲಸ ಮಾಡುವ ವೇದಿಕೆ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಈ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಪ್ರತಿ ರಾಷ್ಟ್ರವು 1 ಬಿಲಿಯನ್ ಡಾಲರ್ ಕೊಡುಗೆ ನೀಡಬೇಕೆಂಬ ನಿಯಮವನ್ನೂ ವಿಧಿಸಲಾಗಿದೆ.
ಹಮಾಸ್‌ಗೆ ಅಂತಿಮ ಎಚ್ಚರಿಕೆ
ನನ್ನ ಮಾತುಗಳನ್ನು ಹಮಾಸ್ ಬಹಳ ಸ್ಪಷ್ಟವಾಗಿ ಕೇಳಿಸಿಕೊಳ್ಳಬೇಕು. ನೀವು ಶಸ್ತ್ರಾಸ್ತ್ರಗಳನ್ನು ತ್ಯಜಿಸಲೇಬೇಕು. ಹಮಾಸ್ ನಿಶ್ಶಸ್ತ್ರೀಕರಣಕ್ಕೆ ಒಪ್ಪಿಕೊಂಡಿದೆ ಎಂದು ನನಗೆ ಮಾಹಿತಿ ಸಿಕ್ಕಿದೆ. ಅದರೆ, ಒಂದು ವೇಳೆ ಅವರು ಶಸ್ತ್ರ ಕೆಳಗಿಡದಿದ್ದರೆ, ಅವರನ್ನು ಅತ್ಯಂತ ವೇಗವಾಗಿ ಈ ಭೂಮಿಯ ಮೇಲಿಂದ ಧೂಳೀಪಟ ಮಾಡಲಾಗುವುದು ಎಂದಿದ್ದಾರೆ. ನಾವು ಅವರನ್ನು ಹುಡುಕಿ ನಾಶಪಡಿಸುತ್ತೇವೆ. ಅವರಿಗೆ ಈಗ ಎರಡೇ ಆಯ್ಕೆ ಇದೆ, ಶಾಂತಿಯ ಹಾದಿ ಅಥವಾ ಸಂಪೂರ್ಣ ವಿನಾಶ ಆಗುತ್ತದೆ ಎಂದು ಹಮಾಸ್ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
ಗಾಜಾದ ಪುನರ್ನಿರ್ಮಾಣದ ಭರವಸೆ
ಒಮ್ಮೆ ಹಮಾಸ್ ಶಸ್ತ್ರ ತ್ಯಜಿಸಿದರೆ, ಗಾಜಾವನ್ನು ನಾವು ಜಗತ್ತಿನ ಅತ್ಯಂತ ಸುಂದರವಾದ ಸ್ಥಳವನ್ನಾಗಿ ಮಾಡುತ್ತೇವೆ. ಅಲ್ಲದೆ, ಅಲ್ಲಿ ಹೋಟೆಲ್‌ಗಳು, ಉದ್ಯೋಗಗಳು ಮತ್ತು ಅದ್ಭುತವಾದ ಜೀವನ ಇರಲಿದೆ. ಹಮಾಸ್‌ನ ನಾಯಕರು ತಮ್ಮ ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಅದನ್ನು ನಾವು ಅಂತ್ಯಗೊಳಿಸುತ್ತೇವೆ. ಬೋರ್ಡ್ ಆಫ್ ಪೀಸ್ ಅಲ್ಲಿನ ಪ್ರತಿಯೊಂದು ಇಟ್ಟಿಗೆಯನ್ನು ಹೊಸದಾಗಿ ಜೋಡಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಭರವಸೆ ನೀಡಿದ್ದಾರೆ.
ಇರಾನ್ ಮತ್ತು ಮಧ್ಯಪ್ರಾಚ್ಯದ ಬದಲಾವಣೆ
ಇರಾನ್ ಕೂಡ ಈಗ ಬದಲಾಗುತ್ತಿದೆ. ಅವರು ನನ್ನೊಂದಿಗೆ ಮಾತನಾಡಲು ಬಯಸುತ್ತಿದ್ದಾರೆ. ನನಗೂ ಅವರೊಂದಿಗೆ ಮಾತುಕತೆ ನಡೆಸಲು ಅಭ್ಯಂತರವಿಲ್ಲ. ನಾವು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಶಾಶ್ವತ ಶಾಂತಿ ತರುತ್ತೇವೆ. ಅಮೆರಿಕದ ಶಕ್ತಿಯು ಜಗತ್ತನ್ನು ಒಗ್ಗೂಡಿಸುತ್ತಿದೆ, ವಿಭಜಿಸುತ್ತಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.
ವಿಶ್ವಸಂಸ್ಥೆಗೆ ಚಾಟಿ
ಮುಂದುವರೆದು ಮಾತನಾಡಿದ ಟ್ರಂಪ್, ವಿಶ್ವಸಂಸ್ಥೆಯು ನಿಷ್ಪ್ರಯೋಜಕವಾಗಿದೆ. ಅಲ್ಲಿ ಕೇವಲ ಹಣ ಪೋಲಾಗುತ್ತಿದೆ. ನಮ್ಮ ಬೋರ್ಡ್ ಆಫ್ ಪೀಸ್ನಲ್ಲಿ ಸೇರಲು ದೇಶಗಳು ಹಣ ನೀಡುತ್ತಿವೆ. ಇದು ಹೂಡಿಕೆಯ ಮೇಲೆ ಆಧಾರಿತವಾದ ಶಾಂತಿ ಪ್ರಕ್ರಿಯೆಯಾಗಿದೆ. ನಾವು ಯಶಸ್ವಿಯಾಗುತ್ತೇವೆ, ಏಕೆಂದರೆ ನಾವು ಗೆಲ್ಲಲು ಮಾತ್ರ ತಿಳಿದಿದ್ದೇವೆ ಎಂದು ವಿಶ್ವಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ,(ಏಜೆನ್ಸೀಸ್).