Donald Trump | ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump: ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ನೌಕೆಗಳ ಮೇಲೆ ಹಾಗೂ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೈನಿಕರ ಮೇಲೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಡೆಸಲು ಯತ್ನಿಸಿದ ದಾಳಿಗಳ ಬಳಿಕ, ಇರಾನ್ ಮೇಲೆ ವಾಯುದಾಳಿಗಳನ್ನು ಆರಂಭಿಸಿರುವುದಾಗಿ ಅಮೆರಿಕ ಮಿಲಿಟರಿ ತಿಳಿಸಿದೆ. ಈ ದಾಳಿಗಳ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿ, ಅತಿ ದೊಡ್ಡ ದಾಳಿ ಇನ್ನು ಮುಂದೆ ನಡೆಯಲಿದೆ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಇರಾನ್‌ನಲ್ಲಿರುವ ಐಆರ್‌ಜಿಸಿ ಗುರಿಗಳ ಮೇಲೆ ಅಮೆರಿಕದ ಪಡೆಗಳು ದಾಳಿ ಆರಂಭಿಸಿವೆ ಎಂದು ತಿಳಿಸಿದೆ.
ಇಂದು ಮಧ್ಯಾಹ್ನ 12 ಗಂಟೆಗೆ (ಇಂಟರ್ನ್ಯಾಷನಲ್ ಟೈಮ್), ಯುಎಸ್ ಪಡೆಗಳು ಇರಾನ್‌ನಲ್ಲಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುರಿಗಳ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದವು. ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ನೌಕೆಗಳ ಮೇಲೆ ಮತ್ತು ಈ ಪ್ರದೇಶದಲ್ಲಿ ನಿಯೋಜಿಸಲಾದ ಅಮೆರಿಕದ ಸೇನಾ ಸಿಬ್ಬಂದಿಯ ಮೇಲೆ ಐಆರ್‌ಜಿಸಿ ಇತ್ತೀಚೆಗೆ ನಡೆಸಲು ಯತ್ನಿಸಿದ ದಾಳಿಗಳ ನಂತರ ಈ ಪ್ರತಿದಾಳಿಗಳನ್ನು ನಡೆಸಲಾಗಿದೆ ಎಂದು ಆ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ನಾಲ್ಕು ಕ್ಷಿಪಣಿಗಳು ನಗರಗಳಿಗೆ ಅಪ್ಪಳಿಸಿವೆ ಎಂದು ಇರಾನ್ ದಾವೆ
ಹೊರ್ಮುಜ್ ಜಲಸಂಧಿಯ ಪೂರ್ವ ಭಾಗದಲ್ಲಿರುವ ಚಾಬಹಾರ್ ಮತ್ತು ಕೊನಾರಕ್ ನಗರಗಳ ಮೇಲೆ ನಾಲ್ಕು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಎನ್ಎ ವರದಿ ಮಾಡಿದೆ. ಆದರೆ ಇದರಿಂದ ಯಾವುದೇ ಹಾನಿ ಸಂಭವಿಸಿದೆಯೇ ಎಂಬುದರ ಕುರಿತು ಅದು ಸ್ಪಷ್ಟಪಡಿಸಿಲ್ಲ. ಅನೇಕ ವಾರಗಳ ಬಳಿಕ ಭಾನುವಾರ ಮೊದಲ ಬಾರಿಗೆ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿ, ಇರಾನ್‌ನ ದ್ವೀಪವೊಂದನ್ನು ಗುರಿಯಾಗಿಸಿಕೊಂಡಿತ್ತು. ಇಸ್ಲಾಮಿಕ್ ಗಣರಾಜ್ಯವು ನೌಕಾ ಮಾರ್ಗದಲ್ಲಿ ಮತ್ತಷ್ಟು ಮೈನ್‌ಗಳನ್ನು ಅಳವಡಿಸುವುದನ್ನು ತಡೆಯಲು ಲಾರಾಕ್ ದ್ವೀಪದಲ್ಲಿರುವ ಇರಾನ್‌ನ ರಾಕೆಟ್ ಲಾಂಚರ್‌ಗಳ ಮೇಲೆ ತಮ್ಮ ಸೇನೆಯು ದಾಳಿ ನಡೆಸಿದೆ ಎಂದು ಅಮೆರಿಕ ತಿಳಿಸಿತ್ತು.
ಈ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್, ಜೋರ್ಡಾನ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿತು, ಆದರೆ ಅವುಗಳನ್ನು ಯಶಸ್ವಾಗಿ ತಡೆಯಲಾಯಿತು. ಹಾಗೆಯೇ ಯುಎಇ ಕೂಡ ತನ್ನ ನೀರಿನ ಮೇಲೆ ಹಾರುತ್ತಿದ್ದ ಇರಾನ್‌ನ ಡ್ರೋನ್ ಒಂದನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಅತಿ ದೊಡ್ಡ ದಾಳಿ ಬಾಕಿ ಇದೆ: ಟ್ರಂಪ್ ಎಚ್ಚರಿಕೆ
ಈ ದಾಳಿಗಳ ಮಧ್ಯೆ, ಇತ್ತೀಚಿನ ಯುಎಸ್ ದಾಳಿಗಳಿಗೆ ಪ್ರತಿಕ್ರಿಯಿಸದಂತೆ ಮಂಗಳವಾರ ಟ್ರೂತ್ ಸೋಶಿಯಲ್ ಪೋಸ್ಟ್ ಮೂಲಕ ಇರಾನ್‌ಗೆ ಎಚ್ಚರಿಕೆ ನೀಡಿರುವ ಟ್ರಂಪ್, ಒಂದು ವೇಳೆ ಇರಾನ್ ತಿರುಗೇಟು ನೀಡಿದರೆ ತುಂಬಾ ಕಠಿಣ ಮತ್ತು ದೊಡ್ಡ ಮಟ್ಟದ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ವಿಫಲ ರಾಷ್ಟ್ರವಾಗಿರುವ ಇರಾನ್ ಈ ಸಮರ್ಥನೀಯ ದಾಳಿಗೆ ಪ್ರತಿಕ್ರಿಯಿಸಿದರೆ, ಅವುಗಳ ಮೇಲೆ ಮತ್ತೊಮ್ಮೆ ಅತ್ಯಂತ ಕಠಿಣ ಹಾಗೂ ಉನ್ನತ ಮಟ್ಟದಲ್ಲಿ ದಾಳಿ ನಡೆಸಲಾಗುವುದು. ಆದರೆ ಇದು ಅಂತಿಮ ಹಾಗೂ ಅತಿ ದೊಡ್ಡ ದಾಳಿಯಲ್ಲ, ಅಂತಹ ಅತಿ ದೊಡ್ಡ ದಾಳಿ ಮುಂದೆ ಕಾಯುತ್ತಿದೆ ಮತ್ತು ಅದು ಮುಗಿದಾಗ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಗುರುತು ಕೂಡ ಉಳಿಯುವುದಿಲ್ಲ ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್‌ನ ನಿರಂತರ ಬಾಂಬ್ ದಾಳಿಯಿಂದ ಇರಾನ್ ಒಂದು ವಿಫಲ ರಾಷ್ಟ್ರವಾಗಿ ಮಾರ್ಪಟ್ಟಿದೆ ಎಂದು ಸೋಮವಾರ ಟ್ರಂಪ್ ಹೇಳಿಕೊಂಡಿದ್ದರು. ಇರಾನ್‌ನ ನಾಯಕತ್ವವು ನಿರ್ನಾಮವಾಗಿದೆ, ಅದರ ಮಿಲಿಟರಿ ಧ್ವಂಸಗೊಂಡಿದೆ ಮತ್ತು ಆರ್ಥಿಕತೆಯು ಅಧೋಗತಿಗೆ ಇಳಿದಿದೆ ಎಂದ ಅವರು, ಆದರೂ ಮುಂದೆಯೂ ಹೆಚ್ಚಿನ ದಾಳಿಗಳು ಅಗತ್ಯವಾಗಬಹುದು. ಅದರರ್ಥ ನಾವು ಅವರ ಮೇಲೆರಗುವುದಿಲ್ಲ ಎಂದಲ್ಲ, ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟ್ರಂಪ್ ಹೇಳಿದರು.
ಟ್ರಂಪ್ ಡಿ-ಡೇ ಯೋಜನೆ
ಅಮೆರಿಕದ ದಿಗ್ಬಂಧನಗಳನ್ನು ದಶಕಗಳಿಂದ ಎದುರಿಸುತ್ತಿರುವ ಇರಾನ್ ಮೇಲೆ ಆರ್ಥಿಕ ಡಿ-ಡೇ ಜಾರಿಗೊಳಿಸಿ ಮಂಡಿಯೂರಿಸುವುದಾಗಿ ಟ್ರಂಪ್ ಘೊಷಿಸಿದ್ದರು. ಆದರೆ, ಅಮೆರಿಕದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕೊರತೆ ಎದುರಾಗಿದೆ ಮತ್ತು ಈ ಯುದ್ಧವು ಜನಪ್ರಿಯತೆ ಕಳೆದುಕೊಂಡಿದ್ದು, ಇದು ನವೆಂಬರ್‌ನ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ತೊಂದರೆ ತರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್).