ಟ್ರಂಪ್ ವರ್ಸಸ್ ಇರಾನ್: ನೆತನ್ಯಾಹುರನ್ನ ಬ್ಲಾಕ್ ಮಾಡಿ ಸ್ವಲ್ಪ ನಿದ್ದೆ ಮಾಡಿ! ಅಮೆರಿಕ ಅಧ್ಯಕ್ಷರಿಗೆ ಇರಾನ್ ಲೇವಡಿ! 
ವಿದೇಶ

ಟ್ರಂಪ್ ವರ್ಸಸ್ ಇರಾನ್: ನೆತನ್ಯಾಹುರನ್ನ ಬ್ಲಾಕ್ ಮಾಡಿ ಸ್ವಲ್ಪ ನಿದ್ದೆ ಮಾಡಿ! ಅಮೆರಿಕ ಅಧ್ಯಕ್ಷರಿಗೆ ಇರಾನ್ ಲೇವಡಿ! Iran trolls trump

ಟೆಹ್ರಾನ್: ಮಧ್ಯಪ್ರಾಚ್ಯದ ರಕ್ತಸಿಕ್ತ ಸಂಘರ್ಷ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿ ಹೋರ್ಮುಜ್ ಜಲಸಂಧಿಯ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್(Iran trolls trump) ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ಟ್ರಂಪ್ ಅವರ ಸರಣಿ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಪ್ರತಿಯಾಗಿ ಇರಾನ್ ರಾಯಭಾರ ಕಚೇರಿ ನೀಡಿರುವ ವ್ಯಂಗ್ಯಭರಿತ ಸಲಹೆಗಳು ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.

ಇರಾನ್ 'ಟ್ರೋಲ್' ಅಸ್ತ್ರ: ಸಲಹೆಗಳ ಪಟ್ಟಿ ಇಲ್ಲಿದೆ!

ಜಿಂಬಾಬ್ವೆಯಲ್ಲಿರುವ ಇರಾನ್ ರಾಯಭಾರ ಕಚೇರಿಯು ಡೊನಾಲ್ಡ್ ಟ್ರಂಪ್ ಅವರ ಆತುರದ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಅತ್ಯಂತ ಚಾಣಾಕ್ಷತನದಿಂದ ಲೇವಡಿ ಮಾಡಿದೆ.
ಗಾಂಭೀರ್ಯ ಕಾಪಾಡಿಕೊಳ್ಳಿ: ತುಂಬಾ ಸಂಭ್ರಮ ಪಡಬೇಡಿ, ಸ್ವಲ್ಪ ಘನತೆ ಪ್ರದರ್ಶಿಸಿ ಎಂದು ಇರಾನ್​ ವ್ಯಂಗ್ಯವಾಡಿದೆ.
ಹೋರ್ಮುಜ್ ಜಲಸಂಧಿಯ ಕನಸು ಬಿಡಿ: ಇರಾನ್ ಜಲಸಂಧಿಯ ಹೊಸ ಕಾನೂನು ವ್ಯವಸ್ಥೆಯ ಬಗ್ಗೆ ಯೋಚಿಸಬೇಡಿ, ಅದನ್ನು ನಾವು ನೋಡಿಕೊಳ್ಳುತ್ತೇವೆ. ಅಲ್ಲದೆ, ಫೋನ್ ಸ್ವಿಚ್ ಆಫ್ ಮಾಡಿ ಆರಾಮಾಗಿರಿ. ಇನ್ನು ಮುಂದೆ ಪೋಸ್ಟ್ ಹಾಕಬೇಡಿ. ಮುಖ್ಯವಾಗಿ, ಇಸ್ರೇಲ್ ಪ್ರಧಾನಿ 'ಬಿಬಿ' (ನೆತನ್ಯಾಹು) ಅವರನ್ನು ಒಂದು ವಾರ ಬ್ಲಾಕ್ ಮಾಡಿ ಎಂದು ಟ್ರಂಪ್​ರ ಕಾಲೆಳೆದಿದೆ.
ಹೋರ್ಮುಜ್ ಜಲಸಂಧಿ: ಬಿಡುಗಡೆ ಮತ್ತು ಬೆದರಿಕೆಯ ನಡುವೆ
ವಿಶ್ವದ ಒಟ್ಟು ತೈಲ ಪೂರೈಕೆಯ ಶೇಕಡಾ 20ರಷ್ಟು ಭಾಗ ಸಾಗುವ ಹೋರ್ಮುಜ್ ಜಲಸಂಧಿಯನ್ನು ಇರಾನ್ ಶುಕ್ರವಾರ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಿದೆ. ಆದರೆ, ಈ ಮುಕ್ತ ಸಂಚಾರದ ಹಿಂದೆ ಇರಾನ್ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ.
ನಿಯಂತ್ರಣ ಯಾರದ್ದು: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಸ್ಪಷ್ಟಪಡಿಸಿರುವಂತೆ, ಹಡಗುಗಳು ಇರಾನ್ ಸೂಚಿಸಿದ ಮಾರ್ಗದಲ್ಲೇ ಚಲಿಸಬೇಕು.
ಮತ್ತೆ ಮುಚ್ಚುವ ಎಚ್ಚರಿಕೆ: ಅಮೆರಿಕವು ಇರಾನ್ ಹಡಗುಗಳು ಮತ್ತು ಬಂದರುಗಳ ಮೇಲೆ ವಿಧಿಸಿರುವ ದಿಗ್ಬಂಧನವನ್ನು ಮುಂದುವರಿಸಿದರೆ, ಜಲಸಂಧಿಯನ್ನು ಮತ್ತೆ ಮುಚ್ಚುವುದಾಗಿ ಇರಾನ್ ಎಚ್ಚರಿಸಿದೆ.

ಟ್ರಂಪ್ ನಿಲುವು: ಬಾಂಬ್ ದಾಳಿ ಅನಿವಾರ್ಯವಾದೀತು

ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಂದಿನಂತೆ ತಮ್ಮ ಕಠಿಣ ನಿಲುವನ್ನು ಮುಂದುವರಿಸಿದ್ದಾರೆ. ಇರಾನ್‌ನೊಂದಿಗೆ ನೂರಕ್ಕೆ ನೂರರಷ್ಟು ಒಪ್ಪಂದವಾಗುವವರೆಗೆ ಅಮೆರಿಕದ ನೌಕಾಪಡೆಯ ದಿಗ್ಬಂಧನ ಮುಂದುವರಿಯಲಿದೆ ಎಂದು ಗುಡುಗಿದ್ದಾರೆ.
ಒಂದು ವೇಳೆ ಮುಂದಿನ ವಾರ ಕದನ ವಿರಾಮದ ಅವಧಿ ಮುಗಿದು, ಯಾವುದೇ ಒಪ್ಪಂದ ಏರ್ಪಡದಿದ್ದರೆ ನಾವು ಅನಿವಾರ್ಯವಾಗಿ ಮತ್ತೆ ಬಾಂಬ್ ದಾಳಿ ನಡೆಸಬೇಕಾಗುತ್ತದೆ ಎಂದು ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಟ್ರಂಪ್ ಎಚ್ಚರಿಸಿದ್ದಾರೆ.

ಏಕೆ ಈ ಬಿಕ್ಕಟ್ಟು ಪ್ರಮುಖವಾದುದು..?

ಈ ಸಂಘರ್ಷವು ಕೇವಲ ಎರಡು ದೇಶಗಳ ನಡುವಿನ ಜಗಳವಲ್ಲ, ಇದು ಜಾಗತಿಕ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿದೆ.
ತೈಲ ದರ ಏರಿಕೆ: ಹೋರ್ಮುಜ್ ಜಲಸಂಧಿ ಬಂದ್ ಆದರೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಲಿದೆ.
ರಕ್ಷಣಾ ನೀತಿ: ಅಮೆರಿಕವು ಇರಾನ್ ಮೇಲೆ ಒತ್ತಡ ಹೇರಲು ಇಸ್ರೇಲ್ ಮತ್ತು ಲೆಬನಾನ್ ಕದನ ವಿರಾಮವನ್ನು ದಾಳವಾಗಿ ಬಳಸುತ್ತಿದೆ.
ರಾಜತಾಂತ್ರಿಕ ಸಂಘರ್ಷ: ಇರಾನ್ ತನ್ನ ಸಾರ್ವಭೌಮತ್ವವನ್ನು ಪ್ರದರ್ಶಿಸಲು ಜಲಸಂಧಿಯ ಮೇಲೆ ಸುಂಕ ಅಥವಾ ನಿಯಮಗಳನ್ನು ಹೇರಲು ಯತ್ನಿಸುತ್ತಿದೆ, ಇದನ್ನು ಅಮೆರಿಕ ಸಾರಾಸಗಟಾಗಿ ತಿರಸ್ಕರಿಸಿದೆ,(ಏಜೆನ್ಸೀಸ್).