Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಂತಿರುವ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದ್ದು, ಇರಾನ್ ಜೊತೆಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಪ್ರಮುಖ ಜಲಮಾರ್ಗವು ಅಡೆತಡೆಗಳನ್ನು ಎದುರಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗಂಭೀರ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸಲು ಅಮೆರಿಕ ಒಂದೇ ಹೋರಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಾಗತಿಕ ವ್ಯಾಪಾರ ಮತ್ತು ಇಂಧನ ಸಾಗಣೆಯ ಹಿತದೃಷ್ಟಿಯಿಂದ ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಪ್ರಮುಖ ದೇಶಗಳು ತಮ್ಮ ಯುದ್ಧನೌಕೆಗಳನ್ನು ಈ ಪ್ರದೇಶಕ್ಕೆ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಬಹುರಾಷ್ಟ್ರೀಯ ನೌಕಾ ಪಡೆಯ ಉಪಸ್ಥಿತಿಯಿಂದ ಮಾತ್ರ ಇರಾನ್‌ನ ಬೆದರಿಕೆಯನ್ನು ತಡೆಯಲು ಸಾಧ್ಯ ಎನ್ನುವುದು ಟ್ರಂಪ್ ವಾದ.
ಇರಾನ್‌ನ ಸಾಮರ್ಥ್ಯದ ಮೇಲೆ ದಾಳಿ
ಅಮೆರಿಕವು ಈಗಾಗಲೇ ಇರಾನ್‌ನ ಶೇಕಡಾ 100 ರಷ್ಟು ಮಿಲಿಟರಿ ಸಾಮರ್ಥ್ಯವನ್ನು ನಾಶಪಡಿಸಿದೆ ಎಂದು ಟ್ರಂಪ್ ಹೇಳಿಕೊಂಡಿದ್ದು, ಆದರೂ, ಇರಾನ್ ಇನ್ನೂ ಸಣ್ಣ ಮಟ್ಟದ ಗೆರಿಲ್ಲಾ ಮಾದರಿಯ ದಾಳಿಗಳನ್ನು ನಡೆಸುವ ಸಾಧ್ಯತೆಯಿದೆ. ಡ್ರೋನ್‌ಗಳು, ಸಮುದ್ರದಲ್ಲಿ ಹೂತಿಟ್ಟ ಮೈನ್‌ಗಳು ಅಥವಾ ಅಲ್ಪ-ಶ್ರೇಣಿಯ ಕ್ಷಿಪಣಿಗಳನ್ನು ಬಳಸಿ ವ್ಯಾಪಾರಿ ಹಡಗುಗಳಿಗೆ ಇರಾನ್ ಅಪಾಯವನ್ನುಂಟುಮಾಡಬಹುದು ಎಂದು ಟ್ರಂಪ್ ಆತಂಕ ವ್ಯಕ್ತಪಡಿಸಿದ್ದಾರೆ.
ಇರಾನ್ ಕರಾವಳಿಯ ಬಳಿ ಅಮೆರಿಕದ ಪಡೆಗಳು ತಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಿವೆ. ಮಾರ್ಗಕ್ಕೆ ಬೆದರಿಕೆ ಹಾಕುವ ಯಾವುದೇ ಇರಾನಿನ ದೋಣಿಗಳು ಅಥವಾ ಯುದ್ಧನೌಕೆಗಳು ಕಂಡುಬಂದರೆ ತಕ್ಷಣವೇ ಅವುಗಳ ಮೇಲೆ ದಾಳಿ ಮಾಡಲು ಸೂಚಿಸಲಾಗಿದೆ. ನಾವು ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಕ್ತ, ಸುರಕ್ಷಿತ ಮತ್ತು ಭಯಮುಕ್ತಗೊಳಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯ ಮಹತ್ವ
ವಿಶ್ವದ ಒಟ್ಟು ತೈಲ ರಫ್ತಿನ ಬಹುಪಾಲು ಈ ಕಿರಿದಾದ ಜಲಮಾರ್ಗದ ಮೂಲಕವೇ ಹಾದುಹೋಗುತ್ತದೆ. ಇದು ಬಂದ್ ಆದರೆ ಅಥವಾ ಇಲ್ಲಿ ದಾಳಿಗಳು ನಡೆದರೆ ಜಾಗತಿಕ ತೈಲ ಬೆಲೆ ಗಗನಕ್ಕೇರಲಿದೆ. ಇಂತಹ ಸನ್ನಿವೇಶದ ನಡುವೆಯೂ, ಭಾರತದ ನೌಕೆಗಳಿಗೆ ಸುರಕ್ಷಿತ ಮಾರ್ಗ ಕಲ್ಪಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಕುತೂಹಲ ಮೂಡಿಸಿದೆ(ಏಜೆನ್ಸೀಸ್).