ಡೆಡ್‌ಲೈನ್' ಮುಗಿಯುವ ಮೊದಲೇ ಟ್ರಂಪ್ ಯು-ಟರ್ನ್! ಇರಾನ್ ಮೇಲಿನ ಭೀಕರ ದಾಳಿಯನ್ನು 5 ದಿನ ಮುಂದೂಡಿದ ಯುಎಸ್ ಅಧ್ಯಕ್ಷ!
- ಇರಾನ್ ಇಂಧನ ಕೇಂದ್ರಗಳ ಮೇಲಿನ ದಾಳಿ 5 ದಿನ ಮುಂದೂಡಿಕೆ.
- ಇರಾನ್ ಜೊತೆಗಿನ ಮಾತುಕತೆ 'ಅತ್ಯಂತ ಫಲಪ್ರದ' ಮತ್ತು 'ಸಕಾರಾತ್ಮಕ ಎಂದು ಟ್ರಂಪ್ ಹೇಳಿಕೆ
- ಮಾತುಕತೆ ಬಗ್ಗೆ ಇರಾನ್‌ನಿಂದ ಈವರೆಗೆ ಅಧಿಕೃತ ಸಮರ್ಥನೆ ಹೊರಬಂದಿಲ್ಲ.
ನ್ಯೂಯಾರ್ಕ್: ಕಳೆದ ಕೆಲವು ದಿನಗಳಿಂದ ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇರಾನ್‌ನ ಇಂಧನ ಮೂಲಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನೆಲಸಮ ಮಾಡುವುದಾಗಿ ಎಚ್ಚರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಈಗ ತಮ್ಮ ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ. ಕಳೆದ ಎರಡು ದಿನಗಳಿಂದ ನಡೆದ ರಹಸ್ಯ ಮತ್ತು ಫಲಪ್ರದ ಮಾತುಕತೆಗಳ ಹಿನ್ನೆಲೆಯಲ್ಲಿ, ಇರಾನ್ ಮೇಲಿನ ಮಿಲಿಟರಿ ದಾಳಿಯನ್ನು ಮುಂದಿನ 5 ದಿನಗಳ ಕಾಲ ಸ್ಥಗಿತಗೊಳಿಸುವಂತೆ ಟ್ರಂಪ್ ಆದೇಶಿಸಿದ್ದಾರೆ.
ಟ್ರಂಪ್‌ರ 'ಟ್ರೂತ್ ಸೋಶಿಯಲ್' ಸಂದೇಶ: ಯುದ್ಧದ ಬದಲಿಗೆ ಸಂಧಾನ..?
ಈ ಬಗ್ಗೆ ತಮ್ಮ ಟ್ರೂತ್ ಸೋಶಿಯಲ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಳೆದ ಎರಡು ದಿನಗಳಿಂದ ಇರಾನ್ ಜೊತೆ ಅತ್ಯಂತ ಆಳವಾದ ಮತ್ತು ರಚನಾತ್ಮಕ ಚರ್ಚೆಗಳು ನಡೆದಿವೆ. ಈ ಮಾತುಕತೆಗಳ ಸಕಾರಾತ್ಮಕ ಧೋರಣೆಯನ್ನು ಗಮನಿಸಿ, ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಎಲ್ಲಾ ದಾಳಿಗಳನ್ನು 5 ದಿನಗಳ ಕಾಲ ಮುಂದೂಡುವಂತೆ ನಾನು ಯುದ್ಧ ಇಲಾಖೆಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಈ ಮಾತುಕತೆಗಳು ವಾರದ ಪೂರ್ತಿ ಮುಂದುವರಿಯಲಿವೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
48 ಗಂಟೆಗಳ ಗಡುವು ಮತ್ತು ಹಾರ್ಮುಜ್ ಬಿಕ್ಕಟ್ಟು
ಕೇವಲ ಒಂದು ದಿನದ ಹಿಂದೆಯಷ್ಟೇ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದರು. ಜಾಗತಿಕ ಕಚ್ಚಾ ತೈಲದ ಶೇ. 20ರಷ್ಟು ಭಾಗ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯನ್ನು ಕೂಡಲೇ ಮುಕ್ತಗೊಳಿಸದಿದ್ದರೆ ಇರಾನ್‌ನ ಇಂಧನ ಸಾಮ್ರಾಜ್ಯವನ್ನೇ ಧೂಳೀಪಟ ಮಾಡುವುದಾಗಿ 48 ಗಂಟೆಗಳ ಗಡುವು ನೀಡಿದ್ದರು. ಇರಾನ್ ಈ ಜಲಸಂಧಿಯನ್ನು ತನ್ನ ಶತ್ರು ರಾಷ್ಟ್ರಗಳಿಗೆ ಮಾತ್ರ ಬಂದ್ ಮಾಡಿರುವುದಾಗಿ ಹೇಳಿಕೊಂಡಿತ್ತು. ಈ ಬಿಕ್ಕಟ್ಟು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭೀತಿ ಸೃಷ್ಟಿಸಿತ್ತು.
ಇರಾನ್ ಅಧ್ಯಕ್ಷರ ಪ್ರತಿರೋಧ ಮತ್ತು ರಹಸ್ಯ ಮಾತುಕತೆ
ಒಂದೆಡೆ ಟ್ರಂಪ್ ಮಾತುಕತೆ ಯಶಸ್ವಿಯಾಗಿದೆ ಎಂದು ಹೇಳುತ್ತಿದ್ದರೆ, ಇರಾನ್ ಮಾತ್ರ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭಾನುವಾರವಷ್ಟೇ Xನಲ್ಲಿ ಪೋಸ್ಟ್ ಮಾಡಿ, ಇರಾನ್ ಅನ್ನು ಭೂಪಟದಿಂದ ಅಳಿಸಿ ಹಾಕುವ ಭ್ರಮೆಯು ಇತಿಹಾಸ ನಿರ್ಮಿಸಿದ ರಾಷ್ಟ್ರದ ವಿರುದ್ಧದ ಹತಾಶೆಯನ್ನು ತೋರಿಸುತ್ತದೆ. ಬೆದರಿಕೆಗಳು ನಮ್ಮ ಏಕತೆಯನ್ನು ಹೆಚ್ಚಿಸುತ್ತವೆ ಎಂದು ಗುಡುಗಿದ್ದರು. ಆದರೆ, ತೆರೆಮರೆಯ ರಾಜತಾಂತ್ರಿಕ ಚರ್ಚೆಗಳು ಟ್ರಂಪ್ ಮನವೊಲಿಸುವಲ್ಲಿ ಯಶಸ್ವಿಯಾದಂತೆ ಕಾಣುತ್ತಿದೆ.
ಜಾಗತಿಕ ನಿಟ್ಟುಸಿರು: ಯುದ್ಧ ನಿಲ್ಲುತ್ತದೆಯೇ..?
ಮಧ್ಯಪ್ರಾಚ್ಯದ ಈ ಸಂಘರ್ಷ ಇಡೀ ಏಷ್ಯಾದ ಆರ್ಥಿಕತೆಯ ಮೇಲೆ ಕರಾಳ ಛಾಯೆ ಮೂಡಿಸಿತ್ತು. ಈಗ 5 ದಿನಗಳ ಕಾಲ ದಾಳಿ ನಡೆಯುವುದಿಲ್ಲ ಎಂಬ ಸುದ್ದಿ ತೈಲ ಮಾರುಕಟ್ಟೆಯಲ್ಲಿ ತುಸು ಸಮಾಧಾನ ತಂದಿದೆ. ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ಮತ್ತು ಇರಾನ್ ನಾಯಕರ ಹತ್ಯೆಯ ನಂತರದ ಉದ್ವಿಗ್ನತೆ ಈ 5 ದಿನಗಳ ಸಂಧಾನದ ಮೂಲಕ ಅಂತ್ಯಗೊಳ್ಳುತ್ತದೆಯೇ ಎಂಬುದು ಈಗ ಕುತೂಹಲದ ವಿಷಯವಾಗಿದೆ,(ಏಜೆನ್ಸೀಸ್).