ಇರಾನ್ ಕಳುಹಿಸಿದ್ದ ಪತ್ರವನ್ನು ಕಸದ ಬುಟ್ಟಿಗೆ ಎಸೆದ ಟ್ರಂಪ್! ಎಪಿಕ್ ಫ್ಯೂರಿ 2.0 ದಾಳಿಯ ಹಿಂದೆ ಅಡಗಿದೆಯೇ ಇಸ್ರೇಲ್ ಮಾಸ್ಟರ್ ಪ್ಲಾನ್? 
ವಿದೇಶ

ಇರಾನ್ ಕಳುಹಿಸಿದ್ದ ಪತ್ರವನ್ನು ಕಸದ ಬುಟ್ಟಿಗೆ ಎಸೆದ ಟ್ರಂಪ್! ಎಪಿಕ್ ಫ್ಯೂರಿ 2.0 ದಾಳಿಯ ಹಿಂದೆ ಅಡಗಿದೆಯೇ ಇಸ್ರೇಲ್ ಮಾಸ್ಟರ್ ಪ್ಲಾನ್? Operation Epic Fury 2.0

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆ ಈಗ ಉತ್ತುಂಗಕ್ಕೆ ತಲುಪಿದೆ. ಚೀನಾ ಪ್ರವಾಸ ಮುಗಿಸಿ ವಾಪಸ್ ಆಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Operation Epic Fury 2.0) ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ದಟ್ಟವಾಗಿದೆ. ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದರೆ, ಇರಾನ್ ಮೇಲೆ ಅಮೆರಿಕದ ವಾಯುದಾಳಿಗಳು ಮರುಪ್ರಾರಂಭವಾಗಲಿವೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ಬೃಹತ್ ವಾಯುದಾಳಿಗೆ ಅಮೆರಿಕ ಸೇನೆಯು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇರಾನ್ ಶಾಂತಿ ಪ್ರಸ್ತಾಪವನ್ನು ಕಸದ ಬುಟ್ಟಿಗೆಸೆದ ಟ್ರಂಪ್!

ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಪುನಃ ಮುಕ್ತಗೊಳಿಸಲು ಮತ್ತು ಯುದ್ಧವನ್ನು ತಪ್ಪಿಸಲು ಹಲವು ದೇಶಗಳು ಇರಾನ್ ಮತ್ತು ಅಮೆರಿಕ ನಡುವೆ ಸಂಧಾನಕ್ಕೆ ಯತ್ನಿಸುತ್ತಿವೆ. ಆದರೆ ಇರಾನ್ ಇತ್ತೀಚೆಗೆ ಕಳುಹಿಸಿದ್ದ ಶಾಂತಿ ಪ್ರಸ್ತಾಪವನ್ನು ಟ್ರಂಪ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಬೀಜಿಂಗ್‌ನಿಂದ ಏರ್ ಫೋರ್ಸ್ ಒನ್ ವಿಮಾನದಲ್ಲಿ ವಾಪಸ್ ಆಗುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ನಾನು ಆ ಪ್ರಸ್ತಾಪವನ್ನು ನೋಡಿದೆ. ನನಗೆ ಅದರ ಮೊದಲ ವಾಕ್ಯವೇ ಇಷ್ಟವಾಗದಿದ್ದರೆ, ನಾನು ಅದನ್ನು ಕಸದ ಬುಟ್ಟಿಗೆ ಎಸೆಯುತ್ತೇನೆ ಎಂದು ಅಹಂಕಾರದ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಇಸ್ರೇಲ್ ಜೊತೆ ಸೇರಿ ಅಮೆರಿಕ ಬೃಹತ್ ಜಂಟಿ ಸಮರಭ್ಯಾಸ!

ಕಳೆದ ತಿಂಗಳು ಘೋಷಣೆಯಾಗಿದ್ದ ಕದನ ವಿರಾಮದ ನಂತರ, ಇದೀಗ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇತಿಹಾಸದಲ್ಲೇ ಅತ್ಯಂತ ದೊಡ್ಡ ಜಂಟಿ ಮಿಲಿಟರಿ ಕಾರ್ಯಾಚರಣೆಗೆ ತಯಾರಿ ನಡೆಸುತ್ತಿವೆ. ಪೆಂಟಗನ್ ಮೂಲಗಳ ಪ್ರಕಾರ, ಇರಾನ್ ವಿರುದ್ಧ ಜಂಟಿ ವಾಯುದಾಳಿಯ ಆಪರೇಷನ್ ಎಪಿಕ್ ಫ್ಯೂರಿಯನ್ನು ಹೊಸ ಹೆಸರಿನಲ್ಲಿ ಮರುಪ್ರಾರಂಭಿಸಲು ಸಿದ್ಧತೆಗಳು ನಡೆದಿವೆ. ಮಧ್ಯಪ್ರಾಚ್ಯದ ಇಬ್ಬರು ಉನ್ನತ ಅಧಿಕಾರಿಗಳ ಪ್ರಕಾರ, ಇರಾನ್ ಮೇಲಿನ ಈ ಭೀಕರ ವಾಯುದಾಳಿಗಳು ಮುಂದಿನ ವಾರದ ಆರಂಭದಲ್ಲೇ ಪ್ರಖರಗೊಳ್ಳುವ ಸಾಧ್ಯತೆಯಿದೆ.

ಟ್ರಂಪ್-ಷಿ ಜಿನ್‌ಪಿಂಗ್ ಭೇಟಿ ಮತ್ತು ಇರಾನ್ ಲಿಂಕ್

ಇರಾನ್‌ಗೆ ಚೀನಾ ದೊಡ್ಡ ಮಿತ್ರರಾಷ್ಟ್ರವಾಗಿದ್ದು, ಹೊರ್ಮುಜ್ ಜಲಸಂಧಿಯ ಮೂಲಕ ಬರುವ ತೈಲದ ಮೇಲೆಯೇ ಚೀನಾ ಹೆಚ್ಚು ಅವಲಂಬಿತವಾಗಿದೆ. ಟ್ರಂಪ್ ಅವರು ಜಿನ್‌ಪಿಂಗ್ ಭೇಟಿಯ ವೇಳೆ ಇರಾನ್ ವಿಷಯ ಚರ್ಚಿಸಿದ್ದರೂ, ಇರಾನ್ ಮೇಲೆ ಒತ್ತಡ ಹೇರುವಂತೆ ಚೀನಾಗೆ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವಂತಿಲ್ಲ ಮತ್ತು ಹೊರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸಬೇಕು ಎಂಬುದಕ್ಕೆ ಚೀನಾ ಕೂಡ ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿದ ಟ್ರಂಪ್, ನಾವು ಹೊರ್ಮುಜ್ ಜಲಸಂಧಿಯನ್ನು ನಿಯಂತ್ರಿಸುತ್ತಿದ್ದೇವೆ. ಕಳೆದ ಎರಡುವರೆ ವಾರಗಳಿಂದ ಇರಾನ್ ಯಾವುದೇ ವ್ಯಾಪಾರ ಮಾಡಿಲ್ಲ. ಇದರಿಂದಾಗಿ ಇರಾನ್‌ಗೆ ಪ್ರತಿದಿನ ಸುಮಾರು 500 ಮಿಲಿಯನ್ ಡಾಲರ್ (ಅಂದಾಜು ₹4,100 ಕೋಟಿಗೂ ಅಧಿಕ) ನಷ್ಟವಾಗುತ್ತಿದೆ ಎಂದಿದ್ದಾರೆ.

ತೈವಾನ್ ವಿಚಾರವಾಗಿ ಚೀನಾ ತೀವ್ರ ಎಚ್ಚರಿಕೆ

ಈ ಶೃಂಗಸಭೆಯಲ್ಲಿ ತೈವಾನ್ ಬಿಕ್ಕಟ್ಟು ಕೂಡ ಪ್ರಮುಖವಾಗಿ ಚರ್ಚೆಯಾಯಿತು. ತೈವಾನ್ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರೆ ಅದು ಅಮೆರಿಕ ಮತ್ತು ಚೀನಾ ನಡುವೆ ನೇರ ಯುದ್ಧಕ್ಕೆ ಕಾರಣವಾಗಬಹುದು ಎಂದು ಷಿ ಜಿನ್‌ಪಿಂಗ್ ಖಾಸಗಿಯಾಗಿ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅದರೆ, ಈ ಭೇಟಿಯ ನಂತರ ಉಭಯ ದೇಶಗಳ ನಡುವೆ ಉತ್ತಮ ತಿಳುವಳಿಕೆ ಮೂಡಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್​).