ಗ್ರೀನ್ ಕಾರ್ಡ್ ಲಾಟರಿ ಸ್ಥಗಿತಗೊಳಿಸಿದ ಟ್ರಂಪ್ ಸರ್ಕಾರ
- ಗ್ರೀನ್ ಕಾರ್ಡ್ ಲಾಟರಿ ಸ್ಥಗಿತಗೊಳಿಸಲು ಟ್ರಂಪ್ ಆದೇಶ
- ಏನಿದು ಗ್ರೀನ್ ಕಾರ್ಡ್ ಲಾಟರಿ? ಯಾರಿಗೆಲ್ಲ ತೊಂದರೆ?
- ಈ ಕಾರ್ಡ್ ಸೌಲಭ್ಯ ಸ್ಥಗಿತದಿಂದ ಭಾರತೀಯರಿಗೆ ತೊಂದರೆಯೇ?
ಅಮೆರಿಕ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡೈವರ್ಸಿಟಿ ಇಮಿಗ್ರಂಟ್ ವೀಸಾವನ್ನು (ಗ್ರೀನ್ ಕಾರ್ಡ್ ಲಾಟರಿ) ಇದೀಗ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಬ್ರೌನ್ ವಿಶ್ವವಿದ್ಯಾಲಯ ಮತ್ತು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಗುಂಡಿನ ದಾಳಿಯ ಬೆನ್ನಲ್ಲೇ ಟ್ರಂಪ್ ಆಡಳಿತ ಈ ನಿರ್ಧಾರ ಕೈಗೊಂಡಿದ್ದಾಗಿ ವರದಿಯಾಗಿದೆ.
ಡೈವರ್ಸಿಟಿ ಇಮಿಗ್ರಂಟ್ ವೀಸಾವನ್ನು ಸಾಮಾನ್ಯವಾಗಿ ಗ್ರೀನ್ ಕಾರ್ಡ್ ಲಾಟರಿ ಎಂದು ಕರೆಯಲಾಗುತ್ತದೆ. ಟ್ರಂಪ್ ಅಮೆರಿಕದಲ್ಲಿ ಅಕ್ರಮ ವಲಸೆಯ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಈ ಮೂಲಕ ತಿಳಿದುಬಂದಿದೆ. ಮತ್ತಷ್ಟು ಬಿಗಿಗೊಳಿಸುವ ಕ್ರಮಗಳ ಭಾಗವಾಗಿ ಟ್ರಂಪ್ ಈಗ ಮತ್ತೊಂದು ದಿಟ್ಟ ಹೆಜ್ಜೆಯಿಟ್ಟಿರುವುದು ಇಲ್ಲಿ ಸ್ಪಷ್ಟ. ವೀಸಾಗಳ ಪರಿಶೀಲನೆಯ ಜತೆಗೆ, ಅಧಿಕಾರಿಗಳು ಈಗಾಗಲೇ H1B, H4, F, M, ಮತ್ತು J ವೀಸಾಗಳ ವಿತರಣೆಯ ಬಗ್ಗೆ ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿದ್ದಾರೆ.
ಡಿವಿ1 ಲಾಟರಿ ಏಕೆ ಸ್ಥಗಿತ?
ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಗುಂಡಿನ ದಾಳಿಯಿಂದ ಟ್ರಂಪ್ ತೀವ್ರ ಸಿಟ್ಟಾಗಿದ್ದಾರೆ. ಪೊಲೀಸರು ಗುಂಡಿನ ದಾಳಿಯಲ್ಲಿ ಪೋರ್ಚುಗೀಸ್ ಪ್ರಜೆ ಕ್ಲಾಡಿಯೊ ಮ್ಯಾನುಯೆಲ್ ನೆವ್ಸ್ ವ್ಯಾಲೆಂಟೆ (48) ಎಂಬಾತನ ಕೈವಾಡವಿದೆ ಎಂದು ಶಂಕಿಸಿದ್ದಾರೆ. ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಮ್ ಅವರು ತಮ್ಮ ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಆರೋಪಿ ವ್ಯಾಲೆಂಟೆ 2017ರಲ್ಲಿ ಡೈವರ್ಸಿಟಿ ಲಾಟರಿ ಇಮಿಗ್ರಂಟ್ ವೀಸಾ ಪ್ರೋಗ್ರಾಂ-ಡಿವಿ 1 ಮೂಲಕ ಅಮೆರಿಕಕ್ಕೆ ಪ್ರವೇಶಿಸಿ ಗ್ರೀನ್ ಕಾರ್ಡ್ ಪಡೆದುಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಇದರಿಂದ ಭಾರತೀಯರ ಮೇಲೆ ಏನಾದರೂ ಪರಿಣಾಮ?
ಡಿವಿ 1 ಲಾಟರಿಯನ್ನು ಸ್ಥಗಿತಗೊಳಿಸುವುದರಿಂದ ಭಾರತೀಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಡೈವರ್ಸಿಟಿ ಲಾಟರಿ ವಲಸೆ ವೀಸಾ ಪ್ರೋಗ್ರಾಂ ವಾಸ್ತವವಾಗಿ ನಮಗೆ ಅನ್ವಯಿಸುವುದಿಲ್ಲ. ಅಮೆರಿಕಕ್ಕೆ ಹೆಚ್ಚಿನ ವಲಸೆ ಇರುವುದರಿಂದ ಭಾರತೀಯರು ಈಗಾಗಲೇ 2028 ರವರೆಗೆ ಡೈವರ್ಸಿಟಿ ವೀಸಾಕ್ಕೆ ಅನರ್ಹರಾಗಿದ್ದಾರೆ.
ಈ ಕಾರ್ಯಕ್ರಮದ ನಿಯಮಗಳ ಪ್ರಕಾರ, ಕಳೆದ 5 ವರ್ಷಗಳಲ್ಲಿ 50,000ಕ್ಕೂ ಅಧಿಕ ಜನರನ್ನು ಅಮೆರಿಕಕ್ಕೆ ವಲಸೆ ಕಳುಹಿಸಿರುವ ಯಾವುದೇ ದೇಶವು ಈ ವೀಸಾ ಅರ್ಜಿಗಳಿಗೆ ಅನರ್ಹ. ಭಾರತ ಈ ಮಿತಿಯನ್ನು ಈಗಾಗಲೇ ದಾಟಿಬಿಟ್ಟಿದೆ ಎಂಬುದು ಇಲ್ಲಿ ಗಮನಾರ್ಹ.
- 2021ರಲ್ಲಿ 93,450 ಭಾರತೀಯರು ಅಮೆರಿಕಕ್ಕೆ ವಲಸೆ
- 2022ರಲ್ಲಿ 2.7 ಮಿಲಿಯನ್ ಜನರು
- 2023ರಲ್ಲಿ 78,070 ಮಂದಿ
ಈ ಅಂಕಿಅಂಶಗಳ ಹಿನ್ನೆಲೆ, ಭಾರತ, ಚೀನಾ, ಮೆಕ್ಸಿಕೊ, ಪಾಕಿಸ್ತಾನ, ಫಿಲಿಪೈನ್ಸ್, ದಕ್ಷಿಣ ಕೊರಿಯಾ, ಕೆನಡಾ, ಬ್ರೆಜಿಲ್ ಮತ್ತು ವಿಯೆಟ್ನಾಂನಂತಹ ದೇಶಗಳನ್ನು ಡಿವಿ-2026 ನಂತಹ ಲಾಟರಿಗಳಿಂದ ಹೊರಗಿಡಲಾಗಿದೆ. 2028 ರವರೆಗೆ ಭಾರತೀಯರು ಈ ಲಾಟರಿಯನ್ನು ಪ್ರವೇಶಿಸಲು ಸಾಧ್ಯವೇ ಇಲ್ಲ,(ಏಜೆನ್ಸೀಸ್).