ಇರಾನ್​ಗೆ ಟ್ರಂಪ್​ ಖಡಕ್​ ಎಚ್ಚರಿಕೆ  
ವಿದೇಶ

ಇನ್ನೊಂದು ಸಾವು ಸಂಭವಿಸಿದ್ರೆ... ಪ್ರತಿಭಟನೆಗಳ ಬೆನ್ನಲ್ಲೇ ಇರಾನ್​ಗೆ ಟ್ರಂಪ್​ ಖಡಕ್​ ಎಚ್ಚರಿಕೆ | Trump Warning

ಪ್ರಮುಖ ಮುಖ್ಯಾಂಶಗಳು

  • ಇರಾನ್‌ನ ಆರ್ಥಿಕ ಪರಿಸ್ಥಿತಿ ವೇಗವಾಗಿ ಹದಗೆಟ್ಟ ಬೆನ್ನಲ್ಲೇ ಪ್ರತಿಭಟನೆ, ಮುಷ್ಕರ
  • 4ರಲ್ಲಿ 2 ಜೀವನ ವೆಚ್ಚ ಏರಿಕೆಯ ವಿರುದ್ಧ ಇರಾನ್ ಪ್ರತಿಭಟನೆ ಜೋರು, ಹಲವರು ಸಾವು
  • ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಂಡರೆ, ಅಮೆರಿಕ ಮಧ್ಯಪ್ರವೇಶಿಸುವುದು ಖಚಿತ
  • ಇರಾನ್‌ಗೆ ಡೊನಾಲ್ಡ್ ಟ್ರಂಪ್ ಗಂಭೀರ ಎಚ್ಚರಿಕೆ
ಟೆಹ್ರಾನ್​: ಇರಾನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ತೀವ್ರವಾಗಿ ಭುಗಿಲೆದ್ದಿದ್ದು, ರಾಜಧಾನಿ ಟೆಹ್ರಾನ್ ಮತ್ತು ಇತರ ನಗರಗಳಲ್ಲಿ ಜನರು ಬೀದಿಗಿಳಿದಿದ್ದಾರೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ಜನರು, ಮುಲ್ಲಾಗಳು ಜಾಗ ಖಾಲಿ ಮಾಡಬೇಕು, ಸರ್ವಾಧಿಕಾರಕ್ಕೆ ಕೊನೆ ಬೀಳಬೇಕು ಎನ್ನುತ್ತಿದ್ದಾರೆ. ಹೀಗೇಳುವ ಮೂಲಕ ಖಮೇನಿ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ಭಾನುವಾರ (ಡಿ.27) ಹಣದುಬ್ಬರ ಮತ್ತು ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಬೀದಿಗಿಳಿದ ಜನರು ಈಗ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳಿಂದಾಗಿ ಇರಾನ್‌ನ ಕೇಂದ್ರ ಬ್ಯಾಂಕ್ ಮುಖ್ಯಸ್ಥರು ತಮ್ಮ ಹುದ್ದೆಗೆ ದಿಢೀರ್​ ರಾಜೀನಾಮೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಐದಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡ ಘಟನೆಯಿಂದ ಸಿಟ್ಟಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಂದು ಹೆಜ್ಜೆ ಮುಂದೆ ಹೋಗಿ ಇರಾನ್‌ಗೆ ಗಂಭೀರ ಎಚ್ಚರಿಕೆ ರವಾನಿಸಿದ್ದಾರೆ. 
ತಮ್ಮ ಅಧಿಕೃತ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಟ್ರಂಪ್, "ಇರಾನ್ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದೇ ಆದರೆ, ಅಮೆರಿಕ ಇಲ್ಲಿ ಮಧ್ಯಪ್ರವೇಶಿಸಲಿದೆ. ಮತ್ತು ರಕ್ಷಣೆ ನೀಡಲು ಧಾವಿಸುತ್ತದೆ. ಮಹ್ಸಾ ಅಮಿನಿಯ ಹತ್ಯೆಯ ಬಳಿಕ, ಮೂರು ವರ್ಷಗಳ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಮತ್ತೊಮ್ಮೆ ಭುಗಿಲೆದ್ದಿವೆ. ಇರಾನಿನ ರಿಯಾಲ್ ಕುಸಿತದ ಬೆನ್ನಲ್ಲೇ ಅಲ್ಲಿನ ಆರ್ಥಿಕ ಬಿಕ್ಕಟ್ಟು ಉತ್ತುಂಗಕ್ಕೇರಿದೆ. 

ಅಮೆರಿಕ ಎಚ್ಚರಿಕೆಗೆ ಇರಾನ್​ ಪ್ರತಿಕ್ರಿಯೆ

ಇರಾನ್ ಅಮೆರಿಕದ ಎಚ್ಚರಿಕೆಗಳಿಗೆ ಪ್ರತಿಕ್ರಿಯಿಸಿದೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹಿರಿಯ ಸಲಹೆಗಾರ ಅಲಿ ಲಾರಿಜಾನಿ, ಶುಕ್ರವಾರ (ಜ.02) ಇರಾನ್ ಪ್ರತಿಭಟನೆಗಳಲ್ಲಿ ಅಮೆರಿಕ ಹಸ್ತಕ್ಷೇಪವು ದೊಡ್ಡ ಅವ್ಯವಸ್ಥೆಗೆ ಕಾರಣವಾಗಲಿದೆ. ನಮ್ಮ ಆಂತರಿಕ ಸಮಸ್ಯೆಯಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದಿದ್ದಾರೆ.