Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್‌ನಿಂದ ಜೀವ ಬೆದರಿಕೆ ಶಂಕೆ!...ಕ್ಯಾಟರಿಂಗ್ ಟ್ರಕ್ ಬಳಸಿ ಟ್ರಂಪ್‌ನನ್ನು ರಹಸ್ಯವಾಗಿ ಸ್ಥಳಾಂತರಿಸಿದ ಅಮೆರಿಕ ಪಡೆಗಳು | Donald Trump

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಟರ್ಕಿಯಿಂದ ಹೊರಡುವಾಗ, ಸಾರ್ವಜನಿಕವಾಗಿ ಏರ್ ಫೋರ್ಸ್ ಒನ್ ವಿಮಾನದಲ್ಲಿದ್ದಾರೆ ಎಂದು ವೈಟ್‌ಹೌಸ್ ತೋರಿಸಿಕೊಂಡಿತ್ತಾದರೂ, ಅವರು ರಹಸ್ಯವಾಗಿ ಅಮೆರಿಕ ಮಿಲಿಟರಿಯ ಸಣ್ಣ ವಿಮಾನದಲ್ಲಿ ಪ್ರಯಾಣಿಸಿದ್ದರು ಎಂಬ ವರದಿಯೊಂದನ್ನು ದಿ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದೆ. ಇರಾನ್‌ನಿಂದ ಟ್ರಂಪ್​ ಜೀವಕ್ಕೆ ಎದುರಾಗಿದ್ದ ಬೆದರಿಕೆಯ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿತ್ತು ಎಂದು ವರದಿಯಾಗಿದೆ.

ನ್ಯಾಟೋ ಶೃಂಗಸಭೆಯಲ್ಲಿ ಭಾಗವಹಿಸಲು ಟ್ರಂಪ್ ಅಂಕಾಗೆ ಆಗಮಿಸುವಾಗ, ಖತಾರ್ ದೇಶ ಕೊಡುಗೆಯಾಗಿ ನೀಡಿದ್ದ ನೂತನ ಏರ್ ಫೋರ್ಸ್ ಒನ್ ವಿಮಾನವನ್ನು ಬಳಸಿದ್ದರು. ಆದರೆ, ಟರ್ಕಿಯಿಂದ ನಿರ್ಗಮಿಸುವಾಗ ಅವರು ಇದ್ದಕ್ಕಿದ್ದಂತೆ ಹಳೆಯ ಏರ್ ಫೋರ್ಸ್ ಒನ್ ವಿಮಾನವನ್ನು ಏರಿದ್ದು, ಹೊಸ ವಿಮಾನದ ಭದ್ರತೆ ಮತ್ತು ಈ ದಿಢೀರ್ ಬದಲಾವಣೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು. ಟರ್ಕಿಯು ಇರಾನ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿರುವುದು ಹಾಗೂ ಇರಾನ್ ಜೊತೆಗಿನ ಉದ್ವಿಗ್ನತೆ ಹೆಚ್ಚಾಗಿದ್ದ ಸಮಯದಲ್ಲಿ ಈ ಭೇಟಿ ನಡೆದಿತ್ತು.

ಟ್ರೂತ್ ಸೋಶಿಯಲ್ ಪೋಸ್ಟ್ ಕಥೆಯೇ ಬೇರೆ!..

ಅಂಕಾಗೆ ತೆರಳುವ ಮುನ್ನ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ, ತಾವು ಹಳೆಯ ಬೇಬಿ-ಬ್ಲೂ ಬಣ್ಣದ ಏರ್ ಫೋರ್ಸ್ ಒನ್ ವಿಮಾನದಲ್ಲಿ ಬ್ರಿಟನ್‌ನ ಆರ್‌ಎಎಫ್ ಮಿಲ್ಡೆನ್‌ಹಾಲ್‌ಗೆ ತೆರಳುವುದಾಗಿ ಬರೆದುಕೊಂಡಿದ್ದರು. ನೂತನ ವಿಮಾನವೂ ಅಲ್ಲಿಗೆ ಆಗಮಿಸಲಿದ್ದು, ಮಿಲಿಟರಿ ಸಿಬ್ಬಂದಿಗೆ ಅದನ್ನು ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದರು. ಅಂಕಾಗೆ ತಲುಪಿದಾಗ ಹಳೆಯ ವಿಮಾನವನ್ನು ಏರುತ್ತಿರುವ ಟ್ರಂಪ್ ಅವರ ಫೋಟೋಗಳು ಹೊರಬಂದಿದ್ದವು.
ಆದರೆ ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ವಿಮಾನ ನಿಲ್ದಾಣದ ಕ್ಯಾಟರಿಂಗ್ ಟ್ರಕ್ ಒಂದನ್ನು ಬಳಸಿ ಟ್ರಂಪ್ ಅವರನ್ನು ಅತ್ಯಂತ ರಹಸ್ಯವಾಗಿ ಸಿ-32ಎ (C-32A) ಎಂಬ ಸಣ್ಣ ಮಿಲಿಟರಿ ವಿಮಾನಕ್ಕೆ ವರ್ಗಾಯಿಸಲಾಗಿತ್ತು. ಮಾಧ್ಯಮ ಪ್ರತಿನಿಧಿಗಳು ಹಾಗೂ ವೈಟ್‌ಹೌಸ್ ಸಿಬ್ಬಂದಿ ಟ್ರಂಪ್ ಹಳೆಯ ವಿಮಾನದಲ್ಲೇ ಇದ್ದಾರೆ ಎಂದು ನಂಬುವಂತೆ ಮಾಡಲು ಹಳೆಯ ಏರ್ ಫೋರ್ಸ್ ಒನ್ ವಿಮಾನವನ್ನು ದಾರಿ ತಪ್ಪಿಸುವ ತಂತ್ರವಾಗಿ ಬಳಸಲಾಗಿತ್ತು. ಇಂತಹದ್ದೇ ರಹಸ್ಯ ಕಾರ್ಯಾಚರಣೆಯನ್ನು 2000ನೇ ಇಸವಿಯಲ್ಲಿ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕಿಸ್ತಾನಕ್ಕೆ ಪ್ರಯಾಣಿಸುವಾಗ ಬಳಸಲಾಗಿತ್ತು.
ಹಳೆಯ ಏರ್ ಫೋರ್ಸ್ ಒನ್ ವಿಮಾನದಲ್ಲಿದ್ದ ಪತ್ರಕರ್ತರಿಗೆ ವಿಮಾನದ ಕಿಟಕಿ ಶೇಡ್‌ಗಳನ್ನು ಮುಚ್ಚಿಡುವಂತೆ ಸೂಚಿಸಲಾಗಿತ್ತು. ನಂತರ ಈ ಬಗ್ಗೆ ಟ್ರಂಪ್ ಅವರನ್ನು ಪ್ರಶ್ನಿಸಿದಾಗ, ನಾವು ಅಪಾಯಕಾರಿ ವಿಮಾನದಲ್ಲಿದ್ದೆವು, ಆದರೆ ನಾನು ಹೋದರೆ ನೀವೂ ಹೋಗುತ್ತೀರಿ, ಹೌದಲ್ಲವೇ? ಎಂದು ತಮಾಷೆಯಾಗಿ ಉತ್ತರಿಸಿದ್ದರು. ಟ್ರಂಪ್ ಪ್ರಯಾಣಿಸುತ್ತಿದ್ದ ಸಿ-32ಎ ವಿಮಾನವು ರಾತ್ರಿ 10:20ಕ್ಕೆ ಬ್ರಿಟನ್ ತಲುಪಿದರೆ, ಪತ್ರಕರ್ತರಿದ್ದ ಹಳೆಯ ವಿಮಾನವು ಕೆಲವೇ ನಿಮಿಷಗಳ ನಂತರ ತಲುಪಿತು.

ವೈಟ್‌ಹೌಸ್ ಸ್ಪಷ್ಟನೆ

ಈ ರಹಸ್ಯ ಕಾರ್ಯಾಚರಣೆಯ ಕುರಿತು ವೈಟ್‌ಹೌಸ್ ಕಮ್ಯುನಿಕೇಷನ್ ಡೈರೆಕ್ಟರ್ ಸ್ಟೀವ್ ಚೆಂಗ್ ಸ್ಪಷ್ಟನೆ ನೀಡಿದ್ದು, ಖತಾರ್ ನೀಡಿದ ವಿಮಾನವು ಅಧ್ಯಕ್ಷರು ಹಾಗೂ ಸಿಬ್ಬಂದಿಯ ರಕ್ಷಣೆಗೆ ಅತ್ಯುನ್ನತ ಭದ್ರತಾ ವ್ಯವಸ್ಥೆಯನ್ನು ಹೊಂದಿದೆ. ಅಧ್ಯಕ್ಷರಿಗೆ ಅಮೆರಿಕದ ಹಲವು ಶತ್ರುಗಳಿಂದ ಬೆದರಿಕೆಗಳಿದ್ದು, ಆ ಬೆದರಿಕೆಗಳನ್ನು ಎದುರಿಸಲು ಆಡಳಿತವು ಲಭ್ಯವಿರುವ ಪ್ರತಿಯೊಂದು ಭದ್ರತಾ ಮಾರ್ಗಗಳನ್ನು ಬಳಸುತ್ತದೆ ಎಂದು ತಿಳಿಸಿದ್ದಾರೆ(ಏಜೆನ್ಸೀಸ್​).