ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಹಸ್ಯ ಹಾರಾಟ
- ಇರಾನ್ ಬೆದರಿಕೆ ನಡುವೆ ಟ್ರಂಪ್ ಅವರ ರಹಸ್ಯ ಹಾರಾಟ
- ಆಹಾರ ಸಾಗಿಸುವ ಟ್ರಕ್ ಮೂಲಕ ಟ್ರಂಪ್ ಜೆಟ್‌ಗೆ ಸ್ಥಳಾಂತರ
- ಕತಾರ್ ನೀಡಿದ ವಿಮಾನದ ಭದ್ರತೆಯ ಬಗ್ಗೆ ಪ್ರಶ್ನೆ
ವಾಷಿಂಗ್ಟನ್: ಇರಾನ್‌ನಿಂದ ಬೆದರಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟರ್ಕಿಯಿಂದ ಬ್ರಿಟನ್‌ಗೆ ರಹಸ್ಯವಾಗಿ ಮಿಲಿಟರಿ ಜೆಟ್‌ನಲ್ಲಿ ಪ್ರಯಾಣಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇರಾನ್‌ನ್ನು ನಾಶ ಮಾಡುವುದಾಗಿ ಪದೇಪದೆ ಎಚ್ಚರಿಕೆ ನೀಡುತ್ತಿದ್ದ ಟ್ರಂಪ್ ಇದೀಗ ಇರಾನ್‌ಗೆ ಹೆದರಿದ್ದಾರಾ ಎಂಬ ಚರ್ಚೆ ಶುರುವಾಗಿದೆ.
ಟ್ರಂಪ್,
ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಕತಾರ್ ನೀಡಿದ್ದ ನವೀಕರಿಸಲಾದ ಜೆಟ್‌ನಲ್ಲಿ ಅಂಕಾರಾಗೆ ತೆರಳಿದ್ದರು. ಆದರೆ ಟರ್ಕಿಯಿಂದ ವಾಪಸ್ ಬರುವಾಗ ಮಾತ್ರ ಪರಿಸ್ಥಿತಿ ಬದಲಾಗಿತ್ತು. ಟ್ರಂಪ್ ಹಳೆಯ ಏರ್ ಫೋರ್ಸ್ ಒನ್‌ನಲ್ಲಿ ತೆರಳುತ್ತಿದ್ದಾರೆ ಎಲ್ಲರೂ ತಿಳಿದಿದ್ದರು. ಆದರೆ ಅವರು ರಹಸ್ಯವಾಗಿ ಮತ್ತೊಂದು ವಿಮಾನಕ್ಕೆ ಶಿಪ್ಟ್ ಆಗಿದ್ದರು ಎಂದು ವಾಷಿಂಗ್ಟನ್ ವರದಿ ಮಾಡಿದೆ.
ಆಹಾರ ಟ್ರಕ್ ಮೂಲಕ ಜೆಟ್‌ಗೆ ಸ್ಥಳಾಂತರ
ವರದಿಯ ಪ್ರಕಾರ, ಟ್ರಂಪ್ ಅಂಕಾರಾ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾಗಳ ಮುಂದೆ ಹಳೆಯ ಏರ್ ಫೋರ್ಸ್ ಒನ್ ಫ್ಲೈಟ್ಹತ್ತಿದ್ದರು. ಆದರೆ ಬಳಿಕ ಅವರನ್ನು ವಿಮಾನ ನಿಲ್ದಾಣದ ಆಹಾರ ಸಾಗಿಸುವ ಟ್ರಕ್ನಲ್ಲಿ ಯಾರಿಗೂ ಸುಳಿವು ಸಿಗದಂತೆ ಸಣ್ಣ ಮಿಲಿಟರಿ ವಿಮಾನ ಸಿ-32 ಎಗೆ ಕರೆದೊಯ್ಯಲಾಯಿತು.
ಬಳಿಕ, ಸಿ-32 ಎ ಬ್ರಿಟನ್‌ನತ್ತ ಹಾರಾಟ ನಡೆಸಿತು. ಇದೇ ವೇಳೆ ಹಳೆಯ ಏರ್ ಫೋರ್ಸ್ ಒನ್ ಕೂಡ ಸಿಬ್ಬಂದಿಯೊಂದಿಗೆ ಬ್ರಿಟನ್‌ಗೆ ತೆರಳಿತು. ಎರಡೂ ವಿಮಾನಗಳು ರಾತ್ರಿ ಸುಮಾರು 10:20ಕ್ಕೆ ಆರ್‌ಎಎಫ್ ಮಿಲ್ಡೆನ್‌ಹಾಲ್ ತಲುಪಿದವು.
ನ್ಯಾಟೋ ಶೃಂಗಸಭೆಗಾಗಿ ಟ್ರಂಪ್ ಬಳಸಿದ್ದ ಕತಾರ್ ನೀಡಿದ ಹೊಸ ಜೆಟ್‌ನ ಮೊದಲ ಅಂತಾರಾಷ್ಟ್ರೀಯ ಪ್ರಯಾಣ ಇದಾಗಿತ್ತು. ಇದೇ ವೇಳೆ ಟರ್ಕಿ ಸಮೀಪದ ಇರಾನ್‌ನೊಂದಿಗೆ ಉದ್ವಿಗ್ನತೆ ಹೆಚ್ಚಾಗಿತ್ತು. ಹೀಗಾಗಿ ಹೊಸ ವಿಮಾನದಲ್ಲಿ ಟ್ರಂಪ್ ಅವರ ಸುರಕ್ಷತೆ ಬಗ್ಗೆ ಆತಂಕವಿತ್ತೇ ಎಂಬ ಪ್ರಶ್ನೆಗಳು ಇದೀಗ ಎದ್ದಿವೆ.
ಬೆದರಿಕೆ ಎದುರಿಸುತ್ತೇವೆ
ಟ್ರಂಪ್ ಗುಟ್ಟಾಗಿ 3ನೇ ವಿಮಾನ ಬಳಸಿದ್ದೇಕೆ ಎಂಬ ಪ್ರಶ್ನೆಗೆ ಶ್ವೇತಭವನ ಸ್ಪಷ್ಟನೆ ನೀಡಿದೆ. ಕತಾರ್ ನೀಡಿದ ಜೆಟ್‌ನಲ್ಲಿ ಅಧ್ಯಕ್ಷರು ಮತ್ತು ಅವರ ಸಿಬ್ಬಂದಿಯ ಸುರಕ್ಷತೆಗಾಗಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿತ್ತು ಎಂದು ಶ್ವೇತಭವನದ ಸಂವಹನ ನಿರ್ದೇಶಕ ಸ್ಟೀವ್ ಚೆಯುಂಗ್ ತಿಳಿಸಿದ್ದಾರೆ.
ಮುಂದುವರಿದು, ಅಮೆರಿಕದ ಹಲವು ಶತ್ರುಗಳು ಅಧ್ಯಕ್ಷರ ಮೇಲೆ ಕಣ್ಣಿಟ್ಟಿದ್ದಾರೆ. ಅವರಿಂದ ಎದುರಾಗುವ ಬೆದರಿಕೆಗಳನ್ನು ಎದುರಿಸಲು ನಮ್ಮಲ್ಲಿರುವ ಪ್ರತಿಯೊಂದು ಸಾಧನವನ್ನೂ ಬಳಸುತ್ತೇವೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಪೆಂಟಗನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,(ಏಜೆನ್ಸೀಸ್).