Donald Trump | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump: ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಕಾಲದ ಉದ್ವಿಗ್ನತೆಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಭಾನುವಾರ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಒಪ್ಪಂದವು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯ ಬರೆಯಲಿದ್ದು, ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ದೊಡ್ಡ ಹೆಜ್ಜೆಯಾಗಲಿದೆ ಎಂದು ಅವರು ಆಶಿಸಿದ್ದಾರೆ.
ತಮ್ಮ ಟ್ರುತ್ ಸೋಶಿಯಲ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಈ ಒಪ್ಪಂದದ ಬಳಿಕ ವಿಶ್ವದ ಅತ್ಯಂತ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಸ್ಟ್ರೇಟ್ ಆಫ್ ಹೋರ್ಮುಜ್ (Strait of Hormuz) ಅಂತರರಾಷ್ಟ್ರೀಯ ಹಡಗು ಸಂಚಾರಕ್ಕೆ ತಕ್ಷಣವೇ ಮುಕ್ತವಾಗಬಹುದು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಇಂಧನ ಮಾರ್ಗ ಮುಕ್ತಕ್ಕೆ ಹಾದಿ
ವಿಶ್ವದ ಒಟ್ಟಾರೆ ತೈಲ ಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸ್ಟ್ರೇಟ್ ಆಫ್ ಹೋರ್ಮುಜ್ ಜಲಮಾರ್ಗವನ್ನು ಮರುಪ್ರಾರಂಭಿಸಲು ಈ ಒಪ್ಪಂದವು ದಾರಿ ಮಾಡಿಕೊಡಲಿದೆ. ನಾವು ಇರಾನ್ ಸೇರಿದಂತೆ ಇಡೀ ಮಧ್ಯಪ್ರಾಚ್ಯದೊಂದಿಗೆ ಸುದೀರ್ಘ ಭವಿಷ್ಯದವರೆಗೆ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಈ ಪ್ರಕ್ರಿಯೆಯು ಯಾವುದೇ ಅಡೆತಡೆಯಿಲ್ಲದೆ, ಅತ್ಯಂತ ಸುಲಭವಾಗಿ ಪೂರ್ಣಗೊಳ್ಳಲಿದೆ ಎಂದು ಭಾವಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಪ್ರಸ್ತಾಪಿತ ಒಪ್ಪಂದದ ಮೂಲಕ ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇರಾನ್ ಇನ್ನು ಮುಂದೆ ಪರಮಾಣು ಅಸ್ತ್ರಗಳನ್ನು ಹೊಂದಲು ಬಯಸುವುದಿಲ್ಲ. ಯಾವುದೇ ಖರೀದಿ, ಅಭಿವೃದ್ಧಿ ಅಥವಾ ಇತರ ಯಾವುದೇ ಮಾರ್ಗಗಳ ಮೂಲಕವೂ ಅವರು ಇವುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದಿರುವ ಟ್ರಂಪ್, ಇದೊಂದು ಕಟ್ಟುನಿಟ್ಟಾದ ಪರಮಾಣು ತಡೆಗೋಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಯಾವುದೇ ನಗದು ಪಾವತಿ ಇರುವುದಿಲ್ಲ
ಹಿಂದಿನ ಆಡಳಿತಗಳ ಅವಧಿಯಲ್ಲಿ ನಡೆದ ಒಪ್ಪಂದಗಳನ್ನು ಟೀಕಿಸಿದ ಟ್ರಂಪ್, ಈ ಬಾರಿ ಇರಾನ್‌ಗೆ ಯಾವುದೇ ರೀತಿಯ ನೇರ ಆರ್ಥಿಕ ನೆರವು ಅಥವಾ ನಗದು ಪಾವತಿ ಮಾಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಒಬಾಮಾ ಆಡಳಿತದ ಅವಧಿಯಲ್ಲಿ ಬಿಲಿಯನ್ ಗಟ್ಟಲೆ ಡಾಲರ್ ಹಣವನ್ನು ನಗದು ರೂಪದಲ್ಲಿ ನೀಡಲಾಗಿತ್ತು, ಆದರೆ ಈ ಒಪ್ಪಂದದಲ್ಲಿ ಅಂತಹ ಯಾವುದೇ ಹಣಕಾಸಿನ ವಹಿವಾಟು ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ರಾಜತಾಂತ್ರಿಕ ಮಾತುಕತೆಗಳು ಯಶಸ್ವಿಯಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸುವ ಜೊತೆಯಲ್ಲೇ, ಟ್ರಂಪ್ ಕಠಿಣ ಎಚ್ಚರಿಕೆಯನ್ನೂ ನೀಡಿದ್ದಾರೆ. ಒಂದು ವೇಳೆ ಶಾಂತಿ ಪ್ರಕ್ರಿಯೆ ವಿಫಲವಾದರೆ, ಇರಾನ್‌ನ ಭೂಗತ ಪರಮಾಣು ನೆಲೆಗಳ ವಿರುದ್ಧ ಅತ್ಯಾಧುನಿಕ ಮಿಲಿಟರಿ ಶಕ್ತಿಯನ್ನು ಬಳಸುವ ಆಯ್ಕೆಯೂ ಸೇರಿದಂತೆ ಇತರೆ ಕಠಿಣ ಪರ್ಯಾಯ ಮಾರ್ಗಗಳು ಮುಕ್ತವಾಗಿವೆ ಎಂದು ಅವರು ಹೇಳಿದ್ದಾರೆ.
ಜಿನೀವಾದಲ್ಲಿ ಒಪ್ಪಂದ..? ಇರಾನ್ ಸ್ಪಷ್ಟನೆ ಏನು..?
ಕಳೆದ ಮೂರು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಈ ಒಪ್ಪಂದದ ಮೂಲಕ ಅಂತ್ಯ ಹಾಡಲು ಉಭಯ ದೇಶಗಳು ಸಜ್ಜಾಗಿವೆ. ಯುರೋಪ್‌ನಲ್ಲಿ ನಡೆಯಲಿರುವ ಈ ಸಹಿ ಪ್ರಕ್ರಿಯೆಯಲ್ಲಿ ಅಮೆರಿಕ ಪರವಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಸ್ವೀಡನ್ ಅಥವಾ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಭಾನುವಾರ ಈ ಕಾರ್ಯಕ್ರಮ ನಡೆಯಬಹುದು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ, ಇರಾನ್‌ನ ಸುದ್ದಿ ಸಂಸ್ಥೆಯಾದ ಫಾರ್ಸ್ (Fars) ಈ ವರದಿಗಳನ್ನು ತಳ್ಳಿಹಾಕಿದೆ. ಭೌತಿಕವಾಗಿ ಭೇಟಿಯಾಗುವ ಅಥವಾ ಜಿನೀವಾದಲ್ಲಿ ಸಹಿ ಮಾಡುವ ಕುರಿತು ಯಾವುದೇ ದಿನಾಂಕ ಅಂತಿಮವಾಗಿಲ್ಲ ಎಂದು ಇರಾನ್ ಮೂಲಗಳು ತಿಳಿಸಿವೆ. ಅಲ್ಲಿನ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ ಮಾತನಾಡಿ, ಒಪ್ಪಂದದ ನಿಯಮಗಳು ಸಂಪೂರ್ಣವಾಗಿ ಅಂತಿಮಗೊಂಡರೆ ಮಾತ್ರ ರಿಮೋಟ್ (ಡಿಜಿಟಲ್) ಮೂಲಕ ಸಹಿ ಹಾಕುವ ಸಾಧ್ಯತೆಯಿದೆ. ಆದರೆ ನಮ್ಮ ಷರತ್ತುಗಳಿಗೆ ಒಪ್ಪದಿದ್ದರೆ ನಾವು ಸಹಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್).