ಎಪ್ಸ್ಟೀನ್ ಐಲ್ಯಾಂಡ್ ಜೋಕ್‌ಗೆ ಟ್ರಂಪ್ ಕೆಂಗಣ್ಣು; ನೋವಾ, ನಿನ್ನ ಜೊತೆ ಮಜಾ ಮಾಡ್ತೀನಿ ಎಂದು ಅಮೆರಿಕ ಅಧ್ಯಕ್ಷ ಎಚ್ಚರಿಕೆ
ನ್ಯೂಯಾರ್ಕ್: ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿ ಸಮಾರಂಭದ ನಿರೂಪಕ ಟ್ರೆವರ್ ನೋವಾ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ವಿರುದ್ಧ ಮಾಡಿದ ಚುಚ್ಚು ಮಾತುಗಳು ಭಾರಿ ಆಕ್ರೋಶಕ್ಕೆ ಕಾರಣವಾಗಿವೆ. ಟ್ರಂಪ್ ಅವರನ್ನು ವಿವಾದಾತ್ಮಕ ಎಪ್ಸ್ಟೀನ್ ದ್ವೀಪಕ್ಕೆ ಹೋಲಿಸಿ ಹಾಸ್ಯ ಮಾಡಿದ್ದು, ಇದು ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿದೆ. ಸುಳ್ಳು ಸುದ್ದಿ ಹರಡುತ್ತಿರುವ ನೋವಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಟ್ರಂಪ್ ಗುಡುಗಿದ್ದಾರೆ.
ಟ್ರೆವರ್ ನೋವಾ ಹೇಳಿದ್ದೇನು..?
ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಬಿಲ್ಲಿ ಐಲಿಷ್ ಅವರು ಸಾಂಗ್ ಆಫ್ ದಿ ಇಯರ್ ಪ್ರಶಸ್ತಿ ಗೆದ್ದಾಗ, ಟ್ರೆವರ್ ನೋವಾ ಅಭಿನಂದಿಸುತ್ತಾ ಹೀಗೆ ಹೇಳಿದ್ದಾರೆ.
ಅಭಿನಂದನೆಗಳು ಬಿಲ್ಲಿ ಐಲಿಷ್. ಇದು ಪ್ರತಿಯೊಬ್ಬ ಕಲಾವಿದನು ಬಯಸುವ ಪ್ರಶಸ್ತಿಯಾಗಿದೆ. ಅಂದಹಾಗೆ, ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಅನ್ನು ಎಷ್ಟು ಬಯಸುತ್ತಾರೋ, ಅಷ್ಟೇ ಈ ಪ್ರಶಸ್ತಿಯನ್ನು ಎಲ್ಲರೂ ಬಯಸುತ್ತಾರೆ. ಇದು ಅರ್ಥಪೂರ್ಣವೂ ಹೌದು, ಏಕೆಂದರೆ ಎಪ್ಸ್ಟೀನ್ ಹೋದ ನಂತರ, ಬಿಲ್ ಕ್ಲಿಂಟನ್ ಜೊತೆ ಕಾಲ ಕಳೆಯಲು ಟ್ರಂಪ್‌ಗೆ ಹೊಸ ದ್ವೀಪವೊಂದು ಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇಷ್ಟೇ ಅಲ್ಲದೆ, ತಮ್ಮ 6 ವರ್ಷಗಳ ಗ್ರಾಮಿ ನಿರೂಪಣೆಗೆ ಇದು ಕೊನೆಯ ವರ್ಷ ಎಂದು ನೆನಪಿಸಿದ ನೋವಾ, ನೋಡಿ, ಇದು ನನ್ನ ಕೊನೆಯ ವರ್ಷವಾಗಿದೆ. ಈಗ ನೀವು ನನ್ನನ್ನು ಏನು ಮಾಡಲು ಸಾಧ್ಯ ಎಂದು ಸವಾಲು ಹಾಕುವಂತೆ ಮಾತನಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ತೀಕ್ಷ್ಣ ಪ್ರತಿಕ್ರಿಯೆ
ನೋವಾ ಅವರ ಹೇಳಿಕೆಗೆ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ವೇದಿಕೆಯಲ್ಲಿ ಸರಣಿ ಪೋಸ್ಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಸಂಪೂರ್ಣ ಸುಳ್ಳು
ನಾನು ಎಂದಿಗೂ ಎಪ್ಸ್ಟೀನ್ ದ್ವೀಪಕ್ಕೆ ಹೋಗಿಲ್ಲ ಅಥವಾ ಅದರ ಹತ್ತಿರವೂ ಸುಳಿದಿಲ್ಲ. ಸುಳ್ಳು ಸುದ್ದಿ ಮಾಧ್ಯಮಗಳೂ ಸಹ ಇಂತಹ ಆರೋಪ ಮಾಡಿಲ್ಲ. ಆದರೆ ಈ ಟ್ಯಾಲೆಂಟ್‌ಲೆಸ್ ನಿರೂಪಕ ಸುಳ್ಳು ಹೇಳುತ್ತಿದ್ದಾನೆ ಎಂದು ಕಿಡಿಕಾರಿದ್ದಾರೆ.
ಕಾನೂನು ಸಮರ
ನನ್ನ ವಕೀಲರನ್ನು ಕಳುಹಿಸಿ ಈ ಪತಿಚ ಎಂಸಿಯನ್ನು ನ್ಯಾಯಾಲಯಕ್ಕೆ ಎಳೆಯುತ್ತೇನೆ. ನೋವಾ ಅವರೇ ಸಿದ್ಧರಾಗಿ, ನಿಮ್ಮ ಜೊತೆ ನಾನು ಮಜಾ ಮಾಡುತ್ತೇನೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಗ್ರಾಮಿ ಬಗ್ಗೆ ಟೀಕೆ
ಗ್ರಾಮಿ ಪ್ರಶಸ್ತಿ ಸಮಾರಂಭವು ಅತ್ಯಂತ ಕಳಪೆಯಾಗಿದ್ದು, ನೋಡಲು ಅಸಾಧ್ಯವಾಗಿದೆ ಎಂದು ಟ್ರಂಪ್ ಲೇವಡಿ ಮಾಡಿದ್ದಾರೆ.
ವಿವಾದದ ಹಿನ್ನೆಲೆ
ಇತ್ತೀಚೆಗಷ್ಟೇ ಅಮೆರಿಕದ ನ್ಯಾಯಾಂಗ ಇಲಾಖೆಯು ಜೆಫ್ರಿ ಎಪ್ಸ್ಟೀನ್ ಪ್ರಕರಣದ ಸಾವಿರಾರು ಫೈಲ್‌ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಬಿಲ್ ಕ್ಲಿಂಟನ್ ಅವರ ಹೆಸರುಗಳು ಉಲ್ಲೇಖವಾಗಿರುವುದು ಚರ್ಚೆಗೆ ಕಾರಣವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಟ್ರೆವರ್ ನೋವಾ, ವಿಶ್ವದ ಅತಿದೊಡ್ಡ ಸಂಗೀತ ವೇದಿಕೆಯಲ್ಲಿ ಅಧ್ಯಕ್ಷರನ್ನೇ ಕಾಲೆಳೆದಿದ್ದಾರೆ.
ರಾಜಕೀಯ ಮತ್ತು ಮನರಂಜನಾ ಲೋಕದ ಈ ಸಂಘರ್ಷ ಈಗ ಅಮೆರಿಕದಲ್ಲಿ ಫ್ರೀ ಸ್ಪೀಚ್ ವರ್ಸಸ್ ಡಿಫಮೇಷನ್ ಎಂಬ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ,(ಏಜೆನ್ಸೀಸ್).