ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಇರಾನ್ ವಿರುದ್ಧ ಇಸ್ರೇಕ್-ಅಮೆರಿಕದ ಯುದ್ಧದಕ್ಕೆ ಬೆಂಬಲ ನೀಡದ ತಮ್ಮ ದೀರ್ಘಕಾಲದ ನ್ಯಾಟೋ ಮಿತ್ರರಾಷ್ಟ್ರಗಳ ವಿರುದ್ಧ ಶುಕ್ರವಾರ(ಮಾ. 20) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವಾಗ್ದಾಳಿ ನಡೆಸಿದ್ದು, ಹೇಡಿಗಳು, ಈ ಸಮಯವನ್ನು ನೆನಪಿಸಿಕೊಳ್ಳುತ್ತೇವೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಟ್ರಂಪ್, ಯುಎಸ್ ಇಲ್ಲದೆ, ನ್ಯಾಟೋ ಒಂದು ಕಾಗದದ ಹುಲಿ. ಅಮೆರಿಕಕ್ಕೆ NATO ಮಿತ್ರರಾಷ್ಟ್ರಗಳು ಹೆಚ್ಚಿನವರು ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಅದರಲ್ಲಿ ಆಶ್ಚರ್ಯವೇನಿಲ್ಲ, ಯಾಕಂದರೇ NATO ಯಾವಾಗಲೂ ಒನ್ ವೇ ಸ್ಟ್ರೀಟ್ ಆಗಿದೆ. ಅದನ್ನು ಬಿಲಿಯನ್ ಡಾಲರ್ ಖರ್ಚು ಮಾಡಿ ಅಮೆರಿಕ ರಕ್ಷಿಸುತ್ತದೆ. ಆದರೆ ಅಗತ್ಯದ ಸಮಯದಲ್ಲಿ ಅವರು ಅಮೆರಿಕಕ್ಕೆ ಸಹಾಯ ಮಾಡಲು ಇಷ್ಟಪಡುತ್ತಿಲ್ಲ. ಈಗಾಗಲೇ ಅಮೆರಿಕಾ ಇರಾನ್ ಮಿಲಿಟರಿಯನ್ನು ನಾಶಗೊಳಿಸಿದೆ.
ಜಗತ್ತಿನ ಹೆಚ್ಚಿನ ದೇಶಗಳು ಹಾರ್ಮುಜ್ ಜಲಸಂಧಿಯ ಮೂಲಕ ತೈಲವನ್ನು ಪಡೆಯುತ್ತವೆ. ಇದು ಆ ದೇಶಗಳ ಸ್ವಂತ ಪ್ರದೇಶವಿದ್ದಂತೆ. ಆದ್ದರಿಂದ ಆ ಹಾದಿಯನ್ನು ರಕ್ಷಿಸುವ ಜವಾಬ್ದಾರಿ ಅವರದ್ದೇ ಆಗಿದೆ. ನಾನು ಸುಮಾರು 7 ದೇಶಗಳಿಗೆ ತಮ್ಮ ಯುದ್ಧನೌಕೆಗಳನ್ನು ಕಳುಹಿಸಲು ಆದೇಶಿಸಿದ್ದೇನೆ. ಅಮೆರಿಕಾಕ್ಕೆ ಆ ತೈಲದ ಅಗತ್ಯವಿಲ್ಲ, ಆದರೆ ಜಗತ್ತಿಗೆ ಇದೆ. ಅವರು ಬರದಿದ್ದರೆ, ನ್ಯಾಟೋದ ಭವಿಷ್ಯವು ತುಂಬಾ ಕೆಟ್ಟದಾಗಿರಲಿದೆ ಎಂದಿದ್ದಾರೆ.
ಸಂತೋಷದ ವಿಷಯವೆಂದರೆ, ನಾವು ಈಗಾಗಲೇ ಇರಾನ್‌ನ ಮಿಲಿಟರಿಯನ್ನು ಧ್ವಂಸಗೊಳಿಸಿದ್ದೇವೆ. ಅವರ ನೌಕಾಪಡೆ, ವಾಯುಪಡೆ ಮತ್ತು ರೇಡಾರ್ ವ್ಯವಸ್ಥೆಗಳು ಸಂಪೂರ್ಣವಾಗಿ ನಾಶವಾಗಿವೆ. ನಮಗೆ ಈಗ ನ್ಯಾಟೋ ಅಥವಾ ಜಪಾನ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾದ ಸಹಾಯ ಬೇಕಿಲ್ಲ. ನಾವು ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶ, ನಮಗೆ ಯಾರ ಸಹಾಯವೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಹಾರ್ಮುಜ್ ಜಲಸಂಧಿಗೆ ಸಂಬಂಧಪಟ್ಟಂತೆ ಗುರುವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಜರ್ಮನಿ, ಬ್ರಿಟನ್, ಫ್ರಾನ್ಸ್, ಇಟಲಿ, ನೆದರ್ಲ್ಯಾಂಡ್ಸ್, ಜಪಾನ್ ಹಾಗೂ ಕೆನಡಾ, ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅದು ಸಕ್ರಿಯ ಯುದ್ಧದ ಅಂತ್ಯವನ್ನು ಒಳಗೊಂಡಿರುತ್ತದೆ ಎಂದು ಹೇಳಿವೆ (ಏಜೆನ್ಸೀಸ್).