ವಿದೇಶ

ಸೋತರೂ ಟ್ರಂಪ್​ ಪವರ್​ಫುಲ್​! ವಿಟೋ ಅಧಿಕಾರ ಬಳಸಿ ವಿರೋಧಿಗಳನ್ನು ಹಣಿಯಲು ಕಾರ್ಯತಂತ್ರ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿನ ಸೋಲಿನ ನಂತರ ಟ್ರಂಪ್ ಹೀಗೆ ಹೇಳಿದ್ದಾರೆ- ‘ನನ್ನ ಬಳಿ ಅತ್ಯಂತ ದೊಡ್ಡ ಅಧಿಕಾರವಾದ ವಿಟೋ ಇದೆ. ಅಗತ್ಯವೆನಿಸಿದರೆ ಸಂಸತ್ತಿನಲ್ಲಿ ಬಹುಮತ ಪಡೆದಿರುವ ಡೆಮಾಕ್ರಟಿಕ್ ಪಕ್ಷದ ಕಾನೂನುಗಳ ಮೇಲೆ ವಿಟೋ ಪ್ರಯೋಗಿಸಿ ಅವುಗಳನ್ನು ತಿರಸ್ಕರಿಸಬಹುದು.’ ವಾಸ್ತವವಾಗಿ ವಿಟೋ ಅಧಿಕಾರದ ಮೂಲಕ ಟ್ರಂಪ್ ಏನೆಲ್ಲ ಮಾಡಬಹುದು? ವಿರೋಧ ಪಕ್ಷವು ಬಹುಮತ ಹೊಂದಿದ್ದರೂ ಟ್ರಂಪ್ ತಮ್ಮ ವಿರೋಧಿಗಳನ್ನು ತಡೆಯಬಲ್ಲರೆ? ಈ ಎಲ್ಲ ಬೆಳವಣಿಗೆಗಳ ಅವಲೋಕನ ಇಲ್ಲಿದೆ.

ಅಮೆರಿಕ ಸಂಸತ್ (ಕಾಂಗ್ರೆಸ್) ಚುನಾವಣೆಯ ಫಲಿತಾಂಶಗಳು ಅಧ್ಯಕ್ಷರ ಪಕ್ಷಕ್ಕೆ ಹಿನ್ನಡೆ ತಂದರೂ, ಶ್ವೇತಭವನದ ಆಡಳಿತಾತ್ಮಕ ಅಧಿಕಾರ ಮತ್ತು ಅಧ್ಯಕ್ಷೀಯ ಪ್ರಭಾವ ಕುಂದುವುದಿಲ್ಲ. ಸಾಂವಿಧಾನಿಕ ಅಧಿಕಾರಗಳು, ವಿಟೋ ಹಕ್ಕು ಹಾಗೂ ಇತ್ತೀಚಿನ ನ್ಯಾಯಾಂಗ ತೀರ್ಪುಗಳ ಹಿನ್ನೆಲೆಯಲ್ಲಿ ಅಮೆರಿಕದ ಪ್ರಸ್ತುತ ರಾಜಕೀಯ ಸಮೀಕರಣಗಳು ಕುತೂಹಲ ಮೂಡಿಸಿವೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಹಾಗೂ ಸಂಸತ್ (ಕಾಂಗ್ರೆಸ್) ಚುನಾವಣೆಗಳು ಪ್ರತ್ಯೇಕವಾಗಿ ನಡೆಯುತ್ತವೆ.

ಅಧ್ಯಕ್ಷರ ಅಧಿಕಾರಾವಧಿ 4 ವರ್ಷಗಳಾಗಿದ್ದರೆ, ಸಂಸತ್ತಿನ ಕೆಳಮನೆಯಾದ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ನ (ಪ್ರತಿನಿಧಿಗಳ ಸಭೆ) ಎಲ್ಲ 435 ಸ್ಥಾನಗಳಿಗೆ ಹಾಗೂ ಮೇಲ್ಮನೆಯಾದ ಸೆನೆಟ್​ನ ಮೂರನೇ ಒಂದು ಭಾಗದಷ್ಟು ಸದಸ್ಯರಿಗೆ ಪ್ರತಿ 2 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಇವುಗಳನ್ನೇ ಮಧ್ಯಂತರ ಚುನಾವಣೆಗಳು ಎನ್ನಲಾಗುತ್ತದೆ.

ಮಧ್ಯಂತರ ಚುನಾವಣೆಯಲ್ಲಿ ಆಡಳಿತಾರೂಢ ಅಧ್ಯಕ್ಷರ ಪಕ್ಷ ಸೋತರೂ, ಅಧ್ಯಕ್ಷರು ತಮ್ಮ ಅವಧಿ ಪೂರ್ಣಗೊಳ್ಳುವವರೆಗೂ ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಸಂಸತ್ತಿನಲ್ಲಿ ಹಿನ್ನಡೆಯಾಗಿದ್ದರೂ, ಅವರ ಅಧ್ಯಕ್ಷೀಯ ಸ್ಥಾನ ಹಾಗೂ ಅಧಿಕಾರಗಳು 2029ರ ಜನವರಿಯವರೆಗೆ ಮುಂದುವರಿಯಲಿವೆ. ಈ ಅಧಿಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು ‘ವಿಟೋ ಹಕ್ಕು’.

ಏನಿದು ವಿಟೋ ಅಧಿಕಾರ?

ಅಮೆರಿಕ ಸಂವಿಧಾನದ 1ನೇ ವಿಧಿಯ 7ನೇ ಸೆಕ್ಷನ್ ಅಧ್ಯಕ್ಷರಿಗೆ ಈ ಅಧಿಕಾರವನ್ನು ನೀಡುತ್ತದೆ. ಸಂಸತ್ತು ಅಂಗೀಕರಿಸಿದ ಯಾವುದೇ ಮಸೂದೆಯನ್ನು ಅಧ್ಯಕ್ಷರು ಕಾನೂನಾಗದಂತೆ ತಿರಸ್ಕರಿಸಬಹುದು.

ಪ್ರಕ್ರಿಯೆ: ಸಂಸತ್ತಿನಲ್ಲಿ ಪಾಸಾದ ಮಸೂದೆ ಅಧ್ಯಕ್ಷರ ಅಂಕಿತಕ್ಕಾಗಿ ಶ್ವೇತಭವನಕ್ಕೆ ಬರುತ್ತದೆ. ಅಧ್ಯಕ್ಷರು ಅದಕ್ಕೆ ಸಹಿ ಹಾಕಿ ಕಾನೂನು ಮಾಡಬಹುದು ಅಥವಾ ಮರುಪರಿಶೀಲನೆಗೆ ಸಂಸತ್ತಿಗೆ ಹಿಂತಿರುಗಿಸಬಹುದು.

ಪಾಕೆಟ್ ವಿಟೋ: ಅಧ್ಯಕ್ಷರು 10 ಕೆಲಸದ ದಿನಗಳವರೆಗೆ ಮಸೂದೆಯನ್ನು ವಾಪಸ್ ಕಳುಹಿಸದೆ, ಅಷ್ಟರೊಳಗೆ ಸಂಸತ್ತಿನ ಅಧಿವೇಶನ ಮುಕ್ತಾಯಗೊಂಡರೆ, ಆ ಮಸೂದೆ ತಾನಾಗಿಯೇ ರದ್ದಾಗುತ್ತದೆ.

ಸ್ವಯಂಚಾಲಿತ ಕಾನೂನು: ಒಂದು ವೇಳೆ ಅಧ್ಯಕ್ಷರು 10 ದಿನಗಳಲ್ಲಿ ಸಹಿಯೂ ಹಾಕದೆ, ಹಿಂತಿರುಗಿಸದೆಯೂ ಇದ್ದು, ಸಂಸತ್ತಿನ ಅಧಿವೇಶನ ಮುಂದುವರಿಯುತ್ತಿದ್ದರೆ, ಅದು ತಾನಾಗಿಯೇ ಕಾನೂನಾಗಿ ಜಾರಿಗೆ ಬರುತ್ತದೆ. ಅಧ್ಯಕ್ಷರಿಗೆ ಮಸೂದೆಯನ್ನು ಸಂಪೂರ್ಣವಾಗಿ ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕಿರುತ್ತದೆಯೇ ಹೊರತು, ಅದರಲ್ಲಿ ತಿದ್ದುಪಡಿ ಮಾಡುವ ಅಧಿಕಾರವಿರುವುದಿಲ್ಲ.

ಸಂಚಲನ ಮೂಡಿಸಿದ ಸ್ಲಾಟರ್ ಕೇಸ್

ನವೆಂಬರ್ 3ರಂದು ನೀಡಿದ ಸಂದರ್ಶನವೊಂದರಲ್ಲಿ ಡೊನಾಲ್ಡ್ ಟ್ರಂಪ್, ಸುಪ್ರೀಂ ಕೋರ್ಟ್​ನ ಮಹತ್ವದ ಸ್ಲಾಟರ್ ಕೇಸ್ ತೀರ್ಪನ್ನು ಉಲ್ಲೇಖಿಸಿ, ‘ನಾವು ಈ ಪ್ರಕರಣವನ್ನು ಗೆದ್ದಿದ್ದೇವೆ. ಇದು ಅಧ್ಯಕ್ಷರಿಗೆ ಈ ಹಿಂದೆಂದೂ ಇಲ್ಲದ ಪರಮೋಚ್ಚ ಅಧಿಕಾರವನ್ನು ನೀಡಿದೆ’ ಎಂದು ಹೇಳಿದ್ದಾರೆ.

ಹಿನ್ನೆಲೆ: ಅಮೆರಿಕದ ಫೆಡರಲ್ ಸರ್ಕಾರದಲ್ಲಿ ಫೆಡರಲ್ ಟ್ರೇಡ್ ಕಮಿಷನ್ (ಎಫ್​ಟಿಸಿ), ನ್ಯಾಷನಲ್ ಲೇಬರ್ ರಿಲೇಶನ್ಸ್ ಬೋರ್ಡ್ (ಎನ್​ಎಲ್​ಆರ್​ಬಿ) ಸೇರಿ 24 ಸ್ವತಂತ್ರ ನಿಯಂತ್ರಣ ಸಂಸ್ಥೆಗಳು ಮತ್ತು ಆಯೋಗಗಳಿವೆ. 1935ರ ನಂತರದ ನಿಯಮಗಳ ಪ್ರಕಾರ, ಅಧ್ಯಕ್ಷರು ಈ ಸಂಸ್ಥೆಗಳ ಮುಖ್ಯಸ್ಥರನ್ನು ಅಥವಾ ಸದಸ್ಯರನ್ನು ಸೂಕ್ತ ಕಾನೂನು ಆಧಾರವಿಲ್ಲದೆ ಸ್ವಯಂಪ್ರೇರಿತವಾಗಿ ತೆಗೆದುಹಾಕುವಂತಿರಲಿಲ್ಲ. ಆದರೆ 2025ರ ಮಾರ್ಚ್​ನಲ್ಲಿ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಸದಸ್ಯೆ ಹಾಗೂ ಫೆಡರಲ್ ಟ್ರೇಡ್ ಕಮಿಷನ್ ಕಮಿಷನರ್ ರೆಬೆಕಾ ಸ್ಲಾಟರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದರು. 2026ರ ಜೂನ್​ನಲ್ಲಿ ಸುಪ್ರೀಂ ಕೋರ್ಟ್ 6-3ರ ಬಹುಮತದಿಂದ ಟ್ರಂಪ್ ಪರವಾಗಿ ತೀರ್ಪು ನೀಡಿ, ಸಂವಿಧಾನವು ಅಧ್ಯಕ್ಷರಿಗೆ ಇಂತಹ ವಜಾಗೊಳಿಸುವ ನೇರ ಅಧಿಕಾರವನ್ನು ನೀಡುತ್ತದೆ ಎಂದು ಸ್ಪಷ್ಟಪಡಿಸಿತು. ಈ ತೀರ್ಪನ್ನು ವಿರೋಧಿಸಿದ ನ್ಯಾಯಾಧೀಶರು, ಈ ನಿರ್ಧಾರದಿಂದಾಗಿ ಸ್ವತಂತ್ರ ಸಂಸ್ಥೆಗಳು ಕೇವಲ ಅಧ್ಯಕ್ಷರ ಅಧೀನ ಏಜೆನ್ಸಿಗಳಾಗಿ ಉಳಿಯುತ್ತವೆ ಮತ್ತು ಅಧ್ಯಕ್ಷರ ಕೈಗೆ ಅಪಾರ ಅಧಿಕಾರ ಬರುತ್ತದೆ ಎಂದು ಎಚ್ಚರಿಸಿದ್ದರು.

ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು?

ಟ್ರಂಪ್ ಮುಖ್ಯವಾಗಿ ಮೂರು ಆಯಾಮಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು.

1. ಕಾರ್ಯಕಾರಿ ಆದೇಶಗಳು: ಸಂವಿಧಾನದ 2ನೇ ವಿಧಿಯ ಅಡಿಯಲ್ಲಿ ಟ್ರಂಪ್ ಸಂಸತ್ತಿನ ಅನುಮೋದನೆಯಿಲ್ಲದೆಯೇ ಕಾರ್ಯಕಾರಿ ಆದೇಶಗಳನ್ನು ಹೊರಡಿಸಬಹುದು. ಸಂಸತ್ತು ಇವುಗಳ ವಿರುದ್ಧ ಮಸೂದೆ ತಂದರೂ, ಟ್ರಂಪ್ ವಿಟೋ ಬಳಸಿ ಅದನ್ನು ರದ್ದುಗೊಳಿಸಬಹುದು. ವಲಸೆ ನಿಯಮಗಳು, ಸರ್ಕಾರಿ ಇಲಾಖೆಗಳ ಕಾರ್ಯನಿರ್ವಹಣೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನೀತಿಗಳನ್ನು ಈ ಮೂಲಕ ಜಾರಿಗೊಳಿಸಬಹುದು. ನ್ಯಾಯಾಲಯಗಳು ಮಾತ್ರ ಇಂತಹ ಆದೇಶಗಳಿಗೆ ತಡೆಯೊಡ್ಡಲು ಸಾಧ್ಯ. ಶ್ವೇತಭವನದ ಮೂಲಗಳ ಪ್ರಕಾರ, ವಲಸೆ ಮತ್ತು ವ್ಯಾಪಾರ ನೀತಿಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಹೊಸ ಕಾರ್ಯಕಾರಿ ಆದೇಶಗಳು ಹೊರಬರುವ ಸಾಧ್ಯತೆಯಿದೆ.

2. ವಿದೇಶಾಂಗ ನೀತಿ ಮತ್ತು ಯುದ್ಧದ ನಿರ್ಧಾರಗಳು: ಅಮೆರಿಕ ಸಂವಿಧಾನದ ಪ್ರಕಾರ ಅಧ್ಯಕ್ಷರೇ ಸೇನಾ ಪಡೆಗಳ ಮಹಾದಂಡನಾಯಕ. ಇತರ ದೇಶಗಳೊಂದಿಗೆ ರಾಜತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಳ್ಳುವುದು ಮತ್ತು ಯುದ್ಧಕ್ಕೆ ಸಂಬಂಧಿಸಿದ ತಂತ್ರಜ್ಞಾನ ಹಾಗೂ ಕಾರ್ಯಾಚರಣೆಗಳ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಅವರಿಗಿದೆ. ಇರಾನ್, ಚೀನಾ ಅಥವಾ ಇಸ್ರೇಲ್ ಕುರಿತ ವಿದೇಶಾಂಗ ನೀತಿಗಳಲ್ಲಿ ಡೆಮಾಕ್ರಟರ ಸಂಸದೀಯ ಬಹುಮತದಿಂದ ಯಾವುದೇ ನೇರ ಅಡ್ಡಿಯಾಗುವುದಿಲ್ಲ. ಆದರೆ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಹೊಸ ಕಾನೂನು ಅಥವಾ ಬಜೆಟ್ ನಿಧಿಯ ಅಗತ್ಯವಿದ್ದರೆ ಮಾತ್ರ ಸಂಸತ್ತಿನ ಅನುಮೋದನೆ ಬೇಕಾಗುತ್ತದೆ.

3. ಫೆಡರಲ್ ಇಲಾಖೆಗಳು ಮತ್ತು ಏಜೆನ್ಸಿಗಳ ಮೇಲಿನ ನಿಯಂತ್ರಣ: ಫೆಡರಲ್ ಸರ್ಕಾರದ ಆಡಳಿತ ಯಂತ್ರ ಹಾಗೂ ಏಜೆನ್ಸಿಗಳಿಗೆ ನೇರ ನಿರ್ದೇಶನ ನೀಡುವ ಅಧಿಕಾರ ಟ್ರಂಪ್​ಗೆ ಮುಂದುವರಿಯುತ್ತದೆ. ಸ್ಲಾಟರ್ ಕೇಸ್​ನಿಂದಾಗಿ ಅವರ ನಿಯಂತ್ರಣ ಇನ್ನಷ್ಟು ಬಿಗಿಯಾಗಿದೆ. ಆದರೆ, ಹೊಸ ಆಯೋಗಗಳ ಮುಖ್ಯಸ್ಥರ ನೇಮಕಾತಿಯಲ್ಲಿ ಸೆನೆಟ್​ನ ಒಪ್ಪಿಗೆ ಬೇಕಿರುವುದರಿಂದ ಅಲ್ಲಿ ಸಂಘರ್ಷ ಉಂಟಾಗಬಹುದು. ಜೊತೆಗೆ, ಸರ್ಕಾರಿ ಯೋಜನೆಗಳ ವೆಚ್ಚಕ್ಕೆ ಸಂಸತ್ತಿನ ಅನುಮೋದನೆ ಅಗತ್ಯವಿರುವುದರಿಂದ ಅನುದಾನ ಹಂಚಿಕೆಯಲ್ಲಿ ಜಟಾಪಟಿ ನಿಶ್ಚಿತ.

ಸುಂಕ ಸಮರ, ಇರಾನ್ ಸಂಘರ್ಷವನ್ನು ತಡೆಯಲು ಸಾಧ್ಯವಿಲ್ಲವೇ? ಎರಡೂ ವಿಚಾರಗಳಲ್ಲಿ ಸಂಸತ್ತಿನ ವಿರೋಧದ ನಡುವೆಯೂ ಅಧ್ಯಕ್ಷೀಯ ಅಧಿಕಾರ ಮೇಲುಗೈ ಸಾಧಿಸುತ್ತ ಬಂದಿದೆ.

ವ್ಯಾಪಾರ ಸುಂಕ ಮತ್ತು ನ್ಯಾಯಾಂಗ ವಿಚಾರಣೆ: ವಿದೇಶಿ ವ್ಯಾಪಾರವನ್ನು ನಿಯಂತ್ರಿಸುವುದು ಮತ್ತು ಸುಂಕ ವಿಧಿಸುವುದು ಮೂಲತಃ ಸಂಸತ್ತಿನ ಅಧಿಕಾರ. ಆದರೆ, ಹಿಂದಿನ ಕಾನೂನುಗಳ ಪ್ರಕಾರ ರಾಷ್ಟ್ರೀಯ ಭದ್ರತೆಯ ಕಾರಣಗಳನ್ನು ನೀಡಿ ಸುಂಕ ವಿಧಿಸುವ ತುರ್ತು ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಾಗಿದೆ. ಈ ಹಿಂದೆ ವಿಧಿಸಲಾದ ಸುಂಕಗಳಲ್ಲಿ ಒಂದನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದರೆ, ಮತ್ತೊಂದು 150 ದಿನಗಳ ನಂತರ ಮುಕ್ತಾಯಗೊಂಡಿತ್ತು. ಪ್ರಸ್ತುತ ಟ್ರೇಡ್ ಆಕ್ಟ್ 1974ರ ಸೆಕ್ಷನ್ 301ರ ಅಡಿಯಲ್ಲಿ 60 ದೇಶಗಳ ಮೇಲೆ ಟ್ರಂಪ್ ಸುಂಕ ವಿಧಿಸಿದ್ದು, ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಡೆಮಾಕ್ರಟ್​ಗಳು ಕಾನೂನು ತಿದ್ದುಪಡಿಗೆ ಯತ್ನಿಸಿದರೂ ಟ್ರಂಪ್ ಅವರ ವಿಟೋ ಅಡ್ಡಿಯಾಗಲಿದೆ.

ಸೇನಾ ಕಾರ್ಯಾಚರಣೆಯ ಅಧಿಕಾರ: ಯುದ್ಧವನ್ನು ಅಧಿಕೃತವಾಗಿ ಘೊಷಿಸುವ ಅಧಿಕಾರ ಸಂಸತ್ತಿಗಿದ್ದರೂ, 2026ರ ಫೆಬ್ರವರಿ 28ರಂದು ಟ್ರಂಪ್ ಸಂಸತ್ತಿನ ಪೂರ್ವಾನುಮತಿಯಿಲ್ಲದೆ ಇರಾನ್ ಮೇಲೆ ದಾಳಿ ನಡೆಸಿದ್ದರು. ಯುದ್ಧ ಅಧಿಕಾರಗಳ ನಿರ್ಣಯದ ಪ್ರಕಾರ, ಸಂಸತ್ತಿನ ಅನುಮತಿಯಿಲ್ಲದೆ ಸೈನ್ಯವನ್ನು ಗರಿಷ್ಠ 60 ದಿನಗಳವರೆಗೆ ಮಾತ್ರ ನಿಯೋಜಿಸಬಹುದು. ಆದರೆ 2026ರ ಮೇ 1ರ ಗಡುವಿಗೆ ಮುನ್ನವೇ, ಏಪ್ರಿಲ್ 7ರಂದು ಕದನ ವಿರಾಮ ಘೊಷಣೆಯಾಯಿತು. ಸಂಸತ್ತಿನ ಎರಡೂ ಸದನಗಳು ಯುದ್ಧ ತಡೆಯುವ ಪ್ರಸ್ತಾವನೆಗಳನ್ನು ಅಂಗೀಕರಿಸಿದ್ದರೂ, ಅವು ಅಧ್ಯಕ್ಷರ ಮೇಲೆ ಕಾನೂನಾತ್ಮಕವಾಗಿ ಕಡ್ಡಾಯವಾಗಿರದ ಕಾರಣ ಟ್ರಂಪ್ ಅವುಗಳನ್ನು ಪರಿಗಣಿಸಲಿಲ್ಲ.

ಡೆಮಾಕ್ರಟಿಕ್ ಪಕ್ಷಕ್ಕಿರುವ ಮಾರ್ಗಗಳೇನು?

ಪ್ರತಿನಿಧಿಗಳ ಸಭೆಯ ಓವರ್​ಸೈಟ್ (ತನಿಖಾ), ನ್ಯಾಯಾಂಗ, ಗುಪ್ತಚರ ಮತ್ತು ಹಣಕಾಸು ಸೇವಾ ಸಮಿತಿಗಳ ಅಧ್ಯಕ್ಷತೆ ಡೆಮಾಕ್ರಟರ ಕೈಸೇರಲಿದೆ. ಇದರಿಂದಾಗಿ ಟ್ರಂಪ್ ಆಪ್ತರು ಹಾಗೂ ಅಧಿಕಾರಿಗಳ ವಿರುದ್ಧ ತನಿಖೆಗಳನ್ನು ಆರಂಭಿಸಬಹುದು. ಸಾಕ್ಷ್ಯ ನೀಡಲು ಅಥವಾ ದಾಖಲೆಗಳನ್ನು ಒದಗಿಸಲು ‘ಸಬ್ಪೋನಾ’ (ಕಾನೂನು ಸಮನ್ಸ್) ಜಾರಿ ಮಾಡುವ ಅಧಿಕಾರ ವಿರೋಧ ಪಕ್ಷಕ್ಕೆ ಸಿಗುತ್ತದೆ. ಹೊಸ ನ್ಯಾಯಾಧೀಶರು ಮತ್ತು ಸಂಪುಟ ಸಚಿವರ ನೇಮಕಾತಿಗೆ ಸೆನೆಟ್ ಅನುಮೋದನೆ ಅಗತ್ಯವಿರುವುದರಿಂದ ಟ್ರಂಪ್ ಆಯ್ಕೆಗಳಿಗೆ ತಡೆ ಒಡ್ಡಬಹುದು.