Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಫೆಬ್ರವರಿ 28ರಂದು ಆರಂಭವಾದ ಇರಾನ್ ಜೊತೆಗಿನ ಸಂಘರ್ಷವು ಶೀಘ್ರದಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ಇರಾನ್ ಹೆಚ್ಚು ದಿನ ಹೋರಾಡಲು ಸಾಧ್ಯವಿಲ್ಲ ಎಂದಿರುವ ಟ್ರಂಪ್, ಅದು ಅಣ್ವಸ್ತ್ರವನ್ನು ಪಡೆದುಕೊಳ್ಳಲು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ವೈಟ್ ಹೌಸ್‌ನ ಓವಲ್ ಆಫೀಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಬಳಿ ಅಣ್ವಸ್ತ್ರ ಬಂದರೆ ಇಡೀ ಜಗತ್ತೇ ವಿನಾಶದತ್ತ ತಳ್ಳಲ್ಪಡುತ್ತದೆ ಎಂದು ಎಚ್ಚರಿಸಿದ್ದಾರೆ. ಹೊರ್ಮುಜ್ ಜಲಸಂಧಿ ವಿಷಯದಲ್ಲಿ ಇರಾನ್ ಜೊತೆಗಿನ ಮಾತುಕತೆ ಸುಸೂತ್ರವಾಗಿ ನಡೆಯಲಿದೆ ಎಂಬ ಭರವಸೆ ವ್ಯಕ್ತಪಡಿಸಿದ ಅವರು, ಈ ಪ್ರಮುಖ ಸಮುದ್ರ ಮಾರ್ಗವನ್ನು ತಮ್ಮ ನೌಕಾಪಡೆ ಯಶಸ್ವಿಯಾಗಿ ನಿಯಂತ್ರಿಸುತ್ತಿದೆ ಎಂದಿದ್ದಾರೆ.
ನಾನು ಸದ್ಯದ ಬೆಳವಣಿಗೆಗಳನ್ನು ನೋಡಿದರೆ, ಯುದ್ಧ ಮುಗಿದ ತಕ್ಷಣವೇ ಪರಿಸ್ಥಿತಿ ಮತ್ತೆ ಹಳೆಯ ಸ್ಥಿತಿಗೆ ಮರಳಲಿದೆ. ಈ ಯುದ್ಧ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂದು ಭಾವಿಸುತ್ತೇನೆ, ಏಕೆಂದರೆ ಇರಾನ್ ಇನ್ನು ಹೆಚ್ಚು ದಿನ ಇದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.
ಹಾರ್ಮುಜ್ ಮಾರ್ಗವು ಸದ್ಯಕ್ಕೆ ತೆರೆದಿದೆ. ಅಮೆರಿಕ ನೌಕಾಪಡೆಯ ನೇತೃತ್ವದಲ್ಲಿ ನಾವು ದಿಗ್ಬಂಧನ ವ್ಯವಸ್ಥೆಯನ್ನು ಹೊಂದಿದ್ದು, ಅದನ್ನು ನಾವೇ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದೇವೆ. ಆದರೆ ಅವರು ಯಾವಾಗ ಬೇಕಾದರೂ ದಾಳಿ ನಡೆಸಬಹುದು ಅಥವಾ ಮೈನ್ ಒಂದನ್ನು ಹಾಕಬಹುದು. ಅಲ್ಲಿ ಒಂದೇ ಒಂದು ಮೈನ್ ಬಿದ್ದಿದ್ದರೂ ಸಹ ಅದು ಇಡೀ ಪರಿಸ್ಥಿತಿಯನ್ನು ಹಾಳುಮಾಡುತ್ತದೆ. ಏಕೆಂದರೆ ಯಾರೂ ಕೂಡ ತಮ್ಮ ಶತಕೋಟಿ ಡಾಲರ್ ಮೌಲ್ಯದ ಹಡಗುಗಳನ್ನು ತಂದು ಆಕಸ್ಮಿಕವಾಗಿ ಮೈನ್‌ಗೆ ಸಿಲುಕಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದರು.
ಅಮೆರಿಕ ಪಡೆಗಳು ಶಸ್ತ್ರಾಸ್ತ್ರಗಳ ಕೊರತೆ ಎದುರಿಸುತ್ತಿವೆ ಹಾಗೂ ಈ ಬಗ್ಗೆ ಅಧ್ಯಕ್ಷರು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರಿಂದ ವಿವರಣೆ ಕೇಳಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿಯೊಂದು ಹೇಳಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಇಬ್ಬರು ಅನಾಮಧೇಯ ವ್ಯಕ್ತಿಗಳ ಮಾಹಿತಿಯನ್ನು ಉಲ್ಲೇಖಿಸಿ ದಿ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ್ದ ವರದಿಯಲ್ಲಿ, ಶಸ್ತ್ರಾಸ್ತ್ರಗಳ ಕೊರತೆಯ ಸಮಸ್ಯೆ ಬಗೆಹರಿದಿದೆ ಎಂದು ತಾವು ಭಾವಿಸಿರುವುದಾಗಿ ಟ್ರಂಪ್ ಹೆಗ್ಸೆತ್ ಅವರಿಗೆ ತಿಳಿಸಿದ್ದರು ಎಂದು ಹೇಳಲಾಗಿತ್ತು.
ಆದರೆ ಟ್ರಂಪ್ ಈ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಇದನ್ನು ನಕಲಿ ಮತ್ತು ವದಂತಿ ಎಂದು ಕರೆದು ವಾಷಿಂಗ್ಟನ್ ಪೋಸ್ಟ್ ಸಂಸ್ಥೆಯನ್ನು ಟೀಕಿಸಿದ್ದಾರೆ. ಹೆಗ್ಸೆತ್ ಮಾಡುತ್ತಿರುವ ಕೆಲಸದಿಂದ ತಾವು ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿರುವ ಅವರು, ಹೆಗ್ಸೆತ್ ಮಿಲಿಟರಿ ವಲಯದಲ್ಲಿ ಅಪಾರ ಗೌರವ ಹೊಂದಿರುವ ವ್ಯಕ್ತಿ ಎಂದು ಪ್ರಶಂಸಿಸಿದ್ದಾರೆ. ನಾವು ಅವರ ವರದಿ ಸಂಪೂರ್ಣವಾಗಿ ಸುಳ್ಳು ಎಂದು ತಿಳಿಸಿದ್ದರೂ ಸಹ, ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ಕೆಟ್ಟ ಸಂಸ್ಥೆಯಾಗಿರುವ ದಿ ವಾಷಿಂಗ್ಟನ್ ಕಾಂಪೋಸ್ಟ್ ಈ ವದಂತಿಯನ್ನು ಹಬ್ಬಿಸಿದೆ. ವಾಸ್ತವವಾಗಿ, ಅವರ ಇಂತಹ ನಕಲಿ ವರದಿಗಾರಿಕೆಯನ್ನು ನಾನು ದೇಶದ್ರೋಹ ಎಂದು ಭಾವಿಸುತ್ತೇನೆ, ಎಂದು ಅವರು ತಮ್ಮ ಟ್ರುತ್ ಸೋಶಿಯಲ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ(ಏಜೆನ್ಸೀಸ್).