ಟ್ರಂಪ್ ಗಡುವು vs ಇರಾನ್ ಬಲಿದಾನ: ಅಮೆರಿಕ ಅಧ್ಯಕ್ಷರ ಸವಾಲಿಗೆ ಪೆಜೆಶ್ಕಿಯಾನ್ ಕೊಟ್ಟ ಶಾಕಿಂಗ್ ಉತ್ತರವಿದು! 
ವಿದೇಶ

ಟ್ರಂಪ್ ಗಡುವು vs ಇರಾನ್ ಬಲಿದಾನ: ಅಮೆರಿಕ ಅಧ್ಯಕ್ಷರ ಸವಾಲಿಗೆ ಪೆಜೆಶ್ಕಿಯಾನ್ ಕೊಟ್ಟ ಶಾಕಿಂಗ್ ಉತ್ತರವಿದು! Masoud Pezeshkian

ಟೆಹ್ರಾನ್: ಜಗತ್ತು ಮತ್ತೊಂದು ಮಹಾಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿದೆಯೇ ಎಂಬ ಅನುಮಾನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಡೆಡ್‌ಲೈನ್ ಮುಗಿಯಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವ ಬೆನ್ನಲ್ಲೇ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ನೀಡಿರುವ ಹೇಳಿಕೆ ಇಡೀ ವಿಶ್ವದ ಗಮನ ಸೆಳೆದಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು 1.4 ಕೋಟಿ ಇರಾನಿಯನ್ನರು ಸಿದ್ಧರಿದ್ದಾರೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್(Masoud Pezeshkian) ಘೋಷಿಸುವ ಮೂಲಕ ಅಮೆರಿಕಕ್ಕೆ ನೇರ ಸವಾಲು ಹಾಕಿದ್ದಾರೆ.

ಇರಾನ್ ಅಧ್ಯಕ್ಷರ ದಿಟ್ಟ ಪ್ರತ್ಯುತ್ತರ

ಟ್ರಂಪ್ ಎಚ್ಚರಿಕೆಗೆ ಎದೆಗುಂದದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, Xನಲ್ಲಿ ಭಾವನಾತ್ಮಕ ಮತ್ತು ಆಕ್ರಮಣಕಾರಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಇಲ್ಲಿಯವರೆಗೆ 14 ಮಿಲಿಯನ್‌ಗೂ ಹೆಚ್ಚು ಹೆಮ್ಮೆಯ ಇರಾನಿಯನ್ನರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಲು ಸಿದ್ಧರಿದ್ದಾರೆಂದು ಘೋಷಿಸಿದ್ದಾರೆ. ನಾನು ಕೂಡ ಈ ದೇಶಕ್ಕಾಗಿ ಬಲಿದಾನವಾಗಲು ಸದಾ ಸಿದ್ಧ ಎಂದು ಪೆಜೆಶ್ಕಿಯಾನ್ ಬರೆದುಕೊಂಡಿದ್ದಾರೆ.
ಇದು ಕೇವಲ ರಾಜಕೀಯ ಹೇಳಿಕೆಯಾಗಿರದೆ, ಅಮೆರಿಕದ ಆಕ್ರಮಣದ ವಿರುದ್ಧ ಇಡೀ ದೇಶವೇ ಒಂದಾಗಿ ನಿಂತಿದೆ ಎಂಬ ಸಂದೇಶವನ್ನು ರವಾನಿಸಿದೆ.

ಮಾನವ ಸರಪಳಿ: ಪವರ್ ಪ್ಲಾಂಟ್‌ಗಳ ರಕ್ಷಣೆಗೆ ವಿನೂತನ ಪ್ರತಿರೋಧ

ಇನ್ನೊಂದೆಡೆ, ಇರಾನ್‌ನ ಕ್ರೀಡಾ ಉಪ ಸಚಿವ ಅಲಿರೆಜಾ ರಹೀಮಿ ಅವರು ದೇಶದ ಯುವಜನತೆ, ಕ್ರೀಡಾಪಟುಗಳು ಮತ್ತು ಕಲಾವಿದರಿಗೆ ವಿಶೇಷ ಕರೆ ನೀಡಿದ್ದಾರೆ. ಅಮೆರಿಕದ ವೈಮಾನಿಕ ದಾಳಿಯನ್ನು ತಡೆಯಲು ದೇಶದ ಪ್ರಮುಖ ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.
ಈ ವಿದ್ಯುತ್ ಸ್ಥಾವರಗಳು ನಮ್ಮ ರಾಷ್ಟ್ರದ ಆಸ್ತಿಯಾಗಿವೆ. ಇವುಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿರುವ ರಹೀಮಿ, ಮಂಗಳವಾರ ಮಧ್ಯಾಹ್ನ 2:00 ಗಂಟೆಗೆ ಎಲ್ಲಾ ವಿದ್ಯುತ್ ಕೇಂದ್ರಗಳ ಬಳಿ ಜಮಾಯಿಸುವಂತೆ ಜನತೆಗೆ ಸೂಚಿಸಿದ್ದಾರೆ. ನಾಗರಿಕರನ್ನೇ ಗುರಾಣಿಯನ್ನಾಗಿ ಬಳಸಿಕೊಳ್ಳುವ ಈ ತಂತ್ರವು ಅಮೆರಿಕದ ದಾಳಿಯನ್ನು ತಡೆಯಬಲ್ಲದೇ ಎಂಬ ಪ್ರಶ್ನೆ ಈಗ ಮೂಡಿದೆ.

ಟ್ರಂಪ್ ನೀಡಿದ ಆ ಭಯಾನಕ ಎಚ್ಚರಿಕೆ ಏನು..?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಅತ್ಯಂತ ಕಠಿಣವಾದ ಗಡುವು ವಿಧಿಸಿದ್ದಾರೆ. ಮಂಗಳವಾರ ರಾತ್ರಿ ವಾಷಿಂಗ್ಟನ್ ಕಾಲಮಾನ 8:00 ಗಂಟೆಯೊಳಗೆ ಇರಾನ್ ತನ್ನ ಹಠಮಾರಿತನ ಬಿಟ್ಟು ಮಾತುಕತೆಗೆ ಬರಬೇಕು ಮತ್ತು ಹೋರ್ಮುಜ್ ಜಲಸಂಧಿಯನ್ನು ಜಾಗತಿಕ ಹಡಗು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬುದು ಟ್ರಂಪ್ ಆಗ್ರಹವಾಗಿದೆ.
ಒಂದು ವೇಳೆ ಈ ಗಡುವಿನೊಳಗೆ ಇರಾನ್ ಒಪ್ಪದಿದ್ದರೆ, ಕೇವಲ 4 ಗಂಟೆಗಳ ಅವಧಿಯಲ್ಲಿ ಇರಾನ್‌ನ ಪ್ರತಿಯೊಂದು ವಿದ್ಯುತ್ ಸ್ಥಾವರ ಮತ್ತು ಪ್ರಮುಖ ಸೇತುವೆಗಳನ್ನು ಬಾಂಬ್ ಹಾಕಿ ಧ್ವಂಸಗೊಳಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ಒಂದೇ ರಾತ್ರಿಯಲ್ಲಿ ಇಡೀ ದೇಶವನ್ನೇ ನಿಷ್ಕ್ರಿಯಗೊಳಿಸಬಹುದು, ಆ ರಾತ್ರಿ ನಾಳೆಯೇ ಆಗಿರಬಹುದು ಎಂಬ ಟ್ರಂಪ್ ಮಾತುಗಳು ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.

ಏನಿದು ಹೋರ್ಮುಜ್ ಜಲಸಂಧಿಯ ವಿವಾದ?

ವಿಶ್ವದ ಒಟ್ಟು ತೈಲ ಪೂರೈಕೆಯ ಗಣನೀಯ ಭಾಗ ಈ ಹೋರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಇರಾನ್ ಈ ಮಾರ್ಗವನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದು ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಟ್ರಂಪ್ ಅವರ ಮುಖ್ಯ ಉದ್ದೇಶ ಈ ಮಾರ್ಗವನ್ನು ಸುಗಮಗೊಳಿಸುವುದು ಮತ್ತು ಇರಾನ್‌ನ ಪರಮಾಣು ಚಟುವಟಿಕೆಗಳಿಗೆ ಬ್ರೇಕ್ ಹಾಕುವುದು.

ಮುಂದೇನು..?

ವಾಷಿಂಗ್ಟನ್ ಕಾಲಮಾನದ ಪ್ರಕಾರ ಮಂಗಳವಾರ ರಾತ್ರಿ 8 ಗಂಟೆ ಇಡೀ ಜಗತ್ತಿಗೆ ನಿರ್ಣಾಯಕವಾಗಲಿದೆ. ಅಮೆರಿಕ ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳ ಮೂಲಕ ಇರಾನ್ ಮೇಲೆ ದಾಳಿ ನಡೆಸುತ್ತದೆಯೇ ಅಥವಾ ಇರಾನ್ ಕೊನೆಯ ಕ್ಷಣದಲ್ಲಿ ಮಾತುಕತೆಗೆ ಒಪ್ಪುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಒಟ್ಟಾರೆಯಾಗಿ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟ ತಲುಪಿದ್ದು, ಒಂದು ಸಣ್ಣ ತಪ್ಪು ಹೆಜ್ಜೆಯೂ ದೊಡ್ಡ ಮಟ್ಟದ ವಿನಾಶಕ್ಕೆ ನಾಂದಿ ಹಾಡಬಹುದು,(ಏಜೆನ್ಸೀಸ್).