ನ್ಯೂಯಾರ್ಕ್: ಮನಸೋ ಇಚ್ಛೆ ನಿರ್ಧಾರಗಳನ್ನು ತಳೆದ ಹಾಗೂ ಅವುಗಳನ್ನು ಜನರ ಮೇಲೆ ಹೇರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಜನರು ಮತದಾನದ ಮೂಲಕವೇ ಭರ್ಜರಿ ತಿರುಗೇಟು ನೀಡಿದ್ದಾರೆ. ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಹಲವು ಸಮೀಕ್ಷೆಗಳು ಮುಂಚೆಯೇ ಹೇಳಿದ್ದರೂ, ಟ್ರಂಪ್ ಮಾತ್ರ ತಾವು ನಡೆದದ್ದೇ ದಾರಿ ಎಂಬಂತೆ ಸಾಗಿದರು. ಇರಾನ್ ವಿರುದ್ಧದ ಯುದ್ಧ, ಅಮೆರಿಕದಲ್ಲಿ ಬೆಲೆಯೇರಿಕೆಯಿಂದ ಜನರ ಪರದಾಟ ಹಾಗೂ ಅಧಿಕಾರವನ್ನು ಸ್ವಂತ ಉದ್ಯಮದ ವಿಸ್ತರಣೆಗೆ ಬಳಸಿಕೊಂಡ ಟ್ರಂಪ್ ನೀತಿಗಳ ಬಗ್ಗೆ ಜನರಲ್ಲಿ ಭಾರಿ ಆಕ್ರೋಶವಿದೆ. ಈಗ ಟ್ರಂಪ್ ಮುಂದಿನ ಹಾದಿಯಂತೂ ಸಲೀಸಲ್ಲ. ಏಕೆಂದರೆ, ಮತದಾರರು ಟ್ರಂಪ್ಗೆ ಸೋಲಿನ ಬೇಡಿಯನ್ನು ತೊಡಿಸಿದ್ದು, ರಿಪಬ್ಲಿಕನ್ ಪಕ್ಷದಲ್ಲೂ ಬಂಡಾಯ ಭುಗಿಲೆದ್ದಿದೆ. ಈ ಎಲ್ಲ ಬೆಳವಣಿಗೆಗಳ ಕುರಿತಾದ ವಿವರ ಇಲ್ಲಿದೆ.
ಅಮೆರಿಕದಲ್ಲಿ ಮುಂದಿನ ಎರಡು ವರ್ಷಗಳ ರಾಜಕೀಯ ಹಲವು ಏಳುಬೀಳುಗಳಿಂದ ಕೂಡಿರಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಹಠಮಾರಿ ನಿರ್ಧಾರಗಳಿಂದಲೇ ಜನವಿರೋಧವನ್ನು ಕಟ್ಟಿಕೊಂಡ, ಸುಂಕ ಸಮರದಿಂದ ಇಡೀ ಜಾಗತಿಕ ವಲಯದ ಆರ್ಥಿಕತೆಯನ್ನೇ ಅಲುಗಾಡಿಸಿದ ಡೊನಾಲ್ಡ್ ಟ್ರಂಪ್ ಮುಂದಿನ ದಿನಗಳಲ್ಲಾದರೂ ಮೆತ್ತಗಾಗುತ್ತಾರಾ ಎಂಬ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಅದೇನಿದ್ದರೂ, ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಟ್ರಂಪ್ ತಳೆದಿರುವ ಆತುರದ ನಿರ್ಧಾರಗಳು ಒಂದೇರಡಲ್ಲ. ಅವು ಅಮೆರಿಕಕ್ಕೆ ಮಾತ್ರವಲ್ಲ ಇತರ ದೇಶಗಳಿಗೂ ಹಾನಿ ಮಾಡಿವೆ. ಹಾಗಾಗಿಯೇ, ಮಧ್ಯಂತರ ಚುನಾವಣೆಯ ಜನಾದೇಶ ಪ್ರತಿಪಕ್ಷ ಡೆಮಾಕ್ರಟಿಕ್ ಕಡೆ ವಾಲಿದೆ.
ರಿಪಬ್ಲಿಕನ್ ಪಕ್ಷದ ಸೋಲಿನ ನಂತರ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರ ಮೇಲೆ ರಾಜೀನಾಮೆ ನೀಡುವಂತೆ ಒತ್ತಡ ಹೆಚ್ಚುತ್ತಿದೆ. ಇರಾನ್ ಮೇಲೆ ದಾಳಿ ನಡೆಸಲು ಪೀಟ್ ಹೆಗ್ಸೆತ್ ಅವರು ಟ್ರಂಪ್ ಅವರನ್ನು ಪ್ರಚೋದಿಸಿದರು, ಆದರೆ ಯುದ್ಧವನ್ನು ಕೊನೆಗೊಳಿಸಲು ಯಾವುದೇ ಸ್ಪಷ್ಟ ಯೋಜನೆಯನ್ನು ರೂಪಿಸಿರಲಿಲ್ಲ ಎಂಬ ಆರೋಪ ಅವರ ಮೇಲಿದೆ. ಕೆಂಟುಕಿಯ ರಿಪಬ್ಲಿಕನ್ ಸಂಸದ ಥಾಮಸ್ ಮ್ಯಾಸ್ಸಿ ಅವರು ಬುಧವಾರ ಹೆಗ್ಸೆತ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಇರಾನ್ನಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಟ್ರಂಪ್ ತಪ್ಪಾಗಿ ನಿಭಾಯಿಸುತ್ತಿದ್ದಾರೆ ಎಂದು ಶೇ.65ರಷ್ಟು ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಟ್ರಂಪ್ ಅವರ ಯುದ್ಧನೀತಿಯನ್ನು ನೇರವಾಗಿ ಮತ್ತು ಕಟುವಾಗಿ ವಿರೋಧಿಸಿದ್ದಾರೆ. ಇರಾನ್ ಬಿಕ್ಕಟ್ಟನ್ನು ಸೇನಾ ಕಾರ್ಯಾಚರಣೆ ಅಥವಾ ನಿರಂತರ ಬಾಂಬ್ ದಾಳಿಗಳ ಮೂಲಕ ಪರಿಹರಿಸುವ ಬದಲು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಬೇಕಿತ್ತು ಎಂಬುದು ಸಾರ್ವಜನಿಕರ ಸ್ಪಷ್ಟ ನಿಲುವಾಗಿತ್ತು.
ಹಲವಾರು ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿದಂತೆ ಟ್ರಂಪ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದವು. ಡೆಮಾಕ್ರಟಿಕ್ ಪಕ್ಷವು ಈ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿತು. ರಾಜಧಾನಿ ವಾಷಿಂಗ್ಟನ್ ಡಿಸಿಯ ನವೀಕರಣಕ್ಕಾಗಿ 900 ಮಿಲಿಯನ್ ಡಾಲರ್ಗೂ ಅಧಿಕ ವೆಚ್ಚದ ವೈಟ್ ಹೌಸ್ ಬ್ಯೂಟಿಫಿಕೇಶನ್ ಪ್ರಾಜೆಕ್ಟ್ ಆರಂಭಿಸಲಾಯಿತು. ಸರ್ಕಾರಿ ಬೊಕ್ಕಸದ ಈ ದುಂದುವೆಚ್ಚದ ಲೆಕ್ಕಪರಿಶೋಧನೆಗೆ ಡೆಮಾಕ್ರಟ್ಗಳು ಪಟ್ಟುಹಿಡಿದರು.
ಅಲ್ಲದೆ, 2025ರಲ್ಲಿ ಟ್ರಂಪ್ ಮತ್ತು ಅವರ ಕುಟುಂಬವು ವಿವಿಧ ಉದ್ಯಮಗಳಿಂದ 2 ಶತಕೋಟಿ ಡಾಲರ್ಗೂ ಹೆಚ್ಚು ಗಳಿಸಿದೆ ಎಂಬ ಮಾಹಿತಿ ಹೊರಬಂತು. ಕುಟುಂಬದ ಕ್ರಿಪ್ಟೋ ಉದ್ಯಮ ‘ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್’ನಿಂದ ಟ್ರಂಪ್ 500 ಮಿಲಿಯನ್ ಡಾಲರ್ಗೂ ಹೆಚ್ಚು ಹಾಗೂ ತಮ್ಮದೇ ‘ಟ್ರಂಪ್ ಮೀಮ್ ಕಾಯಿನ್’ನಿಂದ 600 ಮಿಲಿಯನ್ ಡಾಲರ್ ಸಂಪಾದಿಸಿದರು. ಅಬುಧಾಬಿಯ ಎಂಜಿಎಕ್ಸ್ ಸಂಸ್ಥೆಯು ಈ ಉದ್ಯಮದಲ್ಲಿ ಹೂಡಿಕೆ ಮಾಡಿದ್ದರ ಬಗ್ಗೆಯೂ ತೀವ್ರ ಪ್ರಶ್ನೆಗಳು ಎದ್ದವು.
ಟ್ರಂಪ್ ಹೆಸರಿನಲ್ಲಿ 2025ರಲ್ಲಿ ಬರೋಬ್ಬರಿ 21,000 ಷೇರು ವಹಿವಾಟುಗಳು (ಸ್ಟಾಕ್ ಟ್ರೇಡಿಂಗ್ ಡೀಲ್ಸ್) ನಡೆದಿವೆ. ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಇಷ್ಟೊಂದು ವ್ಯಾಪಕವಾಗಿ ಷೇರು ವ್ಯವಹಾರ ನಡೆಸುವುದು ಹಿತಾಸಕ್ತಿ ಸಂಘರ್ಷ (ಕಾನ್ಪಿ ್ಲಕ್ಟ್ ಆಫ್ ಇಂಟರೆಸ್ಟ್) ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವೈಯಕ್ತಿಕ ಲಾಭ ಮಾಡಿಕೊಳ್ಳುವುದಕ್ಕೆ ಸಮ ಎಂದು ಆರೋಪಿಸಲಾಯಿತು.
ಅಳಿಯ ಕುಶ್ನರ್ ಮೇಲಿನ ಅನುಮಾನಗಳು: ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಶಾಂತಿದೂತರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಟ್ರಂಪ್ ಅಳಿಯ ಜಾರೆಡ್ ಕುಶ್ನರ್ ಅವರ ಖಾಸಗಿ ಕಂಪನಿಗೆ ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ ಮತ್ತು ಇತರ ಮಧ್ಯಪ್ರಾಚ್ಯ ಮೂಲಗಳಿಂದ ಭಾರಿ ಮೊತ್ತದ ಹಣ ಹರಿದುಬಂದಿದೆ ಎಂಬ ಆರೋಪ ಕೇಳಿಬಂತು. ಇದನ್ನು ವಿದೇಶಿ ಪ್ರಭಾವ ಮತ್ತು ಅಧಿಕಾರ ದುರುಪಯೋಗವೆಂದು ಪರಿಗಣಿಸಿ ತನಿಖೆ ನಡೆಸುವಂತೆ ಒತ್ತಾಯಿಸಲಾಯಿತು.
ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕ್ರಿಪ್ಟೋ ಎಕ್ಸ್ ಚೇಂಜ್ ಬೈನಾನ್ಸ್ನ ಸಂಸ್ಥಾಪಕ ಚಾಂಗ್ಪೆಂಗ್ ಜಾವೋ ಅವರಿಗೆ ಟ್ರಂಪ್ 2025ರ ಅಕ್ಟೋಬರ್ನಲ್ಲಿ ಕ್ಷಮಾದಾನ ನೀಡಿದರು. ಇದು ವೈಯಕ್ತಿಕ ಲಾಭಕ್ಕಾಗಿ ಕೈಗೊಂಡ ನಿರ್ಧಾರ ಎಂಬ ಟೀಕೆಗಳಿಗೆ ಗುರಿಯಾಯಿತು.
ಬೆಲ್ಜಿಯಂನ ಆಂಟ್ವರ್ಪ್ ವರ್ಲ್ಡ್ ಡೈಮಂಡ್ ಸೆಂಟರ್ನ ಮುಖ್ಯಸ್ಥ ಇಸಿಡೋರ್ ಮೋರ್ಸೆಲ್ ಟ್ರಂಪ್ಗೆ ‘ಫ್ರೀಡಂ 250’ ಹೆಸರಿನ, 30 ಸಾವಿರ ಡಾಲರ್ ಮೌಲ್ಯದ ವಜ್ರ-ರತ್ನ ಖಚಿತ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು. ಆಶ್ಚರ್ಯಕರ ರೀತಿಯಲ್ಲಿ, ಕೇವಲ 4 ವಾರಗಳ ನಂತರ ಅಮೆರಿಕ ಸರ್ಕಾರವು ಬೆಲ್ಜಿಯಂನ ವಜ್ರ ಉದ್ಯಮಕ್ಕೆ ಭಾರಿ ಸುಂಕ ವಿನಾಯಿತಿಯನ್ನು ಘೊಷಿಸಿತು.
ಆಗಸ್ಟ್ ತಿಂಗಳಲ್ಲಿ ಪ್ರಸಿದ್ಧ ಸುದ್ದಿಸಂಸ್ಥೆ ರಾಯಿಟರ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡ 71ರಷ್ಟು ಮತದಾರರು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸುವಲ್ಲಿ ಡೊನಾಲ್ಡ್ ಟ್ರಂಪ್ ಕಾರ್ಯವೈಖರಿಯನ್ನು ಬಹಿರಂಗವಾಗಿ ತಿರಸ್ಕರಿಸಿದ್ದಾರೆ. ಶೇಕಡ 22ರಷ್ಟು ಮತದಾರರಷ್ಟೇ ಟ್ರಂಪ್ ಬೆಂಬಲಕ್ಕೆ ನಿಂತಿದ್ದರು. ಆರೋಗ್ಯ ಸೇವೆ, ಪೆಟ್ರೋಲ್, ದಿನಬಳಕೆಯ ಆಹಾರ ಧಾನ್ಯಗಳು ಹಾಗೂ ಮನೆಗಳ ಗಗನಕ್ಕೇರುತ್ತಿರುವ ಬೆಲೆಗಳಿಂದಾಗಿ ಮತದಾರರು ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅಕ್ಟೋಬರ್ 14ರಂದು ಪ್ರಕಟವಾದ ಫಾಕ್ಸ್ ನ್ಯೂಸ್ ಸಮೀಕ್ಷೆಯಲ್ಲಿಯೂ ಪ್ರತಿ 10 ಮತದಾರರಲ್ಲಿ 6 ಜನರು ಜೀವನ ವೆಚ್ಚವನ್ನೇ ದೇಶದ ಅತಿ ದೊಡ್ಡ ಸಮಸ್ಯೆಯೆಂದು ಗುರುತಿಸಿದ್ದರು.
ಟ್ರಂಪ್ ಆಡಳಿತಾವಧಿಯಲ್ಲಿ ಅಮೆರಿಕದ ಆರ್ಥಿಕತೆ ಚೇತರಿಸಿಕೊಂಡಿತು ಮತ್ತು ನಿರುದ್ಯೋಗ ದರವೂ ನಿಯಂತ್ರಣದಲ್ಲೇ ಇತ್ತು. ಆದರೆ ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಅವರು ಸಂಪೂರ್ಣ ವಿಫಲರಾದರು. ಟ್ರಂಪ್ ಆರಂಭಿಸಿದ ಸುಂಕ ಸಮರದಿಂದಾಗಿ ವಿದೇಶಗಳಿಂದ ಆಮದಾಗುತ್ತಿದ್ದ ವಸ್ತುಗಳ ಬೆಲೆಗಳು ಅಮೆರಿಕದಲ್ಲಿ ಗಣನೀಯವಾಗಿ ಹೆಚ್ಚಿದವು. ಇದರ ನೇರ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬಿತ್ತು. ಪರಿಣಾಮವಾಗಿ, ಟ್ರಂಪ್ ಜನಪ್ರಿಯತೆಯ ರೇಟಿಂಗ್ (ಅಪೂ›ವಲ್ ರೇಟಿಂಗ್) ಶೇ.38ಕ್ಕೆ ಕುಸಿಯಿತು. ಇತಿಹಾಸದಲ್ಲಿ ಮಧ್ಯಂತರ ಚುನಾವಣೆಗಳ ಸಂದರ್ಭದಲ್ಲಿ ಅಮೆರಿಕದ ಯಾವುದೇ ಹಾಲಿ ಅಧ್ಯಕ್ಷರಿಗೆ ದೊರೆತ ಅತ್ಯಂತ ಕನಿಷ್ಠ ರೇಟಿಂಗ್ ಇದಾಗಿದೆ.
ಮೆಕ್ಸಿಕೋ, ದಕ್ಷಿಣ ಅಮೆರಿಕ, ಮಧ್ಯ ಅಮೆರಿಕ, ಪೋರ್ಟೆ ರಿಕೊ ಮೂಲದ 6.8 ಕೋಟಿ ಲ್ಯಾಟಿನ್ ಅಮೆರಿಕನ್ನರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಇದು ದೇಶದ ಒಟ್ಟು ಜನಸಂಖ್ಯೆಯ ಸರಿಸುಮಾರು ಶೇ.20ರಷ್ಟಾಗುತ್ತದೆ. 2020ರ ಚುನಾ ವಣೆಯಲ್ಲಿ ಟ್ರಂಪ್ಗೆ ಈ ಸಮುದಾಯದಿಂದ ಶೇ.32ರಷ್ಟು ಮತಗಳು ಲಭಿಸಿದ್ದವು, ಇದು 2024ರಲ್ಲಿ ಶೇ.46ಕ್ಕೆ ಏರಿಕೆಯಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿತ್ತು. ಎನ್ಬಿಸಿ ಎಕ್ಸಿಟ್ ಪೋಲ್ ಪ್ರಕಾರ, ಶೇ.62ರಷ್ಟು ಲ್ಯಾಟಿನ್ ಮತ ದಾರರು ಡೆಮಾಕ್ರಟಿಕ್ ಅಭ್ಯರ್ಥಿಗಳನ್ನು ಬೆಂಬಲಿಸಿದರೆ, ರಿಪಬ್ಲಿಕನ್ ಪರವಾಗಿ ನಿಂತವರು ಶೇ.35ರಷ್ಟು ಮಂದಿ ಮಾತ್ರ. ಹಣದುಬ್ಬರ, ನಿರಂತರವಾಗಿ ಏರುತ್ತಿರುವ ದೈನಂದಿನ ಜೀವನ ವೆಚ್ಚಗಳು ಮತ್ತು ವಲಸಿಗರ ವಿರುದ್ಧ ಟ್ರಂಪ್ ಸರ್ಕಾರ ಕೈಗೊಂಡ ತೀರಾ ಕಠಿಣಾತಿ ಕಠಿಣ ಕ್ರಮಗಳು ಈ ಸಮುದಾಯದ ಅಸಮಾಧಾನಕ್ಕೆ ಮುಖ್ಯ ಕಾರಣಗಳು.
1. ಕಾಂಗ್ರೆಸ್ (ಅಮೆರಿಕನ್ ಸಂಸತ್ತು) ಟ್ರಂಪ್ ಅವರ ಸುಂಕ ವಿಧಿಸುವಿಕೆ, ಮಿಲಿಟರಿ ಕಾರ್ಯಾಚರಣೆಗೆ ಆದೇಶ ನೀಡುವುದು ಅಥವಾ ಸರ್ಕಾರದ ವೆಚ್ಚಗಳಿಗೆ ಸಂಬಂಧಿಸಿದ ಷರತ್ತುಗಳನ್ನು ಹೆಚ್ಚಿಸಲು ಹೊಸ ಕಾಯ್ದೆಗಳನ್ನು ತರಲು ಪ್ರಯತ್ನಿಸಬಹುದು. ಕಾಂಗ್ರೆಸ್ ಅನುಮೋದಿಸಿ ಕಳುಹಿಸಿದ ಮಸೂದೆಯನ್ನು ಟ್ರಂಪ್ ವೀಟೋ ಅಧಿಕಾರ ಬಳಸಿ ತಿರಸ್ಕರಿಸಿದರೂ, ಅದನ್ನು ಪ್ರಶ್ನಿಸುವ ಪರ್ಯಾಯ ಆಯ್ಕೆ ಕಾಂಗ್ರೆಸ್ ಬಳಿ ಇದೆ.
2. ಅಧ್ಯಕ್ಷರ ವೀಟೋ ನಿರ್ಧಾರವನ್ನು ರದ್ದುಪಡಿಸಲು (ಓವರ್ರೈಡ್ ಮಾಡಲು) ಸದನದಲ್ಲಿ ಮತದಾನ ನಡೆಯುತ್ತದೆ. ಇದಕ್ಕೆ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತ ಅಗತ್ಯವಿರುತ್ತದೆ; ಇಷ್ಟು ಬಲವನ್ನು ಒಗ್ಗೂಡಿಸುವುದು ವಿರೋಧ ಪಕ್ಷಕ್ಕೆ ಕಷ್ಟಕರ.
3. ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಕೆಳಮನೆಯಾದ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ನಲ್ಲಿ ಅವರ ವಿರುದ್ಧ ಮಹಾಭಿಯೋಗ (ಇಂಪೀಚ್ವೆುಂಟ್) ಪ್ರಸ್ತಾವನೆಯನ್ನು ತರಬಹುದು. ಕೆಳಮನೆಯಲ್ಲಿ ಇದು ಸರಳ ಬಹುಮತದೊಂದಿಗೆ ಸುಲಭವಾಗಿ ಅಂಗೀಕಾರವಾಗಬಹುದು. ಆದರೆ ಮೇಲ್ಮನೆಯಾದ ಸೆನೆಟ್ನಲ್ಲಿ ಶಿಕ್ಷೆ ವಿಧಿಸಿ ಅಧಿಕಾರದಿಂದ ತೆಗೆಯಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ; ಇದು ಡೆಮಾಕ್ರಟ್ಗಳಿಗೆ ಬಹುತೇಕ ಅಸಾಧ್ಯ. 2019ಮತ್ತು 2021ರಲ್ಲೂ ಸಹ ಟ್ರಂಪ್ ಇದೇ ರೀತಿ ಸೆನೆಟ್ನಲ್ಲಿ ಮೂರನೇ ಎರಡರಷ್ಟು ಬಹುಮತ ಸಿಗದ ಕಾರಣ ಮಹಾಭಿಯೋಗದಿಂದ ಪಾರಾಗಿದ್ದರು.
4. ಟ್ರಂಪ್ ಅಧಿಕಾರದಲ್ಲಿರುವ ಮುಂದಿನ ಎರಡು ವರ್ಷಗಳ ಕಾಲ ಕೆಲವು ಪ್ರಮುಖ ವಿಚಾರಗಳಲ್ಲಿ ‘ಸಂಸತ್ತು ಮತ್ತು ಅಧ್ಯಕ್ಷರು’ ನಡುವಿನ ಪರಸ್ಪರ ಒಪ್ಪಂದಗಳ ಮೂಲಕವೇ ಸರ್ಕಾರವನ್ನು ನಡೆಸಬೇಕಾಗುತ್ತದೆ. ಏಕೆಂದರೆ ಬಜೆಟ್ನಂತಹ ಪ್ರಮುಖ ವಿಷಯಗಳಲ್ಲಿ ಟ್ರಂಪ್ ವೀಟೋ ಅಧಿಕಾರ ಬಳಸಿದರೆ, ಸರ್ಕಾರಿ ಇಲಾಖೆಗಳಿಗೆ ಹಣಕಾಸು ಒದಗಿಸುವ ಪ್ರಕ್ರಿಯೆ ಸ್ಥಗಿತಗೊಂಡು ಸರ್ಕಾರಿ ಆಡಳಿತವೇ ಸ್ತಬ್ಧವಾಗುವ (ಶಟ್ಡೌನ್) ಪರಿಸ್ಥಿತಿ ನಿರ್ಮಾಣವಾಗಬಹುದು.