ಟ್ರೂತ್ ಸೋಷಿಯಲ್‌ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹಂಚಿಕೊಂಡ ಚಿತ್ರ 
ವಿದೇಶ

ವಿಶ್ವ ಭೂಪಟವನ್ನೇ ಬದಲಿಸಿದ ಟ್ರಂಪ್; ಕೆನಡಾ, ವೆನೆಜುವೆಲಾ ಈಗ ಅಮೆರಿಕದ ಭಾಗ: ವೈರಲ್ ಫೋಟೋದಿಂದ ಜಾಗತಿಕ ಸಂಚಲನ | Donald Trump

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೊಮ್ಮೆ ತಮ್ಮ ವಿಲಕ್ಷಣ ಮತ್ತು ಅಚ್ಚರಿಯ ನಡೆಯ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಮಂಗಳವಾರ ತಮ್ಮ ಟ್ರುತ್ ಸೋಶಿಯಲ್ ವೇದಿಕೆಯಲ್ಲಿ ಟ್ರಂಪ್ ಹಂಚಿಕೊಂಡಿರುವ ಆ ಫೋಟೋದಲ್ಲಿ ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ವೆನೆಜುವೆಲಾ ದೇಶಗಳನ್ನು ಅಮೆರಿಕದ ಭೂಭಾಗವೆಂದು ಚಿತ್ರಿಸಲಾಗಿದೆ.

ಏನಿದೆ ಆ ವಿವಾದಾತ್ಮಕ ಫೋಟೋದಲ್ಲಿ..?

ಟ್ರಂಪ್ ಹಂಚಿಕೊಂಡಿರುವ ಈ ಹಳೆಯ ಫೋಟೋ ಓವಲ್ ಆಫೀಸ್‌ನಲ್ಲಿ ತೆಗೆದದ್ದಾಗಿದೆ. ಇದರಲ್ಲಿ ಟ್ರಂಪ್ ಅವರೊಂದಿಗೆ ಜಗತ್ತಿನ ಪ್ರಭಾವಿ ನಾಯಕರಾದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಬ್ರಿಟನ್ ಪ್ರಧಾನಿ ಕೈರ್ ಸ್ಟಾರ್ಮರ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಕುಳಿತಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ.
ಆದರೆ, ಇಲ್ಲಿ ಎಲ್ಲರ ಗಮನ ಸೆಳೆದಿರುವುದು ಅಲ್ಲಿರುವ ಅಮೆರಿಕದ ಧ್ವಜ. ಈ ಧ್ವಜದ ಮೇಲೆ ಮೂಡಿಸಲಾದ ಭೂಪಟದಲ್ಲಿ ಕೆನಡಾ, ವೆನೆಜುವೆಲಾ ಮತ್ತು ಇತ್ತೀಚೆಗೆ ವಿವಾದಕ್ಕೀಡಾದ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕದ ಧ್ವಜದ ಬಣ್ಣದಲ್ಲೇ (ಅಂದರೆ ಅಮೆರಿಕದ ಭಾಗವಾಗಿ) ತೋರಿಸಲಾಗಿದೆ.

ಗ್ರೀನ್‌ಲ್ಯಾಂಡ್ ಮತ್ತು ಕೆನಡಾ ಮೇಲೆ ಟ್ರಂಪ್ ಕಣ್ಣು..?

ಇತ್ತೀಚಿನ ದಿನಗಳಲ್ಲಿ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಅನ್ನು ಖರೀದಿಸುವ ಅಥವಾ ವಶಪಡಿಸಿಕೊಳ್ಳುವ ಬಗ್ಗೆ ಪದೇಪದೆ ಮಾತನಾಡುತ್ತಿದ್ದಾರೆ. ಈ ಹಿಂದೆ ಕೆನಡಾದ ಮೇಲೆ ಸುಂಕ ಹೇರುವ ಬೆದರಿಕೆ ಹಾಕುವಾಗಲೂ ಕೆನಡಾವು ಅಮೆರಿಕದ 51ನೇ ರಾಜ್ಯವಾಗಲು ಸಿದ್ಧವಾಗಿದೆಯೇ? ಎಂದು ವ್ಯಂಗ್ಯವಾಡಿದ್ದರು. ಈಗ ಅಧಿಕೃತವಾಗಿ ಇಂತಹ ಪೋಸ್ಟ್ ಹಂಚಿಕೊಂಡಿರುವುದು ಅಮೆರಿಕದ ನೆರೆಹೊರೆಯ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ.

ಜಾಗತಿಕ ನಾಯಕರ ಇಕ್ಕಟ್ಟು

ಈ ಫೋಟೋದಲ್ಲಿ ಮ್ಯಾಕ್ರನ್ ಮತ್ತು ಮೆಲೋನಿಯಂತಹ ಪ್ರಭಾವಿ ನಾಯಕರು ಇರುವಾಗಲೇ ಇಂತಹ ಬದಲಾದ ಭೂಪಟವನ್ನು ಪ್ರದರ್ಶಿಸಿರುವುದು ರಾಜತಾಂತ್ರಿಕವಾಗಿ ದೊಡ್ಡ ಸಂದೇಶ ಎಂದು ಭಾವಿಸಲಾಗಿದೆ. ಅಮೆರಿಕದ ಪ್ರಾಬಲ್ಯ ಜಗತ್ತಿನಾದ್ಯಂತ ವಿಸ್ತರಿಸುತ್ತಿದೆ ಎಂಬ ಸಂದೇಶವನ್ನು ನೀಡಲು ಟ್ರಂಪ್ ಈ ಮಾರ್ಗ ಅನುಸರಿಸಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಯುಎಸ್​ಗೆ ವಿರುದ್ಧ ಗುಡುಗಿದ ಕೆನಡಾ,ಯುರೋಪಿಯನ್ ಒಕ್ಕೂಟ

ಕೆನಡಾದ ತೀಕ್ಷ್ಣ ಪ್ರತಿಕ್ರಿಯೆ

ಕೆನಡಾವನ್ನು ಅಮೆರಿಕದ ಭಾಗವಾಗಿ ತೋರಿಸಿರುವುದಕ್ಕೆ ಕೆನಡಾ ಸರ್ಕಾರವು ತನ್ನ ಅಸಮಾಧಾನವನ್ನು ಹೊರಹಾಕಿದೆ. ಕೆನಡಾದ ನಾಗರಿಕರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಟ್ರಂಪ್ ಅವರ ದುರಹಂಕಾರದ ಪರಮಾವಧಿ ಎಂದು ಖಂಡಿಸುತ್ತಿದ್ದಾರೆ.

ಯುರೋಪಿಯನ್ ಒಕ್ಕೂಟದ (EU) ಆತಂಕ

ಫೋಟೋದಲ್ಲಿ ಉರ್ಸುಲಾ ವಾನ್ ಡೆರ್ ಲೇಯನ್ ಮತ್ತು ಮ್ಯಾಕ್ರನ್ ಅವರಂತಹ ನಾಯಕರು ಇರುವುದರಿಂದ ಯುರೋಪಿಯನ್ ಒಕ್ಕೂಟಕ್ಕೆ ಇದು ದೊಡ್ಡ ಇಕ್ಕಟ್ಟು ಸೃಷ್ಟಿಸಿದೆ. ಈ ಬಗ್ಗೆ ಅಧಿಕೃತವಾಗಿ EU ಯಾವುದೇ ಕಠಿಣ ಹೇಳಿಕೆ ನೀಡಿಲ್ಲವಾದರೂ, ಒಳಗೊಳಗೆ ಇದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಟ್ರಂಪ್ ಅವರು ಮಿತ್ರ ರಾಷ್ಟ್ರಗಳ ಗಡಿಗಳನ್ನು ಗೌರವಿಸುತ್ತಿಲ್ಲ ಎಂಬ ಅಭಿಪ್ರಾಯ ಯುರೋಪಿಯನ್ ರಾಜತಾಂತ್ರಿಕ ವಲಯದಲ್ಲಿ ಕೇಳಿಬರುತ್ತಿದೆ.

ಗ್ರೀನ್‌ಲ್ಯಾಂಡ್ ರಕ್ಷಣೆ

ಡೆನ್ಮಾರ್ಕ್ ಮತ್ತು ಯುರೋಪಿಯನ್ ಒಕ್ಕೂಟವು ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ ಎಂದು ಈ ಹಿಂದೆಯೇ ಹೇಳಿವೆ. ಈಗ ಭೂಪಟದಲ್ಲಿ ಅದನ್ನು ಅಮೆರಿಕಕ್ಕೆ ಸೇರಿಸಿರುವುದು ಡೆನ್ಮಾರ್ಕ್‌ನ ಸಾರ್ವಭೌಮತ್ವಕ್ಕೆ ಮಾಡಿದ ಅವಮಾನ ಎಂದು ಅಲ್ಲಿನ ನಾಯಕರು ಭಾವಿಸಿದ್ದಾರೆ.

ವೆನೆಜುವೆಲಾ ಪ್ರತಿಕ್ರಿಯೆ

ವೆನೆಜುವೆಲಾವನ್ನು ಅಮೆರಿಕದ ಒಕ್ಕೂಟಕ್ಕೆ ಸೇರಿಸಿರುವುದು ಅಲ್ಲಿನ ನಿಕೋಲಸ್ ಮಡುರೊ ಸರ್ಕಾರವನ್ನು ಕೆರಳಿಸಿದೆ. ಇದು ಅಮೆರಿಕದ ಸಾಮ್ರಾಜ್ಯಶಾಹಿ ಆಸೆಯನ್ನು ತೋರಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ,(ಏಜೆನ್ಸೀಸ್).