Indonesia: ಇಂಡೋನೇಷ್ಯಾದ ಮಧುರಾ ದ್ವೀಪದ ಬಳಿ ಭಾನುವಾರ(ಆ. 02) ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಐವರು ಮೃತೊಟ್ಟಿದ್ದು, 41 ಮಂದಿ ಕಾಣೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎಂದು ವರದಿಯಾಗಿದೆ.
ಪೂರ್ವ ಜಾವಾ ಪ್ರಾಂತ್ಯದ ಸುರಬಯಾದಿಂದ ದಕ್ಷಿಣ ಸುಲವೇಸಿಯ ಮಕಾಸ್ಸರ್‌ಗೆ ಪ್ರಯಾಣಿಸುತ್ತಿದ್ದ ಹಡಗು ಜಾವಾದ ಈಶಾನ್ಯ ಕರಾವಳಿಯ ಮಧುರಾ ದ್ವೀಪದ ಬಳಿ ಬೆಂಕಿಗೆ ಆಹುತಿಯಾಗಿದೆ. ಈ ವೇಳೆ ಹಡಗಿನಲ್ಲಿ ಸಿಬ್ಬಂದಿ ಸೇರಿ ಸುಮಾರು 271 ಜನರಿದ್ದರು ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಇಂಡೋನೇಷ್ಯಾದ ಶೋಧ ಮತ್ತು ರಕ್ಷಣಾ ಸಂಸ್ಥೆಯ ಪ್ರಕಾರ, ಭಾನುವಾರ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಸಿಬ್ಬಂದಿ ಸೇರಿ 271 ಪ್ರಯಾಣಿಕರಿದ್ದರು. ಮಧ್ಯಾಹ್ನದ ವೇಳೆಗೆ ಕನಿಷ್ಠ 225 ಜನರನ್ನು ರಕ್ಷಿಸಲಾಗಿದ್ದು, ಇನ್ನೂ ಕಾಣೆಯಾದವರನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದೆ.
ಇನ್ನೂ ಬೆಂಕಿ ಅವಘಡಕ್ಕೆ ತಕ್ಷಣಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ, ನಾಪತ್ತೆಯಾದವರನ್ನು ಸುತ್ತಮುತ್ತಲಿನ ನೀರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. 2025 ಜುಲೈನಲ್ಲೂ ಇದೇ ರೀತಿ ಉತ್ತರ ಸುಲವೇಸಿ ಪ್ರಾಂತ್ಯದ ಬಳಿ ಪ್ರಯಾಣಿಕರ ಹಡಗೊಂದಕ್ಕೆ ಬೆಂಕಿ ಹೊತ್ತಿಕೊಂಡಾಗ ಕನಿಷ್ಠ ಮೂರು ಜನ ಮೃತಪಟ್ಟಿದ್ದು, 150 ಜನರನ್ನು ರಕ್ಷಣೆ ಮಾಡಲಾಗಿತ್ತು (ಏಜೆನ್ಸೀಸ್).