ಸಾಂದರ್ಭಿಕ ಚಿತ್ರ 
ವಿದೇಶ

ನಿರ್ಮಾಣ ಹಂತದ ಶಾಲಾ ಕಟ್ಟಡದ ಛಾವಣಿ ಕುಸಿದು ದುರಂತ: 14 ವಿದ್ಯಾರ್ಥಿಗಳು ಸಾವು, ಹಲವರಿಗೆ ಗಂಭೀರ ಗಾಯ | building collapses

ಇಸ್ಲಾಮಾಬಾದ್: ಪೂರ್ವ ಪಾಕಿಸ್ತಾನದ ಲಾಹೋರ್‌ನಲ್ಲಿ ಮಂಗಳವಾರ(ಜೂ. 30) ಸಂಜೆ ಸುಮಾರಿಗೆ ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟದ ಮೇಲ್ಛಾವಣಿ ಕುಸಿದು ದುರಂತ(building collapses) ಸಂಭವಿಸಿದ್ದು, ಕನಿಷ್ಠ 14 ಮಕ್ಕಳು ಮೃತಪಟ್ಟಿದ್ದು, ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಫೈಸಲ್ ಕಮ್ರಾನ್ , ನಿರ್ಮಾಣ ಹಂತದಲ್ಲಿರುವ ಬೋಧನಾ ಕೇಂದ್ರದ ಛಾವಣಿ ಕುಸಿದು ಘಟನೆ ನಡೆದಿದೆ. 14 ಶಾಲಾ ಮಕ್ಕಳು ಸಾವನ್ನಪ್ಪಿದ್ದು, ಇತರ ಎಂಟು ಮಕ್ಕಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೋಧನಾ ಕೇಂದ್ರದ ಮಾಲೀಕರು ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೋಧನಾ ಕೇಂದ್ರವು ಹಳೆಯ ಕಟ್ಟಡದಲ್ಲಿದ್ದು, ಕಳಪೆ ಗುಣಮಟ್ಟದ ನಿರ್ಮಾಣದಿಂದಾಗಿ ಅಪೂರ್ಣಗೊಂಡ ಎರಡನೇ ಮಹಡಿಯ ಮೇಲ್ಛಾವಣಿ ಕುಸಿದಿದೆ. ಹೆಚ್ಚಿನ ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂಬ ಮಾಹಿತಿ ಹಿನ್ನೆಲೆ ರಕ್ಷಣಾ ತಂಡಗಳು ಅವಶೇಷಗಳಡಿ ಹುಡುಕಾಟ ನಡೆಸಿವೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿರುವ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಬಲಿಪಶುಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ ಮತ್ತು ಇದೇ ರೀತಿಯ ದುರಂತಗಳನ್ನು ತಡೆಗಟ್ಟಲು ಪರಿಣಾಮಕಾರಿ ಸುರಕ್ಷತಾ ಕ್ರಮಗಳ ಅಗತ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ (ಏಜೆನ್ಸೀಸ್).