ಪ್ಲಾಸ್ಟಿಕ್ ತುಂಡು 
ವಿದೇಶ

ಪುಟ್ಟ ಬಾಟಲಿ ಮುಚ್ಚಳದಲ್ಲಿ 307 ಜೀವಿಗಳು! ಕಡಲ ತೀರದಲ್ಲಿ ಜಗತ್ತನ್ನೇ ಬೆರಗುಗೊಳಿಸಿದ 3.5 ಸೆಂ.ಮೀ ಪ್ಲಾಸ್ಟಿಕ್ ತುಂಡು

ಪ್ರಮುಖ ಮುಖ್ಯಾಂಶಗಳು

  • 3.5 ಸೆಂ.ಮೀ ಮುಚ್ಚಳದಲ್ಲಿ 307 ಜೀವಿಗಳ ಆಶ್ರಯ
  • ಜಪಾನ್‌ಗೆ ಕಾಲಿಟ್ಟ ಹೊಸ ಪ್ರಭೇದಗಳ ಜೀವರಾಶಿಗಳು
  • 1,500 ಕಿ.ಮೀ ದೂರದ ಪಯಣದ ಬಗ್ಗೆ ಅಚ್ಚರಿ ಮಾಹಿತಿ
  • ಕಡಲ ಪರಿಸರಕ್ಕೆ ಎದುರಾದ ಹೊಸ ಭೀತಿ ಕುರಿತು ಕಳವಳ
ಟೋಕಿಯೋ: ಜಪಾನ್‌ನ ದಕ್ಷಿಣ ಕರಾವಳಿಯಲ್ಲಿ ಇತ್ತೀಚೆಗಷ್ಟೇ ಪತ್ತೆಯಾದ 3.5 ಸೆಂಟಿಮೀಟರ್ ಅಗಲದ ಸಣ್ಣ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳವೊಂದು ಸದ್ಯ ಇಡೀ ಜಗತ್ತನ್ನೇ ಅಕ್ಷರಶಃ ಬೆರಗುಗೊಳಿಸಿದೆ.
ಈ ವಿಷಯ ವಿಜ್ಞಾನಿಗಳ ಲೋಕಕ್ಕೆ ಒಂದು ವಿಸ್ಮಯ ಎನ್ನುವಂತೆ ಮಾಡಿದೆ. ಹೌದು, ಪರಿಸರ ಪ್ರೇಮಿಗಳು ಹೀಗೂ ಉಂಟೇ ಎಂದು ತಮ್ಮಲ್ಲೇ ತಾವು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಅಸಲಿಗೆ, ಇಷ್ಟಕ್ಕೆಲ್ಲ ಕಾರಣ, ಸಣ್ಣ ಬಾಟಲಿ ಕ್ಯಾಪ್​ನಲ್ಲಿ ಅಡಗಿದ್ದ ವಿವಿಧ ಜೀವಿಗಳು. ಕಡಲ ತೀರಕ್ಕೆ ತೇಲಿಬಂದ ಈ ಪುಟ್ಟ ಪ್ಲಾಸ್ಟಿಕ್ ಮುಚ್ಚಳವು ಬರೋಬ್ಬರಿ 307 ಜಲಚರಗಳಿಗೆ ಆಶ್ರಯ ನೀಡಿ, ಒಂದು ಕಿರಿದಾದ ಅಂತಾರಾಷ್ಟ್ರೀಯ ಜಲಸಮೂಹವನ್ನೇ ಸೃಷ್ಟಿಸಿದೆ.

307 ಜೀವಿಗಳಿಗೆ ಆಸರೆ

ಜಪಾನ್‌ನ ಕೊಚಿ ಸಮುದ್ರ ಭಾಗದಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಬಾಟಲಿ ಮುಚ್ಚಳ ಪತ್ತೆಯಾಗಿದೆ. ಈ ಸಣ್ಣ ಕ್ಯಾಪ್​ ಮೇಲಿದ್ದ ಜೀವ ವೈವಿಧ್ಯತೆಯನ್ನು ಕಂಡು ವಿಜ್ಞಾನಿಗಳೇ ದಂಗಾಗಿದ್ದಾರೆ. ಮುಚ್ಚಳದಲ್ಲಿದ್ದ ಶೇ.75ರಷ್ಟು ಜೀವಿಗಳು ಸಣ್ಣ ಕೊಳವೆಗಳನ್ನು ನಿರ್ಮಿಸಿಕೊಂಡು ಬದುಕುವ ಜಲಚರಗಳಾಗಿ ಮಾರ್ಪಟ್ಟಿವೆ.

ಜಪಾನ್‌ ಹೊಸ ಅತಿಥಿ

ಈ ಮುಚ್ಚಳದ ಒಳಭಾಗದಲ್ಲಿ ಯುನಿಸ್ ಬಿಪಾಪಿಲ್ಲೇಟಾ (Eunice bipapillata) ಎಂಬ ಪಾಲಿಕೀಟ್ ಪ್ರಭೇದದ ಹುಳುಗಳು ತನ್ನ ವಾಸಸ್ಥಾನವನ್ನು ಕಟ್ಟಿಕೊಂಡಿವೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಈ ಪ್ರಭೇದದ ಜೀವಿಯು ಜಪಾನ್ ಸಮುದ್ರ ಗಡಿಯಲ್ಲಿ ಪತ್ತೆಯಾಗಿರುವುದು ಇದೇ ಮೊದಲು ಎಂಬ ವಿಷಯ ನಿಜಕ್ಕೂ ಹುಬ್ಬೇರಿಸುವಂತದ್ದು.

ಈ ವಿಷಯ ಹೊರಬಿದ್ದಿದ್ದು ಹೇಗೆ?

ಸೈನ್ಸ್​ ಲೋಕಕ್ಕೆ ಪ್ರಶ್ನೆಗಳ ಸವಾಲು ಎಸೆದ ಸಣ್ಣ ಪ್ಲಾಸ್ಟಿಕ್ ಮುಚ್ಚಳ ಎಲ್ಲಿಂದ ಬಂತು? ಇದು ಹೇಗೆ 1,500 ಕಿ.ಮೀ ದೂರ ಪ್ರಯಾಣಿಸಿತು ಎಂಬುದನ್ನು ಪತ್ತೆಹಚ್ಚಲು ಸಂಶೋಧಕರ ತಂಡ 3 ಪ್ರಮುಖ ಹಂತಗಳಲ್ಲಿ ಅಧ್ಯಯನ ನಡೆಸಿದೆ.
  1. ಜೀವಿಗಳ ಅಧ್ಯಯನ: ಮುಚ್ಚಳದ ಮೇಲಿದ್ದ ಜೀವಿಗಳ ಸಂಯೋಜನೆ ಮತ್ತು ಹುಳುಗಳನ್ನು ಪರಿಶೀಲಿಸಿದಾಗ, ಈ ವಸ್ತುವಿನ ಪಯಣ ಒಂದಕ್ಕಿಂತ ಹೆಚ್ಚು ಸಮುದ್ರ ವಲಯಗಳನ್ನು ದಾಟಿಬಂದಿದೆ ಎಂಬ ಅಚ್ಚರಿ ಸಂಗತಿ ಬಯಲಾಗಿದೆ.
  2. ಆಮ್ಲಜನಕ ಐಸೊಟೋಪ್ ಪರೀಕ್ಷೆ (Oxygen Isotope Ratios): ಮುಚ್ಚಳದಲ್ಲಿದ್ದ ಫೊರಾಮಿನಿಫೆರಾ ಎಂಬ ಏಕಕೋಶೀಯ ಜೀವಿಗಳ ಚಿಪ್ಪುಗಳಲ್ಲಿದ್ದ ಆಮ್ಲಜನಕ ಐಸೊಟೋಪ್ ಪ್ರಮಾಣವನ್ನು ವಿಜ್ಞಾನಿಗಳು ವಿಶ್ಲೇಷಿಸಿದರು. ಇದರಿಂದ ಈ ಜೀವಿಗಳು ಮೊದಲು ಬಿಸಿಯಾದ ಉಷ್ಣವಲಯದ ನೀರಿನಲ್ಲಿ ಬೆಳೆದು, ನಂತರ 22 ಡಿಗ್ರಿ ಸೆಲ್ಸಿಯಸ್ ತಾಪಮಾನದ ನೀರನ್ನು ತಲುಪಿರುವುದು ದೃಢವಾಗಿದೆ.
  3. ಕಂಪ್ಯೂಟರ್ ಮಾಡೆಲಿಂಗ್ ಕಮಾಂಡ್​: ಸಮುದ್ರದ ಅಲೆಗಳು, ಶಾಖ ಮತ್ತು ನೀರಿನ ಚಲನೆಯನ್ನು ಆಧರಿಸಿ ಸಿದ್ಧಪಡಿಸಿದ ಕಂಪ್ಯೂಟರ್ ಮಾಡೆಲ್‌ಗಳ ಮೂಲಕ ಪರಿಶೀಲಿಸಿದಾಗ, ಈ ಬಾಟಲ್ ಮುಚ್ಚಳವು ಉತ್ತರ ಫಿಲಿಪೈನ್ಸ್ ಕರಾವಳಿಯಿಂದ ತೇಲಿ ಜಪಾನ್‌ಗೆ ಸಾವಿರಾರು ಮೈಲಿಗಳನ್ನು ದಾಟಿ ಬಂದಿರುವುದು ಗೊತ್ತಾಗಿದೆ.

ಅಪರೂಪಕ್ಕಿಂತ ಅಪಾಯದ ಕುರುಹು

ಪ್ಲಾಸ್ಟಿಕ್ ತ್ಯಾಜ್ಯಗಳು ಸಮುದ್ರದ ಜಲಚರಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೊತ್ತೊಯ್ಯುವ ವಾಹನಗಳಾಗಿ ಇತ್ತೀಚಿನ ದಿನಗಳಲ್ಲಿ ಮಾರ್ಪಟ್ಟಿವೆ. ಇದರಿಂದಾಗಿ, ಮೂಲತಃ ಆ ವಲಯಕ್ಕೆ ಸೇರದ ಜೀವಿಗಳು, ಹೊಸ ಸಮುದ್ರ ಪ್ರದೇಶಗಳನ್ನು ಆಕ್ರಮಿಸಿಕೊಂಡು, ಅಲ್ಲಿನ ಸ್ಥಳೀಯ ಕಡಲ ಜೀವಿಗಳ ಅಸ್ತಿತ್ವಕ್ಕೆ ಕಂಠಕವಾಗುತ್ತಿರುವುದು ತೀರ ಕಳವಳಕಾರಿ. ಅತ್ಯಂತ ಸಣ್ಣ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಕೂಡ ಪರಿಸರದ ಮೇಲೆ ಎಷ್ಟು ಭೀಕರ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಈ ಘಟನೆ ಇಡೀ ವಿಶ್ವಕ್ಕೆ ಒಂದು ಜ್ವಲಂತ ಸಾಕ್ಷಿ ಎನ್ನಬಹುದು,(ಏಜೆನ್ಸೀಸ್).