ರೇಡಿಯೋ ಸಂದೇಶದಲ್ಲಿ ಸೆರೆಯಾಯ್ತು ಭೀಕರ ಸಂಘರ್ಷದ ಆ ಕ್ಷಣಗಳು! ಅಮೆರಿಕ-ಇರಾನ್ ನೌಕಾಪಡೆಗಳ ನಡುವೆ ನಡೆದಿದ್ದೇನು..?
- ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕ-ಇರಾನ್ ನೌಕಾಪಡೆಗಳ ಮುಖಾಮುಖಿ.
- "ಕೊನೆಯ ಎಚ್ಚರಿಕೆ" ನೀಡಿದ ಇರಾನ್ ಪಡೆಗಳು.
- ಜಲಸಂಧಿಯನ್ನು ಮರುಪಡೆಯಲು ಅಮೆರಿಕದಿಂದ ಸೀಕ್ರೆಟ್ ಕಾರ್ಯಾಚರಣೆ ಆರಂಭ.
- ಇರಾನ್‌ನಿಂದ ಪ್ರತಿ ಹಡಗಿಗೆ $2 ಮಿಲಿಯನ್ 'ಟೋಲ್' ಬೇಡಿಕೆ.
- ವಿಫಲವಾದ ಇಸ್ಲಾಮಾಬಾದ್ ಶಾಂತಿ ಮಾತುಕತೆ.
ಟೆಹ್ರಾನ್: ಒಂದು ಕಡೆ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ನಡೆಯುತ್ತಿದ್ದರೆ, ಇನ್ನೊಂದೆಡೆ ಹೋರ್ಮುಜ್ ಜಲಸಂಧಿಯ ಸಮುದ್ರದ ಅಲೆಗಳ ಮೇಲೆ ಯುದ್ಧದ ಕಿಡಿ ಹೊತ್ತಿಕೊಂಡಿದೆ. ಅಮೆರಿಕದ ಎರಡು ಬಲಿಷ್ಠ ಯುದ್ಧನೌಕೆಗಳು(Naval Conflict) ಇರಾನ್‌ನ ನಿಯಂತ್ರಣದಲ್ಲಿರುವ ಸಮುದ್ರ ಮಾರ್ಗವನ್ನು ಭೇದಿಸಲು ಪ್ರಯತ್ನಿಸಿದಾಗ, ಉಭಯ ದೇಶಗಳ ನಡುವೆ ಭೀಕರ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮುದ್ರದ ನಡುವೆ 'ರೇಡಿಯೋ' ವಾರ್: ದಿಸ್ ಈಸ್ ದಿ ಲಾಸ್ಟ್ ವಾರ್ನಿಂಗ್!
ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿಯ ಪ್ರಕಾರ, ಅಮೆರಿಕದ ನೌಕಾಪಡೆಯ ಎರಡು ಕ್ಷಿಪಣಿ ಧ್ವಂಸಕ ನೌಕೆಗಳಾದ USS ಫ್ರಾಂಕ್ ಇ ಪೀಟರ್ಸನ್ ಮತ್ತು USS ಮೈಕೆಲ್ ಮರ್ಫಿ, ಇರಾನ್ ನಿರ್ಬಂಧಿಸಿರುವ ಹೋರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಪ್ರಯತ್ನಿಸಿದವು. ಈ ವೇಳೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕೆಗಳು ಇವುಗಳನ್ನು ಅಡ್ಡಗಟ್ಟಿವೆ.
ಸಮೀಪದಲ್ಲಿದ್ದ ನಾಗರಿಕ ಹಡಗೊಂದು ಸೆರೆಹಿಡಿದ ರೇಡಿಯೋ ಸಂದೇಶದ ಪ್ರಕಾರ, ಇರಾನ್ ಪಡೆಗಳು ಅತಿ ಕಠಿಣ ಸ್ವರದಲ್ಲಿ ಎಚ್ಚರಿಕೆ ನೀಡಿವೆ. ಇದು ನಿಮಗೆ ನೀಡುತ್ತಿರುವ ಕೊನೆಯ ಎಚ್ಚರಿಕೆ, ಇದೇ ಕೊನೆಯ ಎಚ್ಚರಿಕೆ. ಇದಕ್ಕೆ ಪ್ರತ್ಯುತ್ತರ ನೀಡಿದ ಅಮೆರಿಕದ ಹಡಗು, ನಾವು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಸಂಚರಿಸುತ್ತಿದ್ದೇವೆ. ನಮ್ಮ ಸರ್ಕಾರ ಘೋಷಿಸಿರುವ ಕದನ ವಿರಾಮದ ನಿಯಮಗಳನ್ನು ನಾವು ಪಾಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದೆ.
ಜಲಸಂಧಿ ಮರುಪಡೆಯಲು ಅಮೆರಿಕದ ಸೀಕ್ರೆಟ್ ಆಪರೇಷನ್?
ಕಳೆದ ಆರು ವಾರಗಳಿಂದ ಇರಾನ್ ಈ ಪ್ರಮುಖ ಸಮುದ್ರ ಮಾರ್ಗವನ್ನು ಬಹುತೇಕ ಬಂದ್ ಮಾಡಿದೆ. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಅಮೆರಿಕ ಈಗ ಹೋರ್ಮುಜ್ ಜಲಸಂಧಿಯನ್ನು ಕ್ಲಿಯರ್ ಮಾಡುವ ಪ್ರಕ್ರಿಯೆ ಆರಂಭಿಸಿದೆ.
ಅಂಡರ್ ವಾಟರ್ ಡ್ರೋನ್ಸ್: ಇರಾನ್ ಸಮುದ್ರದೊಳಗೆ ಅಳವಡಿಸಿರುವ ಮೈನ್‌ಗಳನ್ನು ಪತ್ತೆಹಚ್ಚಲು ಅಮೆರಿಕ ನೀರೊಳಗಿನ ಡ್ರೋನ್‌ಗಳನ್ನು ಬಳಸುತ್ತಿದೆ.
ಹೊಸ ಮಾರ್ಗ: ಈ ಜಲಸಂಧಿಯ ಮೇಲೆ ಇರಾನ್‌ನ ಏಕಸ್ವಾಮ್ಯವನ್ನು ನಾವು ಒಪ್ಪುವುದಿಲ್ಲ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಅಡ್ಮಿರಲ್ ಬ್ರಾಡ್ ಕೂಪರ್ ಗುಡುಗಿದ್ದಾರೆ.
ಇರಾನ್‌ನ 'ಹ್ಯಾಪಜಾರ್ಡ್' ಮೈನ್‌ಗಳು ಮತ್ತು $2 ಮಿಲಿಯನ್ ಸುಲಿಗೆ!
ವರದಿಗಳ ಪ್ರಕಾರ, ಇರಾನ್ ಸಮುದ್ರದಲ್ಲಿ ಯಾವುದೇ ಯೋಜನೆಯಿಲ್ಲದೆ ಬಾಂಬ್‌ಗಳನ್ನು ಹರಡಿದೆ. ಈಗ ಸ್ವತಃ ಇರಾನ್‌ಗೇ ಅವು ಎಲ್ಲಿವೆ ಎಂದು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಲೇ ಸಮುದ್ರ ಮಾರ್ಗ ಅತ್ಯಂತ ಅಪಾಯಕಾರಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಇರಾನ್, ಪ್ರತಿ ಹಡಗು ತನ್ನ ಮಾರ್ಗದಲ್ಲಿ ಸುರಕ್ಷಿತವಾಗಿ ಸಾಗಲು $2 ಮಿಲಿಯನ್ (ಸುಮಾರು 16 ಕೋಟಿ ರೂಪಾಯಿ) ಟೋಲ್ ನೀಡಬೇಕು ಎಂದು ಬೇಡಿಕೆಯಿಟ್ಟಿದೆ.
ಇಸ್ಲಾಮಾಬಾದ್ ಸಂಧಾನದ ಮೇಲೆ ಕರಿನೆರಳು
ಸಮುದ್ರದಲ್ಲಿ ಈ ಸಂಘರ್ಷ ನಡೆಯುತ್ತಿರುವಾಗಲೇ ಇಸ್ಲಾಮಾಬಾದ್‌ನಲ್ಲಿ ನಡೆದ ರಾಜತಾಂತ್ರಿಕ ಮಾತುಕತೆಗಳು ವಿಫಲವಾಗಿವೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೀಡಿದ ಅಂತಿಮ ಮತ್ತು ಅತ್ಯುತ್ತಮ ಆಫರ್ ಅನ್ನು ಇರಾನ್ ತಿರಸ್ಕರಿಸಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮತ್ತಷ್ಟು ತೀವ್ರಗೊಳ್ಳುವುದು ಈಗ ಬಹುತೇಕ ಖಚಿತವಾದಂತಿದೆ.
ಜಾಗತಿಕ ತೈಲ ಮಾರುಕಟ್ಟೆಗೆ ಭೀತಿ
ವಿಶ್ವದ ಶೇ. 20ರಷ್ಟು ಕಚ್ಚಾ ತೈಲ ಹೋರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಈಗ ಅಮೆರಿಕ ಮತ್ತು ಇರಾನ್ ನಡುವಿನ ಈ ನೇರ ಸಂಘರ್ಷದಿಂದಾಗಿ ತೈಲ ಬೆಲೆಗಳು ಗಗನಕ್ಕೇರುವ ಆತಂಕ ಎದುರಾಗಿದೆ,(ಏಜೆನ್ಸೀಸ್).