ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ನಿಷೇಧ ಸಮರ್ಥಿಸಿಕೊಂಡ ಇಸ್ಲಾಂ ಪ್ರಚಾರಕ ಜಾಕಿರ್ ನಾಯ್ಕ್ 
ವಿದೇಶ

"ಅವರ ರಕ್ಷಣೆಗಾಗಿಯೇ ಈ ಕ್ರಮ" : ಅಫ್ಘಾನಿಸ್ತಾನದಲ್ಲಿ "ಸ್ತ್ರೀ ಶಿಕ್ಷಣ ನಿಷೇಧ"; ಇಸ್ಲಾಂ ಪ್ರಚಾರಕ ಜಾಕಿರ್ ನಾಯ್ಕ್ ಸಮರ್ಥನೆ! Zakir Naik

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವ ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗಿದೆ. ಈ ಕುರಿತು ಭಾರತ ಸೇರಿದಂತೆ, ಇತರ ದೇಶಗಳು ಜಾಗತಿಕ ವೇದಿಕೆಗಳಲ್ಲಿ ಅನೇಕ ಸಲ ಅಫ್ಘಾನಿಸ್ತಾನ್​​ ಸರ್ಕಾರದ ವಿರುದ್ಧ ಕಿಡಿಕಾರಿವೆ.

ಆದರೆ, ತನ್ನನ್ನು ತಾವು ಇಸ್ಲಾಂ ಧರ್ಮದ ಪಂಡಿತನೆಂದು ಕರೆದುಕೊಳ್ಳುವ ಜಾಕೀರ್​ ನಾಯ್ಕ್​​, ತಾಲಿಬಾನ್ ಆಡಳಿತ ಸ್ತ್ರೀ ಶಿಕ್ಷಣಕ್ಕೆ ಹೇರಿರುವ ನಿಷೇಧವನ್ನು ಸಮರ್ಥಿಸಿಕೊಂಡಿದ್ದು, ಇದು ವಿಶ್ವ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅವರ ರಕ್ಷಣೆಯ ದೃಷ್ಟಿಯಿಂದ ಹೀಗೆ ಮಾಡಲಾಗಿದೆ!

ಅಕ್ರಮ ಹಣ ವರ್ಗಾವಣೆ ಹಾಗೂ ಕೋಮು ಗಲಭೆಗೆ ಸಂಬಂಧಿದ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಆರೋಪಿ ಈ ಜಾಕೀರ್​ ನಾಯ್ಕ್​, ಅಫ್ಘಾನಿಸ್ತಾನ ಸರ್ಕಾರದ ಶಿಕ್ಷಣ ನೀತಿಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಸುದ್ದಿ ಮಾಧ್ಯಮಗಳಲ್ಲಿ ತೋರಿಸುವ ಎಲ್ಲಾ ವರದಿಗಳು ಸತ್ಯಾಂಶದಿಂದ ಕೂಡಿರುವುದಿಲ್ಲ. ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಸುರಕ್ಷಿತ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಹೀಗಾಗಿ ಅವರ ರಕ್ಷಣೆ ಕಾರಣದಿಂದ ಶಾಲಾ-ಕಾಲೇಜುಗಳಿಗೆ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡಲಾಗುತ್ತಿಲ್ಲ.

ಆದರೆ, ಅಲ್ಲಿಯ ಹೆಣ್ಣು ಮಕ್ಕಳು, ಷರಿಯತ್​, ಕುರಾನ್​, ಅರೇಬಿಕ್​ನಲ್ಲಿ ಉನ್ನತ ವ್ಯಾಸಂಗ ಪಡೆಯುತ್ತಿದ್ದಾರೆ. ಕೆಲವರು ಪಿಹೆಚ್​ಡಿ ಪದವಿಯನ್ನೂ ಗಳಿಸಿದ್ದಾರೆಂದು ನಾಯ್ಕ್​ ಹೇಳಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳಾ ಶಿಕ್ಷಕಿಯರ ಸಂಖ್ಯೆ ಕೂಡ ಬಹಳ ಕಡಿಮೆಯಿದೆ, ಆದ್ದರಿಂದ ಅಲ್ಲಿಯ ಸರ್ಕಾರ ಆರನೇ ತರಗತಿವರೆಗೆ ಮಾತ್ರ ಹೆಣ್ಣು ಮಕ್ಕಳಿಗೆ ಶಾಲಾ ಶಿಕ್ಷಣವನ್ನು ನೀಡುತ್ತಿದೆ. ಒಮ್ಮೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿದ ಮೇಲೆ ಪರಿಸ್ಥಿತಿ ಸುಧಾರಿಸಲಿದೆ ಎಂದು ಇಸ್ಲಾಂ ಪಂಡಿತ ಹೇಳಿಕೊಂಡಿದ್ದಾನೆ. ಆದರೆ ಹೆಣ್ಣು ಮಕ್ಕಳು ಶಾಲೆಗೆ ಹೋಗದೇ ಅದೇಗೆ ಶಿಕ್ಷಕಿಯರಾಗುತ್ತಾರೆ ಎಂಬ ಪ್ರಶ್ನೆಗೆ ಜಾಕೀರ್​ ನಾಯ್ಕ ಅವರೇ ಉತ್ತರಿಸಬೇಕಿದೆ.

ಸ್ತ್ರೀ ಶಿಕ್ಷಣಕ್ಕೆ ತಾಲಿಬಾನ್​ ಬ್ಯಾನ್​!

2021 ರಲ್ಲಿ ಅಮೆರಿಕ ತನ್ನ ಸೇನಾ ಪಡೆಗಳನ್ನು ಹಿಂಪಡೆದ ದಿನವೇ ಅಫ್ಘಾನಿಸ್ತಾನ್​ ಮೇಲೆ ಹಿಡಿತ ಸ್ಥಾಪಿಸಿದ ತಾಲಿಬಾನಿಗಳು, ಕೂಡಲೇ ಹೆಣ್ಣುಮಕ್ಕಳಿಗೆ ಶಿಕ್ಷಣದಿಂದ ಗೇಟ್​ಪಾಸ್​ ನೀಡಿದರು. ವಿಶ್ವಸಂಸ್ಥೆ ವರದಿ ಪ್ರಕಾರ, 2022 ರ ವೇಳೆಗೆ ಸುಮಾರು 20 ಲಕ್ಷ ಹೆಣ್ಣು ಮಕ್ಕಳನ್ನು ಶಾಲಾ-ಕಾಲೇಜುಗಳಿಂದ ಹೊರಗಟ್ಟಲಾಗಿದೆ.

ಹೆಣ್ಣು ಮಕ್ಕಳಿಗೆ ಕೇವಲ 6 ನೇ ತರಗತಿ ವರೆಗೆ ಮಾತ್ರ ಶಿಕ್ಷಣ ಪಡೆಯಲು ಅವಕಾಶವಿದ್ದು, ಮಾಧ್ಯಮಿಕ, ಉನ್ನತ ಹಾಗೂ ತಾಂತ್ರಿಕ ಶಿಕ್ಷಣದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಇನ್ನು, 2024 ಡಿಸೆಂಬರ್​ ವೇಳಗೆ ಹೆಣ್ಣುಮಕ್ಕಳಿಗೆ ನರ್ಸಿಂಗ್​ ಶಿಕ್ಷಣದಿಂದಲೂ ದೂರವಿಡಲಾಗಿದ್ದು, ಅವರು ಕೇವಲ ಧಾರ್ಮಿಕ ಗ್ರಂಥಗಳನ್ನು ಓದಲು ಮಾತ್ರ ಸೀಮಿತವಾಗಿಸಲಾಗಿದೆ, (ಏಜೆನ್ಸೀಸ್​).