ಇಲ್ಲಿ ಸ್ವಲ್ಪ ಹೊತ್ತು ಎಸಿ ಆಫ್ ಆದ್ರೂ ಸೀದಾ ಯಮನ ಪಾದಕ್ಕೆ: ಇಲ್ಲಿದೆ ಭೂಮಿಯ ಮೇಲಿನ ನರಕ, ಜನರ ನಿಗೂಢ ಬದುಕು! Hottest House On Earth  
ವಿದೇಶ

ಇಲ್ಲಿ ಸ್ವಲ್ಪ ಹೊತ್ತು ಎಸಿ ಆಫ್ ಆದ್ರೂ ಸೀದಾ ಯಮನ ಪಾದಕ್ಕೆ: ಇಲ್ಲಿದೆ ಭೂಮಿಯ ಮೇಲಿನ ನರಕ, ಜನರ ನಿಗೂಢ ಬದುಕು! Hottest House On Earth

ಪ್ರಮುಖ ಮುಖ್ಯಾಂಶಗಳು

  • ಧಗಧಗಿಸುವ ಡೆತ್ ವ್ಯಾಲಿಯಲ್ಲಿ ಜನ ವಾಸಿಸುವುದೇಕೆ?
  • 56.7 ಡಿಗ್ರಿ ಬಿಸಿಲು, ಮುಖಕ್ಕೆ ಹೇರ್ ಡ್ರೈಯರ್ ಹಿಡಿದಂತಹ ಶಾಖ!
  • ಜಗತ್ತಿನ ಅತ್ಯಂತ ವಿಚಿತ್ರ ಜಾಗದ ಅಸಲಿ ಕಥೆ ಇಲ್ಲಿದೆ
  • 'ಡೆತ್ ವ್ಯಾಲಿ'ಯಲ್ಲಿ ಬದುಕುಳಿಯುವ ಸೂತ್ರಗಳಿವು
Hottest House On Earth : ಡೆತ್ ವ್ಯಾಲಿ ಎಂದಾಕ್ಷಣ ನೆನಪಾಗುವುದು ಧಗಧಗಿಸುವ ಬಿಸಿಲು ಮತ್ತು ಸುಡುವ ಮರುಭೂಮಿಯ ದೃಶ್ಯ. ಬಹುತೇಕರು ಕೆಲವೇ ಗಂಟೆಗಳಲ್ಲಿ ಈ ತಾಪಮಾನಕ್ಕೆ ಹೆದರಿ ತಂಪಾದ ಪ್ರದೇಶಗಳತ್ತ ಓಡಿಹೋಗುವ ಈ "ಭೂಮಿಯ ಅತ್ಯಂತ ಬಿಸಿಲಿನ ಜಾಗ"ದಲ್ಲಿ ನೂರಾರು ಜನರು ಖಾಯಂ ಆಗಿ ವಾಸಿಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು! ಇವರಿಗೆ ಈ ದಹಿಸುವ ಬೇಸಿಗೆ ಕೇವಲ ಪ್ರವಾಸಿ ಆಕರ್ಷಣೆಯಲ್ಲ, ಬದಲಿಗೆ ದಿನನಿತ್ಯದ ಕಠಿಣ ವಾಸ್ತವ. ಮರುಭೂಮಿಯ ಕಟ್ಟುನಿಟ್ಟಾದ ನಿಯಮಗಳಿಗೆ ತಲೆಬಾಗಿ, ತಮ್ಮ ಮನೆ ಮತ್ತು ಜೀವನಶೈಲಿಯನ್ನೇ ಪ್ರಕೃತಿಗೆ ತಕ್ಕಂತೆ ಬದಲಾಯಿಸಿಕೊಂಡು ಇಲ್ಲಿ ಬದುಕು ಸಾಗಿಸುವ ಈ ಜನರ ಅದ್ಭುತ ಹೊಂದಾಣಿಕೆಯ ಕಥೆಯೇ ಒಂದು ರೋಮಾಂಚನ.
ಡೆತ್ ವ್ಯಾಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ತಾಪಮಾನ ಹೊಂದಿರುವ ಪ್ರದೇಶವಾಗಲು ಅದರ ವಿಶಿಷ್ಟ ಭೂಪ್ರಕೃತಿಯೇ ಕಾರಣ. ಕ್ಯಾಲಿಫೋರ್ನಿಯಾ ಮತ್ತು ನೆವಾಡಾ ಗಡಿಯ ಬಳಿ ಇರುವ ಈ ಕಣಿವೆ ಸಮುದ್ರ ಮಟ್ಟಕ್ಕಿಂತ ಕೆಳಗಿದ್ದು, ಸುತ್ತಲೂ ಎತ್ತರದ ಪರ್ವತ ಶ್ರೇಣಿಗಳಿಂದ ಆವೃತವಾಗಿದೆ. ಈ ವಿನ್ಯಾಸವು ಒಂದು ದೈತ್ಯ ನೈಸರ್ಗಿಕ ಪಾತ್ರೆಯಂತೆ ಕೆಲಸ ಮಾಡುವುದರಿಂದ, ಇಲ್ಲಿನ ಬಿಸಿ ಗಾಳಿ ಹೊರಹೋಗಲು ಸಾಧ್ಯವಾಗದೆ ಒಳಗೇ ಸಿಲುಕಿಕೊಳ್ಳುತ್ತದೆ. ಜೊತೆಗೆ, ಇಲ್ಲಿ ಸಸ್ಯವರ್ಗ ತೀರಾ ಕಡಿಮೆ ಇರುವುದರಿಂದ ನೈಸರ್ಗಿಕ ತಂಪು ಸಿಗುವುದಿಲ್ಲ ಮತ್ತು ಒಣ ಬಂಡೆಗಳು ಹಾಗೂ ಮರಳು ಸೂರ್ಯನ ಬೆಳಕನ್ನು ತೀವ್ರವಾಗಿ ಪ್ರತಿಫಲಿಸುತ್ತವೆ. ಮಳೆಯೂ ಅಪರೂಪವಾಗಿರುವುದರಿಂದ ಈ ಪ್ರದೇಶ ಸದಾ ಧಗಧಗಿಸುತ್ತಿರುತ್ತದೆ.
ಅಂದಹಾಗೆ, ಡೆತ್ ವ್ಯಾಲಿಯ ತಾಪಮಾನ ಎಷ್ಟಿರುತ್ತದೆ ಎಂದರೆ, 1913 ರಲ್ಲಿ ಇಲ್ಲಿನ ಫರ್ನೇಸ್ ಕ್ರೀಕ್‌ನಲ್ಲಿ ದಾಖಲಾದ 56.7 ಡಿಗ್ರಿ ಸೆಲ್ಸಿಯಸ್ ತಾಪಮಾನವೇ ಇಂದಿಗೂ ಜಗತ್ತಿನ ಅತ್ಯಂತ ಗರಿಷ್ಠ ವಾಯು ತಾಪಮಾನ ಎಂಬ ದಾಖಲೆಯಾಗಿ ಉಳಿದಿದೆ. ಇಲ್ಲಿನ ಉಷ್ಣಾಂಶವನ್ನು ಹೊರಗಿನವರಿಗೆ ವಿವರಿಸುವುದು ಸುಲಭವಲ್ಲ. ಇದರ ಭೀಕರತೆಯನ್ನು ಅಲ್ಲಿನ ರಾಷ್ಟ್ರೀಯ ಉದ್ಯಾನವನದಲ್ಲಿ ಕೆಲಸ ಮಾಡುವ ಬ್ರಾಂಡಿ ಸ್ಟೆವರ್ಟ್ ಸರಳವಾಗಿ ಹೇಳುತ್ತಾರೆ. ಅವರ ಪ್ರಕಾರ, ಬೇಸಿಗೆಯಲ್ಲಿ ನೀವು ಇಲ್ಲಿ ಹೊರಗೆ ಹೆಜ್ಜೆ ಇಟ್ಟರೆ, ಒಂದೇ ಬಾರಿಗೆ ಹಲವು ಹೇರ್ ಡ್ರೈಯರ್‌ಗಳನ್ನು ಮುಖಕ್ಕೆ ಹಿಡಿದು ಆನ್ ಮಾಡಿದಂತಹ ಅನುಭವವಾಗುತ್ತದೆ.
ಇಲ್ಲಿನ ಗಾಳಿಯಲ್ಲಿ ತೇವಾಂಶವೇ ಇಲ್ಲದಿರುವುದರಿಂದ, ದೇಹವನ್ನು ತಂಪಾಗಿಸಲು ಸೂಸುವ ಬೆವರು ಚರ್ಮದ ಮೇಲೆ ತಿಳಿಯುವ ಮುನ್ನವೇ ಆವಿಯಾಗುತ್ತದೆ. ಇನ್ನು ಕೆಲವರು ಈ ಶಾಖವನ್ನು, ದೊಡ್ಡ ಓವನ್ ಬಾಗಿಲು ತೆರೆದಾಗ ಮುಖಕ್ಕೆ ಅಪ್ಪಳಿಸುವ ಬಿಸಿ ಗಾಳಿಗೆ ಹೋಲಿಸುತ್ತಾರೆ. ಇಲ್ಲಿ ಸೂರ್ಯ ಹುಟ್ಟುವ ಮುನ್ನವೇ ತಾಪಮಾನವು 38 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರುತ್ತದೆ! ಮಧ್ಯಾಹ್ನವಾಗುತ್ತಲೇ ಲೋಹದ ವಸ್ತುಗಳನ್ನು ಮುಟ್ಟಲು ಸಾಧ್ಯವಾಗದಷ್ಟು ಕಾಯುತ್ತವೆ ಮತ್ತು ವಾಹನಗಳ ಒಳಗಿನ ಭಾಗ ಅತ್ಯಂತ ಅಪಾಯಕಾರಿಯಾಗಿ ಬಿಸಿಯಾಗುತ್ತದೆ. ಇಂತಹ ಸಮಯದಲ್ಲಿ ಹೆಚ್ಚು ಹೊತ್ತು ಹೊರಗೆ ನಡೆದರೆ ಮನುಷ್ಯರು ತೀವ್ರ ಆಯಾಸಕ್ಕೆ ಒಳಗಾಗಿ ದಣಿದು ಹೋಗುತ್ತಾರೆ.
ಪ್ರಪಂಚದ ಬಹುತೇಕ ಭಾಗಗಳಲ್ಲಿ ಜನರು ತಮ್ಮ ಕೆಲಸ, ಶಾಲೆ ಮತ್ತು ಸಾಮಾಜಿಕ ಜೀವನವನ್ನು ಸಮಯಕ್ಕೆ ತಕ್ಕಂತೆ ಯೋಜಿಸಿದರೆ, ಡೆತ್ ವ್ಯಾಲಿಯಲ್ಲಿ ಮಾತ್ರ ಅಲ್ಲಿನ ತಾಪಮಾನವೇ ಎಲ್ಲವನ್ನೂ ನಿರ್ಧರಿಸುತ್ತದೆ. ಇಲ್ಲಿನ ನಿವಾಸಿಗಳು ತಮ್ಮ ಮುಖ್ಯ ಚಟುವಟಿಕೆಗಳನ್ನು ಮುಂಜಾನೆ ಅಥವಾ ಸೂರ್ಯಾಸ್ತದ ನಂತರದ ಸಮಯಕ್ಕೆ ಸೀಮಿತಗೊಳಿಸಿಕೊಳ್ಳುತ್ತಾರೆ. ಅತಿಯಾದ ಶಾಖವಿರುವ ಮಧ್ಯಾಹ್ನದ ಅವಧಿಯಲ್ಲಿ ಅನಗತ್ಯವಾಗಿ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ತಪ್ಪಿಸುತ್ತಾರೆ.
ಇಲ್ಲಿನ ಮನೆಗಳನ್ನು ಬಿಸಿಲು ಒಳಗೆ ಬರದಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಹಗಲಿನ ವೇಳೆಯಲ್ಲಿ ಕಿಟಕಿಗಳಿಗೆ ದಪ್ಪನೆಯ ಕಪ್ಪು ಪರದೆಗಳನ್ನು ಹಾಕಲಾಗುತ್ತದೆ ಮತ್ತು ಹವಾನಿಯಂತ್ರಣ ಯಂತ್ರಗಳು ನಿರಂತರವಾಗಿ ಚಾಲನೆಯಲ್ಲಿರುತ್ತವೆ. ನಿವಾಸಿಗಳು ಮನೆಯಿಂದ ಹೊರಡುವಾಗ ನೀರನ್ನು ಕೊಂಡೊಯ್ಯುವುದನ್ನು ಎಂದಿಗೂ ಮರೆಯುವುದಿಲ್ಲ. ಇಲ್ಲಿ ವಿದ್ಯುತ್ ಕೈಕೊಡುವುದನ್ನು ಜನ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಾರೆ, ಏಕೆಂದರೆ ಎಸಿ ನಿಂತುಹೋದರೆ ಕೆಲವೇ ನಿಮಿಷಗಳಲ್ಲಿ ಮನೆಗಳ ಒಳಗಿನ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಏರಿಬಿಡುತ್ತದೆ.
ಪರಿಸ್ಥಿತಿ ಎಷ್ಟೇ ಕಠಿಣವಾಗಿದ್ದರೂ, ಕೆಲವು ಕೆಲಸಗಳಿಗಾಗಿ ಜನರು ಅನಿವಾರ್ಯವಾಗಿ ಹೊರಗೆ ಬರಲೇಬೇಕಾಗುತ್ತದೆ. ಜಗತ್ತಿನ ಅತ್ಯಂತ ಕೆಳಮಟ್ಟದಲ್ಲಿರುವ 'ಫರ್ನೇಸ್ ಕ್ರೀಕ್ ಗಾಲ್ಫ್ ಕೋರ್ಸ್' ಇದಕ್ಕೆ ಸೂಕ್ತ ಉದಾಹರಣೆ. ಇಲ್ಲಿನ ತೀವ್ರ ಶಾಖದಿಂದಾಗಿ ಮರಗಳು ಒಣಗಿ ಉರಿಯುವುದು ಮತ್ತು ಕೊಂಬೆಗಳು ಹಠಾತ್ತನೆ ಮುರಿದು ಬೀಳುವುದು ಸಾಮಾನ್ಯವಾದ್ದರಿಂದ, ಸದಾ ನಿರ್ವಹಣೆಯ ಅಗತ್ಯವಿರುತ್ತದೆ. ಹೀಗಾಗಿ, ಕಾರ್ಮಿಕರು ಮಧ್ಯಾಹ್ನದ ಭೀಕರ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಸೂರ್ಯ ಹುಟ್ಟುವ ಮುನ್ನವೇ ಕೆಲಸ ಪ್ರಾರಂಭಿಸುತ್ತಾರೆ. ವಿಶೇಷವೆಂದರೆ, ಇಲ್ಲಿ ಕೆಲಸದ ದಕ್ಷತೆಯನ್ನು ಅವರು ಎಷ್ಟು ಕೆಲಸ ಮುಗಿಸಿದರು ಎಂಬುದರ ಆಧಾರದ ಮೇಲೆ ಅಳೆಯುವುದಿಲ್ಲ, ಬದಲಿಗೆ ಆ ಕಠಿಣ ತಾಪಮಾನವನ್ನು ಮನುಷ್ಯನ ದೇಹ ಎಷ್ಟು ಸುರಕ್ಷಿತವಾಗಿ ತಡೆದುಕೊಳ್ಳಬಲ್ಲದು ಎಂಬುದರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಇಷ್ಟೊಂದು ಕಠಿಣ ತಾಪಮಾನವಿದ್ದರೂ ಜನರು ಇಲ್ಲಿ ಏಕೆ ವಾಸಿಸುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಬೇಸಿಗೆ ಮುಗಿದ ನಂತರ ಡೆತ್ ವ್ಯಾಲಿ ಅತ್ಯಂತ ಸುಂದರ ಹಾಗೂ ಮಾಂತ್ರಿಕ ರೂಪವನ್ನು ಪಡೆದುಕೊಳ್ಳುತ್ತದೆ. ಇಲ್ಲಿನ ಚಳಿಗಾಲವು ಉತ್ತರ ಅಮೆರಿಕಾದ ಇತರ ಭಾಗಗಳಿಗಿಂತ ಅತ್ಯಂತ ಹಿತಕರವಾಗಿ ಇರುತ್ತದೆ. ಈ ಸಮಯದಲ್ಲಿ ತಾಪಮಾನವು ಕಡಿಮೆಯಾಗುತ್ತಿದ್ದಂತೆ ಮರುಭೂಮಿಯಲ್ಲಿ ಹೊರಾಂಗಣ ಚಟುವಟಿಕೆಗಳು ಮತ್ತೆ ಶುರುವಾಗುತ್ತವೆ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಲಗ್ಗೆ ಇಡುತ್ತಾರೆ. ಇದರೊಂದಿಗೆ, ಇಲ್ಲಿನ ನಿವಾಸಿಗಳು ಈ ವಿಶಿಷ್ಟ ಪರಿಸರದೊಂದಿಗೆ ಭಾವನಾತ್ಮಕ ಬಂಧವನ್ನು ಬೆಳೆಸಿಕೊಂಡಿದ್ದಾರೆ. ಇಲ್ಲಿನ ಸುಂದರ ಪರ್ವತ ಶ್ರೇಣಿಗಳು, ವಿಶಾಲವಾದ ಉಪ್ಪಿನ ಸರೋವರಗಳು ಮತ್ತು ನಕ್ಷತ್ರಗಳಿಂದ ತುಂಬಿದ ಅದ್ಭುತ ರಾತ್ರಿ ಆಕಾಶವು ಜಗತ್ತಿನ ಬೇರೆಲ್ಲೂ ಸಿಗದ ವಿಶಿಷ್ಟ ಅನುಭವವನ್ನು ನೀಡುತ್ತದೆ.
ಕಡಿಮೆ ಜನಸಂಖ್ಯೆ ಇರುವ ಈ ಜಾಗದ ಏಕಾಂತತೆಯು, ನಗರದ ಗದ್ದಲದಿಂದ ದೂರವಿರಲು ಬಯಸುವವರಿಗೆ ನೆಚ್ಚಿನ ತಾಣವಾಗಿದೆ. ಡೆತ್ ವ್ಯಾಲಿಯಲ್ಲಿ ಬದುಕುಳಿಯಲು ದೈಹಿಕ ಶಕ್ತಿಗಿಂತ ಎಚ್ಚರಿಕೆಯ ಯೋಜನೆ ಮುಖ್ಯ ಎಂಬುದನ್ನು ಇಲ್ಲಿನ ಜನ ಚೆನ್ನಾಗಿ ಅರಿತಿದ್ದಾರೆ. ಅವರು ಸಾಕಷ್ಟು ನೀರನ್ನು ಜೊತೆಯಲ್ಲಿಟ್ಟುಕೊಳ್ಳುತ್ತಾರೆ, ಹವಾಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಅನಗತ್ಯ ಸಾಹಸಗಳಿಗೆ ಕೈಹಾಕುವುದಿಲ್ಲ. ಪ್ರವಾಸಿಗರಿಗೆ ಡೆತ್ ವ್ಯಾಲಿ ಕೇವಲ ದಾಖಲೆಗಳನ್ನು ನೋಡುವ ಮತ್ತು ಸುಂದರ ಫೋಟೋಗಳನ್ನು ಕ್ಲಿಕ್ಕಿಸುವ ಜಾಗವಾಗಿರಬಹುದು. ಆದರೆ, ಇಲ್ಲಿ ವಾಸಿಸುವ ಜನರಿಗೆ ಇದು ಅವರ ಪ್ರೀತಿಯ ಮನೆ – 'ಭೂಮಿಯ ಮೇಲಿನ ಅತ್ಯಂತ ಬಿಸಿಯಾದ ಮನೆ'!