ಡೊನಾಲ್ಡ್ ಟ್ರಂಪ್(ಎಡ), ಅಯತೊಲ್ಲಾ ಖಮೇನಿ(ಬಲ)
- ಇರಾನ್‌ಗೆ ಅಮೆರಿಕ ಅಧ್ಯಕ್ಷ ಮತ್ತೊಮ್ಮೆ ಎಚ್ಚರಿಕೆ
- ಇರಾನ್ ಸರ್ವನಾಶಕ್ಕೆ ಇದೇ ಒಳ್ಳೆಯ ಸಮಯ
- ದೊಡ್ಡ ದಾಳಿಗಳನ್ನು ನಡೆಸುವುದಾಗಿ ಟ್ರಂಪ್ ಗುಡುಗು
ನವದೆಹಲಿ: ಪ್ರಸ್ತುತ, ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಯಾವುದೂ ಸರಿಯಿಲ್ಲ ಎನ್ನುವುದಕ್ಕೆ ನಡೆಯುತ್ತಿರುವ ಭೀಕರ ಸಂಘರ್ಷಗಳೇ ಜ್ವಲಂತ ಸಾಕ್ಷಿ. ಯುಎಸ್-ಇಸ್ರೇಲಿ ನಡೆಸಿದ ಜಂಟಿ ಕ್ಷಿಪಣಿ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ ಮತ್ತು ದೇಶದ ಪ್ರಮುಖ ಮಿಲಿಟರಿ ನೆಲೆಗಳ ಧ್ವಂಸ ಸದ್ಯ ಇರಾನ್‌ನ ಪಿತ್ತವನ್ನು ನೆತ್ತಿಗೇರಿಸಿದೆ. ಇದಕ್ಕೆ ಸೇಡು ತೀರಿಸಿಕೊಳ್ಳಲು ದುಬೈ ಸೇರಿ ಕೆಲವು ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿರುವ ಇರಾನ್, ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಿದೆ.
ಸೋಮವಾರ (ಮಾ.03) ಶ್ವೇತಭವನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಶೀಘ್ರವೇ ಇರಾನನ್ನು ಸರ್ವನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಇರಾನ್ ಮೇಲಿನ ದಾಳಿಗೆ ಇದೇ ಕೊನೆಯ ಹಾಗೂ ಉತ್ತಮ ಅವಕಾಶ ನಮಗೆ. ಇಲ್ಲಿ ನಮ್ಮ ಉದ್ದೇಶಗಳು ಸ್ಪಷ್ಟವಾಗಿವೆ. ಮೊದಲನೆಯದಾಗಿ, ನಾವು ಇರಾನ್‌ನ ಕ್ಷಿಪಣಿ ಸಾಮರ್ಥ್ಯಗಳನ್ನು ಛಿದ್ರಗೊಳಿಸುತ್ತಿದ್ದೇವೆ. ಎರಡನೆಯದಾಗಿ, ನಾವು ಅವರ ನೌಕಾಪಡೆಯನ್ನು ನಾಶಪಡಿಸುತ್ತಿದ್ದೇವೆ. ಮೂರನೆಯದಾಗಿ, ವಿಶ್ವದ ನಂಬರ್ ಒನ್ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶವು ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ನಾವು ಖಚಿತಪಡಿಸಲಿದ್ದೇವೆ ಎಂದರು.
"ಇರಾನ್ ಈಗಾಗಲೇ ಅಮೆರಿಕಕ್ಕೆ ಗುರಿ ಇಡಬಹುದಾದ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದೆ. ಅವರು ಯುಎಸ್ ಅನ್ನು ಹೊಡೆಯಬಹುದಾದ ಮಿಸೈಲ್ಗಳನ್ನು ಹೊಂದಿದ್ದಾರೆ. ಆದರೆ, ನಾವು ಅದ್ಯಾವುದು ನೆರವೇರಲು ಬಿಡುವುದಿಲ್ಲ. ಈ ಇರಾನ್ ಸರ್ಕಾರ ಕಳೆದ 47 ವರ್ಷಗಳಿಂದ ಅಮೆರಿಕನ್ನರ ಮೇಲೆ ದಾಳಿ ಮಾಡುತ್ತಲೇ ಬಂದಿದೆ. ಈ ದುಷ್ಟ ಸರ್ಕಾರದ ಮೇಲೆ ಕೊನೆಗೊಳಿಸಲು ಇದು ನಮ್ಮ ಲಾಸ್ಟ್ ಚಾನ್ಸ್" ಎಂದಿದ್ದಾರೆ,(ಏಜೆನ್ಸೀಸ್).