ವಾರೆನ್ ಬಫೆಟ್ 
ವಿದೇಶ

ಬಫೆಟ್​ ಸಾಮ್ರಾಜ್ಯ; 'ಹೂಡಿಕೆ ಮಾಂತ್ರಿಕ'ನ ಸಾಧನೆ, ಸಾಹಸಗಳ ಕುರಿತಾದ ಮಾಹಿತಿ ಇಲ್ಲಿದೆ

ಮೋಹನ್​ ಶೆಟ್ಟಿ

ನವದೆಹಲಿ: ತೊಂಬತ್ತೇಳು ಲಕ್ಷ ಕೋಟಿ ರೂಪಾಯಿ ಮೌಲ್ಯದ ಉದ್ಯಮ ಸಾಮ್ರಾಜ್ಯ ಕಟ್ಟಿದ 95 ವರ್ಷದ ವಾರೆನ್ ಬಫೆಟ್ ಡಿಸೆಂಬರ್ 31ರಂದು ನಿವೃತ್ತರಾಗಿದ್ದಾರೆ. 41 ಬೃಹತ್ ಕಂಪನಿಗಳಲ್ಲಿ 25 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಬಫೆಟ್ ಬೆಳೆದು ಬಂದ ದಾರಿ ಮತ್ತು ಉದ್ಯಮದಲ್ಲಿ ಕೈಗೊಂಡ ಸಾಹಸಗಳು ರೋಚಕ. 37ನೇ ವರ್ಷಕ್ಕೇ ಕೋಟ್ಯಧಿಪತಿಯಾದ ಅವರು ಪ್ರಸ್ತುತ ಪ್ರಪಂಚದ 10ನೇ ಸಿರಿವಂತ ವ್ಯಕ್ತಿ. ಬಫೆಟ್ ಬದುಕು, ಸಾಧನೆ, ಸಾಹಸಗಳ ಕುರಿತಾದ ಮಾಹಿತಿ ಇಲ್ಲಿದೆ.

‘ಹೂಡಿಕೆಯ ಮಾಂತ್ರಿಕ’ ಎಂದೇ ಕರೆಯಲ್ಪಡುವ ಖ್ಯಾತ ಉದ್ಯಮಿ ವಾರೆನ್ ಬಫೆಟ್ 95ನೇ ವಯಸ್ಸಿನಲ್ಲಿ ನಿವೃತ್ತಿಯಾಗಿದ್ದಾರೆ. ಬರ್ಕ್ ಶೈರ್ ಹಾಥ್​ವೇ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಯಿಂದ ಡಿ.31ರಂದು ನಿವೃತ್ತಿ ಘೋಷಿಸಿದ್ದಾರೆ. ‘ನಿವೃತ್ತಿಯ ಬಳಿಕ ಮನೆಯಲ್ಲಿ ಕುಳಿತು ಟಿ.ವಿ ಶೋಗಳನ್ನು ನೋಡುವುದಿಲ್ಲ. ಈಗಲೂ ಕಂಪನಿಗೆ ಸಲಹೆ ನೀಡಲು ಮತ್ತು ಉತ್ತರಾಧಿಕಾರಿಗೆ ನನ್ನಿಂದ ಸಾಧ್ಯವಾದಷ್ಟು ನೆರವಾಗಲು ಕೆಲಸ ಮಾಡಲಿದ್ದೇನೆ’ ಎಂದು ಹೇಳಿರುವ ಬಫೆಟ್ ಉತ್ಸಾಹ ನಿಜಕ್ಕೂ ಅಸಾಧಾರಣ. 

60 ವರ್ಷಗಳ ಮುಂಚೆ ಅವರು ಬರ್ಕ್​ಶೈರ್ ಹಾಥ್​ವೇ ಕಂಪನಿಯ ನೇತೃತ್ವ ವಹಿಸಿಕೊಂಡಾಗ ಕಂಪನಿಯ ಒಂದು ಷೇರಿನ ಬೆಲೆ 18 ಡಾಲರ್ ಇತ್ತು. ಪ್ರಸಕ್ತ ಒಂದು ಷೇರಿನ ಬೆಲೆ 8 ಲಕ್ಷ ಡಾಲರ್​ಗೂ ಅಧಿಕ! ಅಂದರೆ, 60 ವರ್ಷಗಳಲ್ಲಿ 45,000 ಪಟ್ಟು ಹೆಚ್ಚಳ! ಈ ಅವಧಿಯಲ್ಲಿ ಅಮೆರಿಕ 11 ಅಧ್ಯಕ್ಷರುಗಳನ್ನು ಕಂಡಿದೆ. ಜಗತ್ತಿನ ಹಲವು ಪ್ರಮುಖ ಕಂಪನಿಗಳು ನಷ್ಟ ಅನುಭವಿಸಿದವು-ಹೊಸ ಕಂಪನಿಗಳು ಉದಯವಾದವು. ಆದರೆ, ಬಫೆಟ್ ಸಾಧನೆಯ ಗ್ರಾಫ್ ಏರುತ್ತಲೇ ಹೋಯಿತು. ಪ್ರಸ್ತುತ ಬರ್ಕ್​ಶೈರ್ ಹಾಥ್​ವೇ ಜಗತ್ತಿನ ಅತಿ ದೊಡ್ಡ ಹೂಡಿಕೆ ಕಂಪನಿಯಾಗಿ ಹೊರಹೊಮ್ಮಿದೆ. ಬರ್ಕ್​ಶೈರ್ ಹಾಥ್​ವೇ ಕಂಪನಿಯು ಪ್ರಮುಖವಾಗಿ ಎರಡು ಬಗೆಯ ಷೇರುಗಳನ್ನು ಹೊಂದಿದೆ.

  • ಬಿಆರ್​ಕೆ-ಎ ಎಂದು ಕರೆಯಲ್ಪಡುವ ಕ್ಲಾಸ್ ಎ ಷೇರಿನ ಬೆಲೆ ಸರಾಸರಿ 8 ಲಕ್ಷ ಡಾಲರ್.
  •  ಬಿಆರ್​ಕೆ-ಬಿ ಎಂದು ಕರೆಯಲ್ಪಡುವ ಕ್ಲಾಸ್ ಬಿ ಪ್ರತಿ ಷೇರಿನ ಬೆಲೆ 505 ಡಾಲರ್.

99% ಸಂಪತ್ತು ದಾನ: ತಮ್ಮ ಸಂಪತ್ತಿನ ಶೇಕಡ 99ರಷ್ಟನ್ನು ದಾನ ಮಾಡುವುದಾಗಿ ವಾರೆನ್ ಬಫೆಟ್ ಈ ಹಿಂದೆಯೇ ಘೋಷಿಸಿದ್ದಾರೆ. ಬಫೆಟ್ ಮಕ್ಕಳು ನಿರ್ವಹಿಸುತ್ತಿರುವ ಫೌಂಡೇಷನ್​ಗೆ ಅವರು ಇತ್ತೀಚೆಗೆ 1.3 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ದಾನ ಮಾಡಿದ್ದಾರೆ. ‘ಮಕ್ಕಳಿಗೆ ಏನಾದರೂ ಮಾಡುವಷ್ಟು ಹಣ ನೀಡಿ, ಆದರೆ ಮಕ್ಕಳು ಏನನ್ನೂ ಮಾಡದಂತಾಗಲು ಹಣ ನೀಡಬೇಡಿ’ ಎಂಬುದು ಬಫೆಟ್ ಸೂತ್ರ. ಮಾತ್ರವಲ್ಲ, ಎರಡು ದಶಕಗಳ ಹಿಂದೆಯೇ ಸಾಮಾಜಿಕ ಕಾರ್ಯಗಳಿಗಾಗಿ ದೇಣಿಗೆ ನೀಡುವುದನ್ನು ಆರಂಭಿಸಿದ್ದಾರೆ. 

2025ರ ಜೂನ್ 28ರಂದು ಅವರು ಬರ್ಕ್​ಶೈರ್ ಹಾಥ್​ವೇ ಕಂಪನಿಯ ಸುಮಾರು 51 ಸಾವಿರ ಕೋಟಿ ರೂ. (6 ಬಿಲಿಯನ್ ಡಾಲರ್) ಮೌಲ್ಯದ ಷೇರುಗಳನ್ನು ಗೇಟ್ಸ್ ಫೌಂಡೇಷನ್ ಹಾಗೂ ಇತರ ದತ್ತಿ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ. ಬಫೆಟ್ ಈವರೆಗೆ 1.23 ಕೋಟಿ ಷೇರುಗಳನ್ನು ದಾನ ಮಾಡಿದ್ದಾರೆ. ಈ ಪೈಕಿ ಅತಿ ಹೆಚ್ಚು ಅಂದರೆ 94.3 ಲಕ್ಷ ಷೇರುಗಳನ್ನು ಗೇಟ್ಸ್ ಫೌಂಡೇಷನ್​ಗೆ ನೀಡಿದ್ದಾರೆ. ಪತ್ನಿಯ ಹೆಸರಲ್ಲಿರುವ ಸುಸಾನ್ ಥಾಮ್ಸನ್ ಬಫೆಟ್ ಫೌಂಡೇಷನ್​ಗೆ 9.43 ಲಕ್ಷ ಷೇರು ಕೊಟ್ಟಿದ್ದಾರೆ. ಅಂತೆಯೇ, ಮಕ್ಕಳಾದ ಹೊವಾರ್ಡ್​ಗೆ (ದಿ ಹೊವಾರ್ಡ್ ಜಿ. ಬಫೆಟ್ ಫೌಂಡೇಷನ್) 6.60 ಲಕ್ಷ ಷೇರುಗಳು, ಸುಸೀ (ಶೇವೂರ್ಡ್ ಫೌಂಡೇಷನ್) ಮತ್ತು ಪೀಟರ್ ಮುನ್ನಡೆಸುತ್ತಿರುವ ಫೌಂಡೇಷನ್​ಗಳಿಗೆ (ನೊವೊ ಫೌಂಡೇಷನ್) ತಲಾ 6.60 ಲಕ್ಷ ಷೇರುಗಳನ್ನು ದಾನ ಮಾಡಿದ್ದಾರೆ. 

ಇಷ್ಟೆಲ್ಲ ದಾನದ ಹೊರತಾಗಿಯೂ ಬಫೆಟ್ ಬರ್ಕ್​ಶೈರ್ ಹಾಥ್​ವೇ ಕಂಪನಿಯಲ್ಲಿ ಶೇಕಡ 13.8ರಷ್ಟು ಪಾಲು ಹೊಂದಿದ್ದಾರೆ. ಸಂಪತ್ತು ದಾನ ಮಾಡುವುದನ್ನು 2006ರಲ್ಲಿ ಆರಂಭಿಸಿದ ಬಫೆಟ್, ಬರ್ಕ್​ಶೈರ್ ಹಾಥ್​ವೇ ಕಂಪನಿಯ ಷೇರುಗಳನ್ನು ಮಾರಾಟ ಮಾಡುವ ಉದ್ದೇಶ ತಮಗಿಲ್ಲ ಎಂದು ಹಿಂದೊಮ್ಮೆ ಹೇಳಿದ್ದರು.

ಬಫೆಟ್ ಗೋಲ್ಡನ್ ರೂಲ್ಸ್

1. ಸಮಯದ ಶಕ್ತಿ: ಇಂದು ಯಾರೋ ಮರದ ನೆರಳಿನಲ್ಲಿ ಹಾಯಾಗಿ ಕುಳಿತು, ದಣಿವು ನಿವಾರಿಸಿಕೊಳ್ಳುತ್ತಿದ್ದಾರೆ. ತುಂಬ ಹಿಂದೆ ಯಾರೋ ಇಲ್ಲಿ ಗಿಡವಾಗಿ ನೆಟ್ಟಿದ್ದರ ಫಲ ಇದು. ಇದುವೇ ಸಮಯದ ಶಕ್ತಿ.

2. ವಿಶ್ವಾಸಾರ್ಹತೆ: ಸಮಾಜದಲ್ಲಿ ಗೌರವ, ಪ್ರತಿಷ್ಠೆ ಅದಕ್ಕಿಂತ ಮುಖ್ಯವಾಗಿ ವಿಶ್ವಾಸಾರ್ಹತೆ ಗಳಿಸಲು ಜೀವನದ ಕನಿಷ್ಠ 20 ವರ್ಷಗಳನ್ನು ವ್ಯಯಿಸಬೇಕಾಗುತ್ತದೆ. ಆದರೆ, ಇದನ್ನೆಲ್ಲ ಕಳೆದುಕೊಳ್ಳಲು ಕೇವಲ ಐದು ನಿಮಿಷ ಸಾಕು. ಇದರ ಸ್ಪಷ್ಟ ಅರಿವು ಇದ್ದಾಗ ಮಾತ್ರ ನಾವು ಕೆಲಸವನ್ನು ವಿಭಿನ್ನವಾಗಿ ನೋಡಲು ಮತ್ತು ಮಾಡಲು ಸಾಧ್ಯ.

3. ಉದ್ಯಮ: ನಿಮಗೆ ಸರಿಯಾಗಿ ಗೊತ್ತಿರದ ಉದ್ಯಮದಲ್ಲಿ ಹಣ ಹೂಡಬೇಡಿ. ಇದು ನಷ್ಟಕ್ಕೆ ಕಾರಣವಾಗಬಹುದು.

4. ಬೆಲೆ ಮತ್ತು ವ್ಯಾಲ್ಯೂ: ಯಾವುದೇ ಕೆಲಸಕ್ಕೆ ನೀವೇನು ಭರಿಸುತ್ತಿರೋ ಅದು ಬೆಲೆ. ಮತ್ತು ನಿಮಗೆ ಏನು ಸಿಗುತ್ತದೆಯೋ ಅದು ವ್ಯಾಲ್ಯೂ.

5. ಸಂಪೂರ್ಣವಾಗಿ ತಿಳಿದುಕೊಳ್ಳಿ: ಯಾವುದೇ ಷೇರು ಖರೀದಿ ಮಾಡುವ ಮುಂಚೆ, ನೀವು ಆ ಕಂಪನಿಯನ್ನೇ ಕೊಂಡು ಕೊಳ್ಳುತ್ತಿದ್ದೀರಿ ಎಂದುಕೊಂಡು ಆ ಕಂಪನಿಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಿ. ಆ ಬಳಿಕವಷ್ಟೇ ಹೂಡಿಕೆ ಮಾಡಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಅಂತಿಮ ತೀರ್ವನಕ್ಕೆ ಬನ್ನಿ.

ದಿಟ್ಟ ನಿರ್ಧಾರ

ಗೇಟ್ಸ್ ಫೌಂಡೇಷನ್​ಗೆ ದೇಣಿಗೆ ನೀಡುವುದನ್ನು ನಿಲ್ಲಿಸುವುದು ತಾನು ನಿಧನವಾದಾಗಲಷ್ಟೇ ಎಂದು ಸ್ಪಷ್ಟಪಡಿಸಿರುವ ಬಫೆಟ್, ತಾವು ಮೃತಪಟ್ಟ ಬಳಿಕ ಸಂಪತ್ತಿನ ಶೇಕಡ 99.5ರಷ್ಟು ಮಕ್ಕಳ ದತ್ತಿ ಸಂಸ್ಥೆಗಳಿಗೆ ಹೋಗಬೇಕು ಎಂದು ಉಲ್ಲೇಖಿಸಿದ್ದಾರೆ. ಆ ಹಣವನ್ನು ಯಾವುದಕ್ಕೆ ಬಳಸಬೇಕು ಎಂದು ನಿರ್ಧರಿಸಲು ಮಕ್ಕಳಿಗೆ ಒಂದು ದಶಕದಷ್ಟು ಸಮಯವಿರುತ್ತದೆ ಎಂದೂ ಸ್ಪಷ್ಟಪಡಿಸಿದ್ದಾರೆ. ಬಫೆಟ್ ಮಕ್ಕಳಾದ ಸುಸೀ ಬಫೆಟ್ ಅವರಿಗೆ 71 ವರ್ಷ, ಹೊವಾರ್ಡ್ ಬಫೆಟ್​ಗೆ 70 ವರ್ಷ ಮತ್ತು ಪೀಟರ್​ಗೆ 67 ವರ್ಷ ವಯಸ್ಸಾಗಿದೆ.

ಬಫೆಟ್ ಬದುಕಿನ ಸ್ವಾರಸ್ಯಕರ ಸಂಗತಿಗಳು

  • 1930ರ ಆಗಸ್ಟ್ 30ರಂದು ಜನಿಸಿದ ವಾರೆನ್ ಬಫೆಟ್, 6ನೇ ವಯಸ್ಸಿನಲ್ಲೇ ಅಜ್ಜನ ಅಂಗಡಿಯಿಂದ ಚೂಯಿಂಗ್​ಗಮ್ ಖರೀದಿಸಿ ಮಾರಾಟ ಮಾಡತೊಡಗಿದರು. 8-9ನೇ ವಯಸ್ಸಿಗೆ ಬರುವಷ್ಟರಲ್ಲಿ ಸಾಫ್ಟ್ ಡ್ರಿಂಕ್ ಕೋಕಾಕೋಲಾ ಮಾರಾಟ ಮಾಡತೊಡಗಿದರು. ಆ ಬಳಿಕ ಅವರು ದಿನಪತ್ರಿಕೆ, ಗಾಲ್ಪ್ ಬಾಲ್, ಪಾಪ್​ಕಾರ್ನ್ ಕೂಡ ಮಾರಿದರು. 11ನೇ ವಯಸ್ಸಿಗೆ ನ್ಯೂಯಾರ್ಕ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಸಂಚರಿಸತೊಡಗಿದರು.
  • ತಂಗಿಯ ರೂಮ್​ಮೇಟ್​ ಸುಸೈನ್ ಥಾಮ್ಸನ್​ಳೊಂದಿಗೆ ಪ್ರೇಮಾಂಕುರವಾಗಿ, 1952ರ ಏಪ್ರಿಲ್ 19ರಂದು ವಿವಾಹವಾದರು.
  • 1956ರಲ್ಲಿ ‘ಬಫೆಟ್ ಅಸೋಸಿಯೇಟ್ಸ್ ಲಿಮಿಟೆಡ್’ ಎಂಬ ಹೂಡಿಕೆ ಕಂಪನಿಯನ್ನು ಆರಂಭಿಸಿದರು.
  • 1964ರಲ್ಲಿ ಬರ್ಕ್​ಶೈರ್ ಹಾಥ್​ವೇ ಕಂಪನಿಯ ಷೇರು ಖರೀದಿಸಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಷೇರು ಖರೀದಿಸಿ, ಕಂಪನಿಯ ಮಾಲೀಕರಾದರು. ಮತ್ತು ಬರ್ಕ್​ಶೈರ್ ಹಾಥ್​ವೇ ಕಂಪನಿಯನ್ನು ಟೆಕ್ಸ್​ಟೈಲ್, ಹೋಲ್ಡಿಂಗ್ ಕಂಪನಿಯಾಗಿಸಿದರು. ಇದರ ಬಳಿಕ, ವಿಮೆ, ಇಂಧನ, ರೈಲು, ಡೇರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ, ಉದ್ಯಮ ಆರಂಭಿಸಿದರು. ಪ್ರಸ್ತುತ ಕಂಪನಿಯ 189 ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ.
  • ಬರ್ಕ್​ಶೈರ್ ಹಾಥ್​ವೇ ಕಂಪನಿ 2024ರ ಆಗಸ್ಟ್​ನಲ್ಲಿ ಒಂದು ಟ್ರಿಲಿಯನ್ ಡಾಲರ್ ಅಂದರೆ 90 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತು. ಅಲ್ಲದೆ, ಈ ಮಾರುಕಟ್ಟೆ ಮೌಲ್ಯ ತಲುಪಿದ ಅಮೆರಿಕದ ಮೊದಲ ನಾನ್-ಟೆಕ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
  • 11ನೇ ವರ್ಷದಿಂದಲೇ ಹೂಡಿಕೆ ಆರಂಭಿಸಿರುವ ಬಫೆಟ್ ತಮ್ಮ ಸಂಪತ್ತಿನ 99% ಭಾಗವನ್ನು ಅವರ 50ನೇ ವಯಸ್ಸಿನ ನಂತರ ಗಳಿಸಿದ್ದಾರೆ. ಅದರಲ್ಲೂ, 60-70 ವರ್ಷಗಳ ನಂತರ ಬಫೆಟ್ ಸಂಪತ್ತು ಭಾರಿ ವೃದ್ಧಿ ಕಂಡಿದೆ. ಆದರೆ, ಅವರು ಕೋಟ್ಯಧಿಪತಿಯಾಗಿದ್ದು 37ನೇ ವಯಸ್ಸಿನಲ್ಲಿ.
  • 13.2 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ವಿಶ್ವದ ಟಾಪ್ 10 ಸಿರಿವಂತರಲ್ಲಿ ಒಬ್ಬರಾಗಿದ್ದಾರೆ.
  • 1977ರಲ್ಲಿ ಮೊದಲ ಪತ್ನಿ ಸುಸಾನ್​ರನ್ನು ತೊರೆದ ಬಫೆಟ್, ಆಕೆಯ ಸ್ನೇಹಿತೆ ಎಸ್ಟ್ರೀಡ್ ಅವರೊಂದಿಗೆ 2006ರಲ್ಲಿ ಎರಡನೇ ಮದುವೆಯಾದರು. ಸುಸಾನ್ ಕ್ಯಾನ್ಸರ್ ಕಾಯಿಲೆಯಿಂದ 2004 ಜುಲೈ 29ರಂದು ಮರಣ ಹೊಂದಿದರು.

ಗ್ರೆಗ್ ಆಬೆಲ್ ನೂತನ ಸಿಇಒ

ಬರ್ಕ್​ಶೈರ್ ಹಾಥ್​ವೇ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ 63 ವರ್ಷದ ಗ್ರೆಗ್ ಆಬೆಲ್ ಜನವರಿ 1ರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕೆನಡಾ ಮೂಲದವರಾದ ಆಬೆಲ್, ಬರ್ಕ್ ಶೈರ್ ಹ್ಯಾಥ್​ವೇ ಎನರ್ಜಿಯ ಅಧ್ಯಕ್ಷ ಮತ್ತು ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದರು. 2021ರಿಂದಲೂ ಅವರನ್ನು ಬಫೆಟ್ ಉತ್ತರಾಧಿಕಾರಿಯಾಗಿ ಗುರುತಿಸಲಾಗಿತ್ತು ಮತ್ತು 2025ರ ಮೇ ತಿಂಗಳಲ್ಲಿ ಅಧಿಕೃತವಾಗಿ ಘೊಷಣೆ ಮಾಡಲಾಯಿತು. ಕಂಪನಿಯ ಬಳಿ 34 ಲಕ್ಷ ಕೋಟಿ ರೂಪಾಯಿ ನಗದು ಹಣವಿದ್ದು, ಆಬೆಲ್ ಅದನ್ನು ಹೇಗೆ ವಿನಿಯೋಗಿಸುತ್ತಾರೆ ಮತ್ತು ಹೇಗೆ ನಿರ್ವಹಿಸುತ್ತಾರೆ ಎಂಬ ಬಗ್ಗೆ ಉದ್ಯಮ ವಲಯದಲ್ಲಿ ಭಾರಿ ಕುತೂಹಲ ಮೂಡಿದೆ.