ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ಕೈವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ನಿವಾಸವನ್ನೇ ಗುರಿಯಾಗಿಸಿಕೊಂಡು ಯುಕ್ರೇನ್ ಬೃಹತ್ ಡ್ರೋನ್ ದಾಳಿ ಮಾಡಿದೆ ಎಂಬ ರಷ್ಯಾ ಗಂಭೀರ ಆರೋಪವನ್ನು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ತಳ್ಳಿಹಾಕಿದ್ದಾರೆ. ಅಲ್ಲದೆ, ಇದು ರಷ್ಯಾದ ಕಟ್ಟುಕಥೆ ಎಂದು ತಿರುಗೇಟು ನೀಡಿದ್ದಾರೆ.
ಇದು ರಷ್ಯಾದ ನಾಟಕ- ಝೆಲೆನ್ಸ್ಕಿ ತಿರುಗೇಟು
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾದ ಆರೋಪಗಳನ್ನು ತೀವ್ರವಾಗಿ ಖಂಡಿಸಿದ್ದು, ಇದೊಂದು ಯೋಜಿತ ಪಿತೂರಿ ಎಂದು ಕಿಡಿಕಾರಿದ್ದಾರೆ.
ಇದು ರಷ್ಯಾದ ಕಡೆಯಿಂದ ಬರುತ್ತಿರುವ ಮತ್ತೊಂದು ಹಸಿ ಸುಳ್ಳಾಗಿದೆ. ನಮ್ಮ ಮತ್ತು ಅಮೆರಿಕದ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಹಾಗೂ ಶಾಂತಿ ಮಾತುಕತೆಗಳನ್ನು ಹಳಿತಪ್ಪಿಸಲು ರಷ್ಯಾ ಇಂತಹ ಕಥೆಗಳನ್ನು ಸೃಷ್ಟಿಸುತ್ತಿದೆ. ಯುಕ್ರೇನ್ ಯಾವುದೇ ರಾಜತಾಂತ್ರಿಕ ಪ್ರಯತ್ನಗಳಿಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ ಎಂದು ಝೆಲೆನ್ಸ್ಕಿ ಸ್ಟಷ್ಟಪಡಿಸಿದ್ದಾರೆ.
ಅಲ್ಲದೆ, ಕೈವ್ ಮತ್ತು ಇತರ ಸರ್ಕಾರಿ ಕಟ್ಟಡಗಳ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಲು ರಷ್ಯಾ ಈ ರೀತಿಯ ನೆಪಗಳನ್ನು ಹುಡುಕುತ್ತಿದೆ ಎಂದು ಝೆಲೆನ್ಸ್ಕಿ ಆತಂಕ ವ್ಯಕ್ತಪಡಿಸಿದ್ದಾರೆ.
ರಷ್ಯಾದ ಆರೋಪವೇನು..?
ಯುಕ್ರೇನ್ ದಾಳೀಯ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಡಿಸೆಂಬರ್ 28 ಮತ್ತು 29ರ ಮಧ್ಯರಾತ್ರಿ ಯುಕ್ರೇನ್ ಪಡೆಗಳು ಅಧ್ಯಕ್ಷರ ನಿವಾಸದ ಮೇಲೆ ದಾಳಿ ನಡೆಸಿವೆ ಎಂದು ಹೇಳಿದ್ದಾರೆ.
ಈ ದಾಳಿಯನ್ನು ಭಯೋತ್ಪಾದನೆ ಎಂದು ಕರೆದಿರುವ ಲಾವ್ರೊವ್, ರಷ್ಯಾ ಈಗಾಗಲೇ ಪ್ರತೀಕಾರದ ದಾಳಿಗೆ ಗುರಿಗಳನ್ನು ನಿಗದಿಪಡಿಸಿದೆ ಎಂದು ಎಚ್ಚರಿಸಿದ್ದಾರೆ.
ರಷ್ಯಾದ ನವ್ಗೊರೊಡ್ ಪ್ರದೇಶದಲ್ಲಿರುವ ಪುಟಿನ್ರ 'ವಾಲ್ದಾಯ್ ನಿವಾಸದ ಮೇಲೆ ಯುಕ್ರೇನ್ 91 ದೀರ್ಘಶ್ರೇಣಿಯ ಡ್ರೋನ್ (UAV)ಗಳನ್ನು ಬಳಸಿ ದಾಳಿ ಮಾಡಿದೆ. ಅಲ್ಲದೆ, ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯು ಎಲ್ಲಾ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಕ್ರೆಮ್ಲಿನ್ ಮಾಹಿತಿ ನೀಡಿದೆ.
ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ
ಪುಟಿನ್ ನಿವಾಸದ ಮೇಲೆನ ದಾಳಿಯ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಈ ಘಟನೆಯಿಂದ ತಾವು ಆಕ್ರೋಶಗೊಂಡಿರುವುದಾಗಿ ತಿಳಿಸಿದ್ದಾರೆ.
ಪುಟಿನ್ರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ನಂತರ ಟ್ರಂಪ್, ಇದು ಅತ್ಯಂತ ಸೂಕ್ಷ್ಮ ಸಮಯವಾಗಿದೆ. ಅಲ್ಲದೆ, ಅಧ್ಯಕ್ಷರ ನಿವಾಸದ ಮೇಲೆ ದಾಳಿ ಮಾಡುವುದು ಸರಿಯಲ್ಲ. ಈ ಬಗ್ಗೆ ನಾನು ಪುಟಿನ್ ಅವರಿಂದ ತಿಳಿದುಕೊಂಡೆ ಮತ್ತು ನನಗೆ ತುಂಬಾ ಕೋಪ ಬಂದಿದೆ ಎಂದು ಹೇಳಿದ್ದಾರೆ.
ಶಾಂತಿ ಮಾತುಕತೆಯ ಮೇಲೆ ಪರಿಣಾಮ
ಈ ಘಟನೆಯು ರಷ್ಯಾ-ಯುಕ್ರೇನ್ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆಯ ಮೇಲೆ ಕರಿನೆರಳು ಬೀರಿದೆ. ದಾಳಿಯ ಬೆನ್ನಲ್ಲೇ ರಷ್ಯಾ ತನ್ನ ಸಂಧಾನದ ನಿಲುವು ಬದಲಿಸುವುದಾಗಿ ಘೋಷಿಸಿದೆ. ಅಂದರೆ, ರಷ್ಯಾ ಈ ಹಿಂದೆ ಒಪ್ಪಿಕೊಂಡಿದ್ದ ಕೆಲವು ಕಠಿಣ ನಿಬಂಧನೆಗಳನ್ನು ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ,(ಏಜೆನ್ಸೀಸ್).