ಪ್ರವಾಹದಲ್ಲಿ ಕೊಚ್ಚಿಹೋದ ಸೇಫ್ ಬಾಕ್ಸ್‌ನಿಂದ 90 ಲಕ್ಷಕ್ಕೂ ಹೆಚ್ಚು ಹಣ ಕದ್ದ 29 ಜನರ ಬಂಧನ
- ನೇಪಾಳದಲ್ಲಿ ರಣ ಭೀಕರ ಪ್ರವಾಹ
- ಪ್ರವಾಹದಲ್ಲಿ ಕೊಚ್ಚಿಹೋದ ಸೇಫ್ ಬಾಕ್ಸ್‌ನಿಂದ 90 ಲಕ್ಷಕ್ಕೂ ಹೆಚ್ಚು ಹಣ ಕದ್ದ 29 ಜನರ ಬಂಧನ
- ಮೃತಪಟ್ಟವರ ಶವದ ಮೇಲಿದ್ದ ಚಿನ್ನದ ಕಿವಿಯೋಲೆ ಕದ್ದವರೂ ಲಾಕ್
ನೇಪಾಳ: ಕಳೆದೊಂದು ಮೂರು- ನಾಲ್ಕು ದಿನಗಳಿಂದ ಭಾರತದ ನೆರೆರಾಷ್ಟ್ರ ನೇಪಾಳ ರಣ ಭೀಕರ ಪ್ರವಾಹ
(Nepal Flood) ಕ್ಕೆ ತುತ್ತಾಗಿದ್ದು, ಸಾವಿನ ಸಂಖ್ಯೆ ಸುಮಾರು 600 ರ ಗಡಿ ದಾಟಿದೆ ಎಂದು ವರದಿಯಾಗುತ್ತಿದೆ.
ಈ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೆಲವರು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ, ಇನ್ನು ಕೆಲವರು ಇದೇ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡು ದುಶ್ಕೃತ್ಯ ಎಸೆಗಲು ಮುಂದಾಗುತ್ತಿದ್ದಾರೆ.
ಇತ್ತೀಚೆಗೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇಫ್ ಬಾಕ್ಸ್ನಲ್ಲಿದ್ದ ಹಣ ಕದ್ದ ಆರೋಪದ ಮೇಲೆ ಬರೋಬ್ಬರಿ 29 ಜನರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಷ್ಟೇ ಅಲ್ಲ, ಪ್ರವಾಹದಲ್ಲಿ ಮೃತಪಟ್ಟವರ ದೇಹದ ಮೇಲಿದ್ದ ಚಿನ್ನಾಭರಣ ದೋಚಿದವರೂ ಈಗ ನೇಪಾಳ ಪೊಲೀಸರ ಅತಿಥಿಯಾಗಿದ್ದಾರೆ.
ಅಸಲಿ ಕತೆ ಏನು?
ಕೆಲ ದಿನಗಳ ಹಿಂದೆ ರಸುವಾ ಜಿಲ್ಲೆಯ ಭೋಟೆಕೋಶಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಸಿಲುಕಿ ಹಣವಿದ್ದ ಸೇಫ್ ಒಂದು ಕೊಚ್ಚಿಹೋಗಿತ್ತು. ಪ್ರವಾಹದ ಅಬ್ಬರಕ್ಕೆ ಕೊಚ್ಚಿಕೊಂಡು ಬಂದ ಈ ಸೇಫ್, ಧಾಡಿಂಗ್ ಜಿಲ್ಲೆಯ ಬೆಲ್ಖುಖೋಲಾ ಬಳಿ ತ್ರಿಶೂಲಿ ನದಿಯ ದಡದಲ್ಲಿ ಬಂದು ಬಿದ್ದಿತ್ತು.
ಆಗಸ್ಟ್ 26ರಂದು ಈ ಸೇಫ್ ದಡದಲ್ಲಿ ಪತ್ತೆಯಾಗಿತ್ತು. ಆದರೆ, ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮಾನವೀಯತೆ ಮರೆತು ಕಳ್ಳತನಕ್ಕೆ ಕೈಹಾಕಿದ್ದಾರೆ. ಸೇಫ್ ಬಿದ್ದಿದೆ ಎಂದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಜನರು, ಅದನ್ನು ಒಡೆದು, ಒಳಗಿದ್ದ ಕಂತೆ ಕಂತೆ ನೋಟುಗಳನ್ನು ಕದೊಯ್ದಿದ್ದಾರೆ.
ಪೊಲೀಸರ ಎಂಟ್ರಿ, 90 ಲಕ್ಷಕ್ಕೂ ಹೆಚ್ಚು ನಗದು ಸೀಜ್
ಆಗಸ್ಟ್ 28ರಂದು ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳೀಯರ ಕರಾಮತ್ತಿನ ಬಗ್ಗೆ ತನಿಖೆಗಿಳಿದ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ಒಟ್ಟು 29 ಜನರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 90 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಶವದ ಮೇಲಿದ್ದ ಚಿನ್ನದ ಓಲೆ ಕದ್ದ ಪಾಪಿಗಳು ಅರೆಸ್ಟ್!
ಇದೇ ರೀತಿಯ ಮತ್ತೊಂದು ಅಮಾನವೀಯ ಘಟನೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ನಾರಾಯಣಿ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹ ತೇಲಿಬಂದಿತ್ತು. ಈ ದುಃಖದ ಪರಿಸ್ಥಿತಿಯಲ್ಲೂ ಕೆಲವರು ಆ ಶವದ ಮೇಲಿದ್ದ ಚಿನ್ನದ ಕಿವಿಯೋಲೆಗಳನ್ನು ಕದ್ದುಕೊಂಡು ಹೋಗಿದ್ದರು.
ಮೃತ ಮಹಿಳೆಯ ದೇಹದಿಂದ ಪುರುಷರೊಬ್ಬರು ಚಿನ್ನದ ಕಿವಿಯೋಲೆಗಳನ್ನು ಎಗರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವಿಡಿಯೋ ಆಧಾರದ ಮೇಲೆ ಎಚ್ಚೆತ್ತ ಪೊಲೀಸರು, ತಕ್ಷಣವೇ ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,
(ಏಜನ್ಸೀಸ್).