Cricket 
ವಿದೇಶ

Cricket | ಟೆಸ್ಟ್‌ನಲ್ಲಿ ತ್ರಿಶತಕ, ಏಕದಿನದಲ್ಲಿ ದ್ವಿಶತಕ ಸಿಡಿಸಿದ ಇಬ್ಬರು ಬ್ಯಾಟ್ಸ್‌ಮನ್‌ಗಳು ಇವರೇ.. ನೋಡಿ

Cricket: ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತು ವೆಸ್ಟ್ ಇಂಡೀಸ್ ಸ್ಟಾರ್ ಕ್ರಿಸ್ ಗೇಲ್ ಇಬ್ಬರೂ ಟೆಸ್ಟ್‌ನಲ್ಲಿ ತ್ರಿಶತಕ ಮತ್ತು ಏಕದಿನ ಪಂದ್ಯಗಳಲ್ಲಿ ದ್ವಿಶತಕ ಗಳಿಸಿದ್ದಾರೆ. ಅಲ್ಲದೆ, ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್‌ಮನ್‌ಗಳು ಇವರಿಬ್ಬರಾಗಿದ್ದಾರೆ. ಇಬ್ಬರೂ ಟೆಸ್ಟ್‌ನಲ್ಲಿ ಎರಡು ಬಾರಿ ತ್ರಿಶತಕ ಗಳಿಸಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ, ಅನೇಕ ಅಗ್ರೇಸಿವ್​ ಬ್ಯಾಟ್ಸ್‌ಮನ್‌ಗಳು ಬಂದು ಹೋಗಿದ್ದಾರೆ. ಆದರೆ ಇತಿಹಾಸದ ಪುಟಗಳಲ್ಲಿ ಕೆಲವರು ಮಾತ್ರ ಸ್ಥಾನ ಪಡೆದಿದ್ದಾರೆ. ಆದರೆ ಬೌಲರ್‌ಗಳ ಎದೆಯಲ್ಲಿ ಭಯ ಹುಟ್ಟಿಸಿದ್ದು ಕಡಿಮೆ ಬ್ಯಾಟರ್​ಗಳು. ಅಲ್ಲದೆ, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಭಾರತದ ವೀರೇಂದ್ರ ಸೆಹ್ವಾಗ್ ಅತ್ಯಂತ ಸವಾಲಿನ ಸ್ವರೂಪಗಳಾದ ಟೆಸ್ಟ್, ಏಕದಿನ ಮತ್ತು ಟಿ20ಗಳಲ್ಲಿ ತಮ್ಮ ಬ್ಯಾಟ್‌ಗಳಿಂದ ರನ್​ ಹುಳೆಯನ್ನೆ ಹರಿಸಿದ್ದಾರೆ. ಈ ಇಬ್ಬರೂ ಬೇರೆ ಯಾರೂ ಸಾಧಿಸಲು ಸಾಧ್ಯವಾಗದ ಸಾಧನೆಗಳನ್ನು ಮಾಡಿದ್ದಾರೆ.
ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಇವರ ನಂತರ ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಟ್ಟ ವೀರೇಂದ್ರ ಸೆಹ್ವಾಗ್ ಮತ್ತು ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾರು ಮಾಡಲಾಗದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೆಸ್ಟ್ ಮತ್ತು ಏಕದಿನ ಎರಡೂ ಸ್ವರೂಪಗಳಲ್ಲಿ, ಎಲ್ಲರೂ ಸಾಧಿಸಲು ಬಯಸುವ ಆದರೆ ಸಾಧಿಸಲು ಕಷ್ಟಕರವಾದ ಸಾಧನೆಗಳನ್ನು ಉಭಯ ಆಟಗಾರರರು ಸಾಧಿಸಿದ್ದಾರೆ. ಇಬ್ಬರೂ ಟೆಸ್ಟ್‌ನಲ್ಲಿ ತ್ರಿಶತಕ ಮತ್ತು ಏಕದಿನ ಪಂದ್ಯಗಳಲ್ಲಿ ದ್ವಿಶತಕಗಳನ್ನು ಹೊಂದಿದ್ದಾರೆ.
ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ವಿರುದ್ಧ ತ್ರಿಶತಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರೆ, ಅವರ ಎರಡನೇ ತ್ರಿಶತಕ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬಂದಿತು. 2004 ರಲ್ಲಿ, ಮುಲ್ತಾನ್‌ನಲ್ಲಿ 309 ರನ್‌ಗಳ ಇನ್ನಿಂಗ್ಸ್ ಆಡಿದರು. 2008 ರಲ್ಲಿ, ಚೆನ್ನೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಗಳಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಠಿಸಿದರು. ವೀರೇಂದ್ರ ಸೆಹ್ವಾಗ್ 104 ಟೆಸ್ಟ್‌ಗಳಲ್ಲಿ 8586 ರನ್ ಗಳಿಸಿದ್ದಾರೆ.
2011 ಡಿಸೆಂಬರ್ 8 ರಂದು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಸೆಹ್ವಾಗ್ ದ್ವಿಶತಕ ಗಳಿಸಿದರು. ಈ ಪಂದ್ಯದಲ್ಲಿ ಸೆಹ್ವಾಗ್ 149 ಎಸೆತಗಳಲ್ಲಿ 25 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 219 ರನ್ ಗಳಿಸಿದರು. 251 ಏಕದಿನ ಪಂದ್ಯಗಳಲ್ಲಿ ಅವರು 8273 ರನ್ ಗಳಿಸಿದ್ದಾರೆ. ವೀರೇಂದ್ರ ಸೆಹ್ವಾಗ್ 15 ಶತಕ ಮತ್ತು 38 ಅರ್ಧಶತಕಗಳನ್ನು ಗಳಿಸಿದ್ದಾರೆ.

ಯೂನಿವರ್ಸ್ ಬಾಸ್

ವೀರೇಂದ್ರ ಸೆಹ್ವಾಗ್ ಅವರಲ್ಲದೆ, ಯೂನಿವರ್ಸ್ ಬಾಸ್ ಎಂದು ಕರೆಯಲ್ಪಡುವ ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಮತ್ತು ಏಕದಿನ ಪಂದ್ಯಗಳಲ್ಲಿ ದ್ವಿಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಸೆಹ್ವಾಗ್ ಅವರಂತೆಯೇ, ಗೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕಗಳನ್ನು ಗಳಿಸಿದ್ದಾರೆ. ಇವರು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಕ್ರಿಸ್ ಗೇಲ್ 2005 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 317 ರನ್ ಮತ್ತು 2010 ರಲ್ಲಿ ಗ್ಯಾಲೆಯಲ್ಲಿ ಶ್ರೀಲಂಕಾ ವಿರುದ್ಧ 333 ರನ್ ಗಳಿಸಿದರು.
ಕ್ರಿಸ್ ಗೇಲ್ 2015 ಫೆಬ್ರವರಿ 24 ರಂದು ಕ್ಯಾನ್‌ಬೆರಾದಲ್ಲಿ ಜಿಂಬಾಬ್ವೆ ವಿರುದ್ಧ 215 ರನ್ ಗಳಿಸಿದರು. ಇವರು 147 ಎಸೆತಗಳಲ್ಲಿ 10 ಬೌಂಡರಿ ಮತ್ತು 16 ಸಿಕ್ಸರ್‌ಗಳನ್ನು ಬಾರಿಸಿ ಈ ಐತಿಹಾಸಿಕ ಇನ್ನಿಂಗ್ಸ್ ಆಡಿದರು. ಕ್ರಿಸ್ ಗೇಲ್ 301 ಏಕದಿನ ಪಂದ್ಯಗಳಲ್ಲಿ 25 ಶತಕ ಮತ್ತು 54 ಅರ್ಧಶತಕಗಳನ್ನು ಒಳಗೊಂಡಂತೆ 10,480 ರನ್ ಗಳಿಸಿದ್ದಾರೆ,(ಏಜೆನ್ಸೀಸ್).