ಲಂಡನ್: ಐಪಿಎಲ್ ಸ್ಥಾಪಕ, ಬಿಸಿಸಿಐನ ಮಾಜಿ ಉಪಾಧ್ಯಕ್ಷ ಹಾಗೂ ತೆರಿಗೆ ವಂಚನೆ ಪ್ರಕರಣದಿಂದಾಗಿ ಭಾರತವನ್ನು ತೊರೆದು ಲಂಡನ್ ಸೇರಿಕೊಂಡಿದ್ದ ಲಲಿತ್ ಮೋದಿಗೆ ಇದೀಗ ಬ್ರಿಟಿಷ್ ಪೌರತ್ವ ಪಡೆದುಕೊಂಡು, ಬ್ರಿಟನ್ ಪ್ರಜೆಯಾಗಿದ್ದಾರೆ. ಈಗ ವಿದೇಶಿ ಪೌರತ್ವ ಪಡೆದ ನಂತರ ತಾವೇಕೆ ಭಾರತವನ್ನು ರಾತ್ರೋರಾತ್ರಿ ತೊರೆದು ಲಂಡನ್ ಸೇರಿಕೊಂಡಿದ್ದೆ ಎಂಬ ಪ್ರಶ್ನೆಗೆ ಲಲಿತ್ ಮೋದಿ ಉತ್ತರ ನೀಡಿದ್ದಾರೆ.
2010 ರಲ್ಲಿ ಸರ್ಕಾರ ತಮಗೆ ನೀಡಿದ್ದ ಶಸಸ್ತ್ರ ಭದ್ರತೆಯನ್ನು ಹಿಂಪಡೆದುಕೊಂಡ ನಂತರ ತಮಗೆ ಭೂಗತ ಜಗತ್ತಿನಿಂದ ಬೆದರಿಕೆ ಕರೆ ಬರುತ್ತಿದ್ದವು. ನಾನು ಈ ಕುರಿತು ಪೊಲೀಸರಲ್ಲಿ ದೂರನ್ನು ನೀಡಲು ಮುಂದಾದಾಗ ಯಾವುದೇ ಎಫ್‌ಐಆರ್ ದಾಖಲಾಗಲಿಲ್ಲ. ಹೀಗಾಗಿ ನಾನು ಅನಿವಾರ್ಯವಾಗಿ ದೇಶ ಬೀಡಬೇಕಾಯಿತೆಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.
"ಜಾರಿ ನಿರ್ದೇಶನಾಲಯಕ್ಕೆ (ED) ಬರೆದ ಪತ್ರವೊಂದರಲ್ಲಿ, ಮುಂಬೈ ಪೊಲೀಸ್‌ನ ಹೆಚ್ಚುವರಿ ಆಯುಕ್ತರು, ನನ್ನ ಜೀವಕ್ಕೆ ಇರುವ ಬೆದರಿಕೆಗಳ ಕುರಿತು ಕೇಂದ್ರ ಸಂಸ್ಥೆಗಳಿಂದ ಬಂದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನನಗೆ ಭದ್ರತಾ ರಕ್ಷಣೆ ನೀಡಲಾಗಿತ್ತು ಎಂಬುದನ್ನು ದೃಢಪಡಿಸಿದ್ದಾರೆ," ಎಂದು ಮೋದಿ ಹೇಳಿದ್ದಾರೆ.
"ನಂತರ, ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ನನ್ನ ಭಾರತೀಯ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಲಾಯಿತು. ಆಗ ದೆಹಲಿ ಹೈಕೋರ್ಟ್ ಇದನ್ನು ಪರಿಶೀಲಿಸಿ, 2014ರಲ್ಲಿ ಆ ರದ್ದತಿಯನ್ನು ರದ್ದುಗೊಳಿಸಿತು ಮತ್ತು ನನ್ನ ಪಾಸ್‌ಪೋರ್ಟ್ ಅನ್ನು ಮರುಸ್ಥಾಪಿಸಿತು" ಎಂದಿದ್ದಾರೆ.
ಭಾರತದಿಂದ ತಾವು ನಿರ್ಗಮಿಸಿದ ವಿಷಯದ ಕುರಿತು ಭಾರತೀಯ ಮಾಧ್ಯಮ ಸಂಸ್ಥೆಗಳು ಪ್ರಸಾರ ಮಾಡಿದ ವರದಿಗಳನ್ನು "ಸುಳ್ಳು ಮತ್ತು ಮಾನಹಾನಿಕರ" ಎಂದು ಕರೆದಿರುವ ಮೋದಿ, ಅಂತಹ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
"ಭಾರತೀಯ ಮಾಧ್ಯಮಗಳ ಒಂದು ವರ್ಗವು, ನಾನು ಬ್ರಿಟಿಷ್ ಪೌರತ್ವ ಪಡೆದಿರುವುದನ್ನು, ಆರೋಪಗಳಿಂದ ತಪ್ಪಿಸಿಕೊಳ್ಳಲು ಓಡಿಹೋದ ವ್ಯಕ್ತಿಯೊಬ್ಬನ ಬೆಳವಣಿಗೆಯಂತೆ ಮತ್ತು ಅಂತಹ ವ್ಯಕ್ತಿಯನ್ನು ಭಾರತ ಈಗ ವಾಪಸ್ ಕರೆತರಲು ಪ್ರಯತ್ನಿಸುತ್ತಿದೆ ಎಂಬಂತೆ ಬಿಂಬಿಸಿದೆ. ಇಂತಹ ವರದಿಗಳು ಆಧಾರ ರಹಿತವಾಗಿದ್ದು, ಇವೆಲ್ಲಾ ಸಂಪೂರ್ಣ ಸುಳ್ಳಾಗಿವೆ" ಎಂದು ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ, (ಏಜೆನ್ಸೀಸ್).