ಬಿಡುವ ಪ್ರಶ್ನೆಯೇ ಇಲ್ಲ! ಕದನ ವಿರಾಮದ ನಡುವೆಯೂ ಹಿಜ್ಬುಲ್ಲಾ ಮೇಲೆ ಇಸ್ರೇಲ್ ಪ್ರಚಂಡ ದಾಳಿ: ಪ್ರಧಾನಿ ನೆತನ್ಯಾಹು ಖಡಕ್ ವಾರ್ನಿಂಗ್!
ಟೆಲ್ಅವಿವ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಜ್ವಾಲೆ ಆರುವ ಲಕ್ಷಣಗಳು ಕಾಣುತ್ತಿಲ್ಲ. ಅತ್ತ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮದ ಮಾತುಕತೆಗಳು ನಡೆಯುತ್ತಿದ್ದರೂ, ಇತ್ತ ಇಸ್ರೇಲ್ ಮಾತ್ರ ಹಿಜ್ಬುಲ್ಲಾ ಉಗ್ರ ಸಂಘಟನೆಯನ್ನು ಬೇರುಸಹಿತ ಕಿತ್ತೊಗೆಯುವವರೆಗೂ ವಿಶ್ರಮಿಸುವುದಿಲ್ಲ ಎಂದು ಘೋಷಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Netanyahu Warning) ಅವರು ಹಿಜ್ಬುಲ್ಲಾ ವಿರುದ್ಧ ನಿರ್ಣಾಯಕ ಯುದ್ಧ ಮುಂದುವರಿಸುವುದಾಗಿ ಅತಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
ನೆತನ್ಯಾಹು ಅವರ 'ಡೆಡ್ಲಿ' ಮೆಸೇಜ್
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನೆತನ್ಯಾಹು, ಇಸ್ರೇಲ್ ಸೇನೆಯು ಅತ್ಯಂತ ಶಕ್ತಿಶಾಲಿ ಮತ್ತು ನಿಖರವಾದ ದಾಳಿಗಳನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ. ನಾವು ಹಿಜ್ಬುಲ್ಲಾವನ್ನು ಪೂರ್ಣ ಶಕ್ತಿ, ನಿಖರತೆ ಮತ್ತು ದೃಢಸಂಕಲ್ಪದೊಂದಿಗೆ ಹೊಡೆಯುತ್ತಲೇ ಇರುತ್ತೇವೆ. ಇಸ್ರೇಲ್ ನಾಗರಿಕರ ವಿರುದ್ಧ ಯಾರು ಕೈ ಎತ್ತುತ್ತಾರೋ ಅವರಿಗೆ ತಕ್ಕ ಶಿಕ್ಷೆ ಕಾದಿದೆ ಎಂದು ಗುಡುಗಿದ್ದಾರೆ.
ನೆತನ್ಯಾಹು ಅವರು ಈ ವೇಳೆ ಬೈರೂತ್‌ನಲ್ಲಿ ನಡೆದ ಕಾರ್ಯಾಚರಣೆಯನ್ನು ಉಲ್ಲೇಖಿಸಿ, ಹಿಜ್ಬುಲ್ಲಾ ಮುಖ್ಯಸ್ಥ ನಯಿಮ್ ಖಾಸಿಮ್‌ನ ಅತ್ಯಂತ ಆಪ್ತ ಹಾಗೂ ವೈಯಕ್ತಿಕ ಕಾರ್ಯದರ್ಶಿ ಅಲಿ ಯೂಸುಫ್ ಹರ್ಷಿಯ ಹತ್ಯೆಯನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. ಖಾಸಿಮ್‌ಗೆ ಅತ್ಯಂತ ಹತ್ತಿರವಾಗಿದ್ದ ವ್ಯಕ್ತಿಯನ್ನೇ ನಾವು ಮುಗಿಸಿದ್ದೇವೆ, ಇದು ನಮ್ಮ ಶಕ್ತಿಯ ಸಂಕೇತ ಎಂದು ಹೇಳಿದ್ದಾರೆ.
ದಕ್ಷಿಣ ಲೆಬನಾನ್‌ನಲ್ಲಿ ಮಿಂಚಿನ ಕಾರ್ಯಾಚರಣೆ
ಕಳೆದ ರಾತ್ರಿ ಇಸ್ರೇಲ್ ರಕ್ಷಣಾ ಪಡೆ ದಕ್ಷಿಣ ಲೆಬನಾನ್‌ನಲ್ಲಿ ಸರಣಿ ದಾಳಿಗಳನ್ನು ನಡೆಸಿದೆ. ಈ ದಾಳಿಯ ಮುಖ್ಯ ಉದ್ದೇಶಗಳು ಹೀಗಿವೆ.
ಆಯುಧಗಳ ಸರಬರಾಜು ಮಾರ್ಗ: ಸಾವಿರಾರು ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲು ಬಳಸುತ್ತಿದ್ದ ಪ್ರಮುಖ ಗಡಿ ದಾಟುವಿಕೆಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.
ಶಸ್ತ್ರಾಸ್ತ್ರ ಮಳಿಗೆಗಳ ಧ್ವಂಸ: ಹಿಜ್ಬುಲ್ಲಾದ ಬೃಹತ್ ಶಸ್ತ್ರಾಸ್ತ್ರ ಡಿಪೋಗಳು, ಲಾಂಚರ್‌ಗಳು ಮತ್ತು ಕಮಾಂಡ್ ಸೆಂಟರ್‌ಗಳನ್ನು ನಾಶಪಡಿಸಲಾಗಿದೆ.
ಉತ್ತರ ಇಸ್ರೇಲ್ ಭದ್ರತೆ: ಇಸ್ರೇಲ್‌ನ ಉತ್ತರ ಭಾಗದ ನಿವಾಸಿಗಳಿಗೆ ಸಂಪೂರ್ಣ ಸುರಕ್ಷತೆ ಸಿಗುವವರೆಗೂ ಈ ದಾಳಿಗಳು ನಿಲ್ಲುವುದಿಲ್ಲ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
ಕದನ ವಿರಾಮಕ್ಕೆ ಬೆಲೆ ಇಲ್ಲವೇ..?
ಜಾಗತಿಕ ಮಟ್ಟದಲ್ಲಿ ಅಮೆರಿಕದ ನೇತೃತ್ವದಲ್ಲಿ ಕದನ ವಿರಾಮದ ಪ್ರಯತ್ನಗಳು ನಡೆಯುತ್ತಿದ್ದರೂ, ಇಸ್ರೇಲ್ ಮಾತ್ರ ಲೆಬನಾನ್ ಅನ್ನು ಈ ಒಪ್ಪಂದದಿಂದ ಹೊರಗಿಟ್ಟಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಅಗತ್ಯವಿರುವ ಕಡೆಗಳಲ್ಲಿ ನಾವು ಹಿಜ್ಬುಲ್ಲಾ ಮೇಲೆ ದಾಳಿ ನಡೆಸುತ್ತಲೇ ಇರುತ್ತೇವೆ ಎಂದು ಇಸ್ರೇಲ್ ಹೇಳಿರುವುದು ಇರಾನ್‌ನ ಆಕ್ರೋಶಕ್ಕೆ ಕಾರಣವಾಗಿದೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಈ ನಿಖರ ಹತ್ಯೆಗಳು ಹಿಜ್ಬುಲ್ಲಾ ಸಂಘಟನೆಯನ್ನು ನಾಯಕತ್ವವಿಲ್ಲದಂತೆ ಮಾಡುತ್ತಿವೆ.
ಇಸ್ರೇಲ್ ಪ್ರಧಾನಿಯ ಈ ಎಚ್ಚರಿಕೆಯು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ನೀಡಿದೆ. ಹಿಜ್ಬುಲ್ಲಾದ ಶಸ್ತ್ರಾಸ್ತ್ರ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸದೆ ಇಸ್ರೇಲ್ ಹಿಂದೆ ಸರಿಯುವ ಲಕ್ಷಣಗಳಿಲ್ಲ. ಬೈರೂತ್‌ನಿಂದ ಲಿಟಾನಿ ನದಿಯವರೆಗೂ ಇಸ್ರೇಲ್‌ನ ಯುದ್ಧ ವಿಮಾನಗಳು ಹಗಲಿರುಳು ಗಿರಕಿ ಹೊಡೆಯುತ್ತಿವೆ,(ಏಜೆನ್ಸೀಸ್).