ಅಮೆರಿಕ: ಎಡ್ಮಂಟನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಎಂಟು ಗಂಟೆಗಳಿಗೂ ಹೆಚ್ಚು ಸಮಯ ಕಾಯುತ್ತ 44 ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಹಿನ್ನಲೆ ಜಗತ್ತಿನ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ (Elon Musk) ಕೆನಡಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಈ ಘಟನೆ ಕುರಿತು ಮೃತನ ಪತ್ನಿ "ನನ್ನ ಪತಿ ತೀವ್ರ ಎದೆನೋವಿನ ಬಗ್ಗೆ ಮಾಹಿತಿ ನೀಡಿದ್ದರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ" ಎಂದು ವಿವರಿಸಿದ ವೀಡಿಯೊವನ್ನು ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಅಂದಿನಿಂದ ಈ ಪ್ರಕರಣವು ರಾಜತಾಂತ್ರಿಕವಾಗಿ ಸಹ ಗಮನ ಸೆಳೆದಿದ್ದು, ಭಾರತದ ವಿದೇಶಾಂಗ ಸಚಿವಾಲಯವು ಕೆನಡಾದ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.
ಕೆನಡಾದ ಆರೋಗ್ಯ ಮಾದರಿಯನ್ನು ಗುರಿಯಾಗಿಸಿಕೊಂಡ ಮಸ್ಕ್
X ನಲ್ಲಿ ವೈರಲ್ ಆಗಿರುವ ವೀಡಿಯೊಗೆ ಪ್ರತಿಕ್ರಿಯಿಸುತ್ತಾ, ಮಸ್ಕ್ ಕೆನಡಾದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಅಮೆರಿಕದ ಮೋಟಾರ್ ವಾಹನ ಇಲಾಖೆಗೆ ಹೋಲಿಸಿದ್ದಾರೆ. ಕೆನಡಾದ ವೈದ್ಯಕೀಯ ಸೇವೆಗಳು ಅಮೆರಿಕದ DMV (Department of Motor Vehicles) ಯಷ್ಟೇ ಉತ್ತಮವಾಗಿದೆ ಎಂದು ವ್ಯಂಗ್ಯಮಾಡಿದ್ದಾರೆ.
ಕುಟುಂಬದ ಪ್ರಕಾರ ಡಿ. 22 ರಂದು ಸುಮಾರು 12.30 ಕ್ಕೆ ಗ್ರೇ ನನ್ಸ್ ಆಸ್ಪತ್ರೆಗೆ ಪ್ರಶಾಂತ್ ಶ್ರೀಕುಮಾರ್ ಅವರನ್ನು ದಾಖಲಿಸಿದ್ದು ತೀವ್ರವಾದ ಎದೆ ನೋವಿನ ಬಗ್ಗೆ ಮಾಹಿತಿ ನೀಡಿದ ನಂತರವೂ ಅವರು ಎಂಟು ಗಂಟೆಗಳಿಗೂ ಹೆಚ್ಚು ಕಾಲ ಚಿಕಿತ್ಸೆಗೆ ಕಾಯುತ್ತಲೇ ಇದ್ದರು.
ಅಂತಿಮವಾಗಿ ರಾತ್ರಿ 8.50 ರ ಸುಮಾರಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು, ಆದರೆ ಕೆಲವೇ ಸೆಕೆಂಡುಗಳಲ್ಲಿ ಅವರು ಕುಸಿದು ಬಿದ್ದರು ಎಂದು ಪತ್ನಿ ನಿಹಾರಿಕಾ ಶ್ರೀಕುಮಾರ್ ಹೇಳಿದ್ದಾರೆ. ತಮ್ಮ ಮಗನ ಸಾವಿಗೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಘಟನೆ ಈಗ ರಾಜತಾಂತ್ರಿಕ ರೂಪವನ್ನು ಪಡೆದುಕೊಂಡಿದೆ. ಭಾರತದ ವಿದೇಶಾಂಗ ಸಚಿವಾಲಯವು ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ ಮತ್ತು ಕೆನಡಾ ಸರ್ಕಾರವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ ಎಂದು ತಿಳಿದು ಬಂದಿದೆ,(ಏಜನ್ಸೀಸ್).