- ‘ವಿಶ್ವದ ಅತಿದೊಡ್ಡ ತೈಲ ಒಪ್ಪಂದ’ ಎಂದು ಬಣ್ಣಿಸಿದ ಟ್ರಂಪ್
- ವೆನೆಜುವೆಲಾದ 65 ಬಿಲಿಯನ್ ತೈಲ ಬ್ಯಾರೆಲ್‌ಗಳ ಸಂಗ್ರಹ ಒಪ್ಪಂದ
- ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಇಳಿಸುವುದೇ ಡೀಲ್‌ನ ಗುರಿ
Trump Oil Deal: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಭರ್ಜರಿ ಘೋಷಣೆ ಮಾಡಿದ್ದಾರೆ. ಅಮೆರಿಕ ಮತ್ತು ವೆನೆಜುವೆಲಾ ನಡುವೆ ಭಾರೀ ತೈಲ ಒಪ್ಪಂದವೊಂದು ಅಂತಿಮಗೊಂಡಿದ್ದು, ಇದನ್ನು ಟ್ರಂಪ್ ‘ವಿಶ್ವದ ಅತಿದೊಡ್ಡ ತೈಲ ಡೀಲ್’ ಎಂದು ಬಣ್ಣಿಸಿದ್ದಾರೆ.
ಟ್ರಂಪ್ ಪ್ರಕಾರ, ಈ ಒಪ್ಪಂದದ ಮೂಲಕ ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್‌ಗಳಿಗೂ ಹೆಚ್ಚು ತೈಲ ಸಂಗ್ರಹದ ಮೇಲೆ ಅಮೆರಿಕ ಬಹುಮತ ನಿಯಂತ್ರಣ ಪಡೆಯಲಿದೆ. ಈ ಡೀಲ್ ಅನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ನೇತೃತ್ವದಲ್ಲಿ ಮಾತುಕತೆ ನಡೆದಿದೆ.
17 ತೈಲ ಕ್ಷೇತ್ರಗಳ ಅಭಿವೃದ್ಧಿ
ವೆನೆಜುವೆಲಾ ಪ್ರಕಾರ, ಒಪ್ಪಂದದ ಭಾಗವಾಗಿ 17 ಪ್ರಮುಖ ತೈಲ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ. ಈ ಕ್ಷೇತ್ರಗಳಲ್ಲಿ ಸುಮಾರು 65 ಬಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ಸಂಗ್ರಹವಿದೆ ಎನ್ನಲಾಗಿದೆ. ಈ ಯೋಜನೆಗೆ 100 ಬಿಲಿಯನ್ ಡಾಲರ್‌ಗೂ ಹೆಚ್ಚು ಹೂಡಿಕೆ ಬರಬಹುದು. ಇದರ ಜೊತೆಗೆ ವೆನೆಜುವೆಲಾ ಸರ್ಕಾರಕ್ಕೆ 209 ಬಿಲಿಯನ್ ಡಾಲರ್‌ಗೂ ಹೆಚ್ಚು ತೆರಿಗೆ ಆದಾಯ ಸಿಗುವ ಸಾಧ್ಯತೆ ಇದೆ ಎಂದು ಡೆಲ್ಸಿ ರೊಡ್ರಿಗಸ್ ಹೇಳಿದ್ದಾರೆ.
ಅಮೆರಿಕಕ್ಕೆ ಏನು ಲಾಭ?
ಈ ಒಪ್ಪಂದದಿಂದ ಅಮೆರಿಕಕ್ಕೆ ಕಡಿಮೆ ಬೆಲೆಯಲ್ಲಿ ತೈಲ ಸಿಗಲಿದೆ. ಇದರಿಂದ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯನ್ನು ಎಂದು ಟ್ರಂಪ್ ಹೇಳಿದ್ದಾರೆ. ಹೊಸ ಕಂಪನಿಯಿಂದ ದೊರೆಯುವ ತೈಲದ ಒಂದು ಭಾಗವನ್ನು ಅಮೆರಿಕದ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ತುಂಬಲು ಹಾಗೂ ಸೇನಾ ಬಳಕೆಗೆ ಬಳಸುವ ಸಾಧ್ಯತೆ ಇದೆ.
ತಕ್ಷಣವೇ ತೈಲ ಉತ್ಪಾದನೆ ಹೆಚ್ಚಾಗುತ್ತಾ?
ಇಲ್ಲಿಯೇ ದೊಡ್ಡ ಪ್ರಶ್ನೆ ಎದುರಾಗಿದೆ. ವೆನೆಜುವೆಲಾದಲ್ಲಿ ಅಪಾರ ತೈಲ ಸಂಗ್ರಹವಿದ್ದರೂ, ಹಲವು ವರ್ಷಗಳ ನಿರ್ಲಕ್ಷ್ಯದಿಂದ ಅಲ್ಲಿನ ತೈಲ ಕ್ಷೇತ್ರಗಳ ಮೂಲಸೌಕರ್ಯ ಹದಗೆಟ್ಟಿದೆ. ಹೀಗಾಗಿ ಹೊಸ ಹೂಡಿಕೆ ಬಂದರೂ ತಕ್ಷಣವೇ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಹೆಚ್ಚಿಸುವುದು ಸುಲಭವಲ್ಲ. ತೈಲ ಕ್ಷೇತ್ರಗಳ ದುರಸ್ತಿ, ಸಾರಿಗೆ ವ್ಯವಸ್ಥೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹಲವು ವರ್ಷಗಳು ಹಾಗೂ ಬಿಲಿಯನ್‌ಗಟ್ಟಲೆ ಡಾಲರ್‌ಗಳ ಹೂಡಿಕೆ ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆ ಮೇಲೆ ಪರಿಣಾಮ?
ವೆನೆಜುವೆಲಾ ವಿಶ್ವದಲ್ಲೇ ಅತಿ ದೊಡ್ಡ ತೈಲ ಸ್ಟಾಕ್ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಆದರೆ ಅದರ ಉತ್ಪಾದನೆ ಪ್ರಸ್ತುತ ಸಂಗ್ರಹದ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ. ಹೀಗಾಗಿ ಈ ಒಪ್ಪಂದ ನಿಜವಾಗಿಯೂ ದೊಡ್ಡ ಮಟ್ಟದ ಉತ್ಪಾದನೆಗೆ ಕಾರಣವಾದರೆ, ಮುಂದಿನ ದಿನಗಳಲ್ಲಿ ಅಮೆರಿಕದ ಇಂಧನ ಭದ್ರತೆ ಮಾತ್ರವಲ್ಲದೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ,(ಏಜೆನ್ಸೀಸ್).