ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಾರ್ವೆಗೆ ಭೇಟಿ ನೀಡಿದಾಗ, ಈ ಪುಟ್ಟರಾಷ್ಟ್ರದತ್ತ ಜಾಗತಿಕ ವಲಯದ ಚಿತ್ತ ನೆಟ್ಟಿತ್ತು. ನಾರ್ವೆಯ ಒಟ್ಟು ಜನಸಂಖ್ಯೆ ಬರೀ 56 ಲಕ್ಷ. ನಮ್ಮ ಬೆಂಗಳೂರಿನ ಅರ್ಧದಷ್ಟು! ದೆಹಲಿಯ ಕಾಲುಭಾಗದಷ್ಟು ಜನಸಂಖ್ಯೆ! ಆದರೆ, ನಾರ್ವೆ ಬಳಿ ಇರುವ ಸರ್ಕಾರಿ ನಿಧಿ ಭಾರತದ ಜಿಡಿಪಿಯ ಅರ್ಧದಷ್ಟು-2.1 ಟ್ರಿಲಿಯನ್ ಡಾಲರ್ (201 ಲಕ್ಷ ಕೋಟಿ ರೂಪಾಯಿ). ಆಕಸ್ಮಾತ್, ಈ ಹಣವನ್ನು ನಾರ್ವೆಯ ಪ್ರತಿ ನಾಗರಿಕನಿಗೆ ಸಮಾನವಾಗಿ ಹಂಚಿದರೆ ತಲಾ 3.5 ಕೋಟಿ ರೂ. ಸಿಗುತ್ತದೆ. ಆದರೆ, ನಾರ್ವೆ ಈ ನಿಧಿಯನ್ನು ದೇಶಕ್ಕಾಗಿ ಖರ್ಚು ಮಾಡದೆ ಜಗತ್ತಿನ 68 ದೇಶಗಳ 7,200 ಕಂಪನಿಗಳಲ್ಲಿ ಪಾಲು ಪಡೆಯಲು ವಿನಿಯೋಗಿಸಿದೆ. 1960ರ ದಶಕದವರೆಗೂ ಆದಾಯಕ್ಕೆ ಕೇವಲ ಮೀನುಗಾರಿಕೆ ಮತ್ತು ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿದ್ದ ನಾರ್ವೆ ಈಗ ಆದಾಯದ ದೃಷ್ಟಿಯಿಂದ ಜಗತ್ತಿನಲ್ಲಿ 6ನೇ ಸ್ಥಾನ, ಸಂತೋಷ ಸೂಚ್ಯಂಕದಲ್ಲಿ 7ನೇ ಸ್ಥಾನ ಹೊಂದಿದೆ. ತನ್ನ ಭೂಪ್ರದೇಶದ ಸಮುದ್ರದಲ್ಲಿನ ತೈಲ ಹುಡುಕಾಟ, ಮಾರಾಟಕ್ಕೆ ಲೈಸೆನ್ಸ್ ಜಾರಿಗೊಳಿಸುವ ಮೂಲಕವೇ ನಾರ್ವೆ ಆದಾಯ ಹೆಚ್ಚಿಸಿಕೊಂಡಿದೆ. ಈ ಆರ್ಥಿಕ ಸಾಮ್ರಾಜ್ಯ ಬೆಳೆದುಬಂದ ಕುತೂಹಲಕಾರಿ ವಿವರ ಇಲ್ಲಿದೆ.
ಉತ್ತರ ಯುರೋಪ್‌ನಲ್ಲಿರುವ ನಾರ್ವೆಯ ಭೌಗೋಳಿಕ ಪರಿಸ್ಥಿತಿ ಅತ್ಯಂತ ಕಠಿಣವಾದದ್ದು. ಸುತ್ತಲೂ ಹಿಮದಿಂದ ಆವೃತವಾದ ಪರ್ವತಗಳು ಮತ್ತು ಆಳವಾದ ಸಮುದ್ರ ಮಾರ್ಗಗಳು ಇಲ್ಲಿವೆ. 1960ರ ದಶಕದವರೆಗೆ ಇಲ್ಲಿನ ಬಹುತೇಕ ಜನರು ಜೀವನೋಪಾಯಕ್ಕಾಗಿ ಮೀನುಗಾರಿಕೆ, ಮರ ಕತ್ತರಿಸುವುದು ಅಥವಾ ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದರು. ಯಾವುದೇ ದೊಡ್ಡ ಕೈಗಾರಿಕೆಗಳಾಗಲಿ ಅಥವಾ ಟೆಕ್ ಕಂಪನಿಗಳಾಗಲಿ ಇಲ್ಲಿರಲಿಲ್ಲ. ಹಾಗಾಗಿ, ಯುವಕರು ಉದ್ಯೋಗಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದರು. ಆರ್ಥಿಕ ತಜ್ಞರು ಕೂಡ, ‘ನಮ್ಮಲ್ಲಿ ಯಾವುದೇ ನೈಸರ್ಗಿಕ ಸಂಪನ್ಮೂಲಗಳಿಲ್ಲ, ಯಾವುದಾದರೂ ಪವಾಡ ನಡೆದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಭಾವಿಸಿದ್ದರು. ಕೊನೆಗೂ, ಆ ಪವಾಡ ಸಂಭವಿಸಿತು!
ನಾರ್ವೆಯ ನೆರೆ ದೇಶವಾದ ನೆದರ್ಲ್ಯಾಂಡ್ಸ್‌ನ ಕರಾವಳಿ ಪ್ರದೇಶವಾದ ಗ್ರೋನಿಂಗನ್‌ನಲ್ಲಿ 1959ರಲ್ಲಿ ಭಾರಿ ಪ್ರಮಾಣದ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆಯಾಯಿತು. ಇದರಿಂದ ಇಡೀ ಯುರೋಪ್‌ನಲ್ಲಿ ತೈಲ ಮತ್ತು ಅನಿಲ ಹುಡುಕಾಟದ ಪೈಪೋಟಿ ಆರಂಭವಾಯಿತು.
ಅಮೆರಿಕನ್ ಕಂಪನಿಯ ಆಫರ್: ಅಮೆರಿಕದ ಫಿಲಿಪ್ಸ್ ಪೆಟ್ರೋಲಿಯಂ ಕಂಪನಿಯು 1962ರಲ್ಲಿ ನಾರ್ವೆ ಸರ್ಕಾರಕ್ಕೆ, ‘ನಮಗೆ ಉತ್ತರ ಸಮುದ್ರದಲ್ಲಿ ತೈಲ ನಿಕ್ಷೇಪ ಹುಡುಕಲು ಅನುಮತಿ ನೀಡಿ, ಬದಲಿಗೆ ಪ್ರತಿ ತಿಂಗಳು 1.6 ಲಕ್ಷ ಡಾಲರ್ ನೀಡುತ್ತೇವೆ’ ಎಂಬ ಪ್ರಸ್ತಾಪವನ್ನು ಮುಂದಿಟ್ಟಿತು. 1965ರಲ್ಲಿ ನಾರ್ವೆ ಸರ್ಕಾರವು ಫಿಲಿಪ್ಸ್ ಪೆಟ್ರೋಲಿಯಂ, ಶೆಲ್ ಮತ್ತು ಎಸ್ಸೋದಂತಹ ದೊಡ್ಡ ತೈಲ ಕಂಪನಿಗಳಿಗೆ 22 ಲೈಸೆನ್ಸ್‌ಗಳನ್ನು ನೀಡಿತು.
ಕ್ರಿಸ್ಮಸ್ ಮುಂಚೆ ನಡೆದ ಪವಾಡ!
ಮೊದಲ ತೈಲ ಬಾವಿಯನ್ನು 1966ರಲ್ಲಿ ಕೊರೆಯಲಾಯಿತು, ಆದರೆ ಅದು ಒಣಗಿತ್ತು. ನಂತರದ ದಿನಗಳಲ್ಲಿ ತೈಲ ಸಿಕ್ಕಿತಾದರೂ, ಅಲ್ಲಿಂದ ತೈಲವನ್ನು ಹೊರತೆಗೆಯುವುದು ಅತ್ಯಂತ duಬಾರಿ ಮತ್ತು ಸವಾಲಿನ ಕೆಲಸವಾಗಿತ್ತು. ಹೀಗೆ ಒಟ್ಟು 36 ಬಾವಿಗಳನ್ನು ಕೊರೆದರೂ ಯಾವುದೇ ಯಶಸ್ಸು ಸಿಗಲಿಲ್ಲ. ಕಂಪನಿಗಳು ಬೇಸತ್ತು ಕಾರ್ಯಾಚರಣೆಯನ್ನು ನಿಲ್ಲಿಸಲು ನಿರ್ಧರಿಸಿದವು. ಆದರೆ ಫಿಲಿಪ್ಸ್ ಪೆಟ್ರೋಲಿಯಂ ಕಂಪನಿಗೆ ಕೊನೆಯ ಒಂದು ಬಾವಿ ಕೊರೆಯುವುದು ಬಾಕಿ ಇತ್ತು. 1969ರ ಡಿ. 23ರಂದು ಕ್ರಿಸ್ಮಸ್ ಹಬ್ಬಕ್ಕೆ ಕೇವಲ ಎರಡು ದಿನಗಳ ಮುನ್ನ, ಫಿಲಿಪ್ಸ್ ಪೆಟ್ರೋಲಿಯಂನ ಕೊನೆಯ ಬಾವಿಯಿಂದ ಇದ್ದಕ್ಕಿದ್ದಂತೆ ಕಪ್ಪು ಮತ್ತು ಗಟ್ಟಿಯಾದ ತೈಲ ಚಿಮ್ಮಿತು. ಈ ಯಶಸ್ಸಿನಿಂದ ಇಂಜಿನಿಯರ್‌ಗಳು ಸಂಭ್ರಮಿಸಿದರು. ಈ ಪ್ರದೇಶಕ್ಕೆ ಎಕೋಫಿಸ್ಕ್ ಫೀಲ್ಡ್ ಎಂದು ಹೆಸರಿಡಲಾಯಿತು. ನಾರ್ವೆ ಕರಾವಳಿಯಿಂದ 300 ಕಿ.ಮೀ. ದೂರದಲ್ಲಿರುವ ಈ ಪ್ರದೇಶವು ವಿಶ್ವದ ಅತಿ ದೊಡ್ಡ ತೈಲ ಮತ್ತು ಅನಿಲ ನಿಕ್ಷೇಪಗಳಲ್ಲಿ ಒಂದಾಗಿದೆ.
ಅದೃಷ್ಟ ಬದಲಾಯಿತು
ನಾರ್ವೆ 1971ರಿಂದ ತೈಲ ಉದ್ಯಮವನ್ನು ಪ್ರಾರಂಭಿಸಿತು. 1972ರಲ್ಲಿ ನಾರ್ವೆ ಸಂಸತ್ತು ‘ಸ್ಟೇಟ್‌ಆಯಿಲ್’ (ಈಗಿನ ಇಕ್ವಿನೋರ್) ಎಂಬ ಸರ್ಕಾರಿ ತೈಲ ಕಂಪನಿಯನ್ನು ಸ್ಥಾಪಿಸಿತು. ಉತ್ತರ ಸಮುದ್ರದ ಯಾವುದೇ ತೈಲ ಯೋಜನೆಯಲ್ಲಿ ಈ ಸರ್ಕಾರಿ ಕಂಪನಿಯು ಕನಿಷ್ಠ 50% ಪಾಲನ್ನು ಹೊಂದಿರುತ್ತದೆ ಎಂಬ ನಿಯಮವನ್ನು ಮಾಡಲಾಯಿತು. ಆದರೆ, ಅಪಾರ ಹಣದ ಹರಿವಿನ ಬೆನ್ನಲ್ಲೇ ನಾರ್ವೆ ಎರಡು ದೊಡ್ಡ ಆಘಾತಗಳನ್ನು ಎದುರಿಸಬೇಕಾಗಿ ಬಂತು.
ಮೊದಲ ಆಘಾತ
ನಾರ್ವೆ 1975ರಲ್ಲಿ ತೈಲ ಕಂಪನಿಗಳ ಲಾಭದ ಮೇಲೆ 78% ತೆರಿಗೆ ವಿಧಿಸಿತು! ಸರ್ಕಾರದ ಖಜಾನೆ ತುಂಬಿ ತುಳುಕಲಾರಂಭಿಸಿತು. ಸರ್ಕಾರವು ದೇಶೀಯ ಖರ್ಚುಗಳನ್ನು ಗಣನೀಯವಾಗಿ ಹೆಚ್ಚಿಸಿತು. ಸಬ್ಸಿಡಿಗಳು ಮತ್ತು ಉಚಿತ ಸೌಲಭ್ಯಗಳ ಮಹಾಪೂರವೇ ಹರಿಯಿತು. ಪರಿಣಾಮವಾಗಿ, 1978-79ರ ಹೊತ್ತಿಗೆ ದೇಶದಲ್ಲಿ ಭೀಕರ ಹಣದುಬ್ಬರ ಉಂಟಾಯಿತು. ಕೂಲಿ ಕಾರ್ಮಿಕರ ವೆಚ್ಚ ಎಷ್ಟು ಹೆಚ್ಚಾಯಿತೆಂದರೆ, ತೈಲ ಉದ್ಯಮವನ್ನು ಹೊರತುಪಡಿಸಿ ನಾರ್ವೆಯ ಇತರ ಕೈಗಾರಿಕೆಗಳು ನಷ್ಟದ ಸುಳಿಗೆ ಸಿಲುಕಿ ಮುಚ್ಚಿಹೋದವು.
ಎರಡನೇ ಆಘಾತ
ಜಾಗತಿಕ ಮಾರುಕಟ್ಟೆಯಲ್ಲಿ 1986ರಲ್ಲಿ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 28 ಡಾಲರ್‌ನಿಂದ 10 ಡಾಲರ್‌ಗೆ ಕುಸಿದವು. ಆದಾಯವು ಮೂರನೇ ಒಂದು ಭಾಗಕ್ಕೆ ಇಳಿದಿದ್ದರಿಂದ ಸರ್ಕಾರ ಭಾರಿ ನಷ್ಟ ಅನುಭವಿಸಿತು. ನಿರುದ್ಯೋಗ ಗರಿಷ್ಠ ಮಟ್ಟಕ್ಕೆ ತಲುಪಿತು. ಬ್ಯಾಂಕ್‌ಗಳಿಂದ ಸಾಲ ಪಡೆದವರು ಅದನ್ನು ಮರುಪಾವತಿಸಲು ಸಾಧ್ಯವಾಗದೆ ಬ್ಯಾಂಕಿಂಗ್ ವ್ಯವಸ್ಥೆಯೇ ಹದಗೆಟ್ಟಿತು. ಹಲವು ಬ್ಯಾಂಕ್‌ಗಳು ಮುಚ್ಚಿಹೋದವು. ಅರ್ಥಶಾಸ್ತ್ರದಲ್ಲಿ ಇಂತಹ ಪರಿಸ್ಥಿತಿಯನ್ನು ‘ರಿಸೋರ್ಸ್ ಕರ್ಸ್’ ಎನ್ನಲಾಗುತ್ತದೆ. ಅಂದರೆ, ಇದ್ದಕ್ಕಿದ್ದಂತೆ ಸಿಗುವ ಅಪಾರ ಸಂಪತ್ತು ದೇಶಕ್ಕೆ ವರವಾಗುವ ಬದಲು ಶಾಪವಾಗಿ ಪರಿಣಮಿಸುತ್ತದೆ. ಈ ಶಾಪವನ್ನು ಮೆಟ್ಟಿ ನಿಲ್ಲಲು ನಾರ್ವೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿತು. ದೇಶದ 4 ದೊಡ್ಡ ಬ್ಯಾಂಕ್‌ಗಳ ಪೈಕಿ 3 ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿತು. ಸಬ್ಸಿಡಿಗಳನ್ನು ಕಡಿತಗೊಳಿಸಿ ಬಜೆಟ್ ಅನ್ನು ಸರಿದೂಗಿಸಿತು.
ಸರ್ಕಾರಿ ನಿಧಿ ಸ್ಥಾಪನೆ
ನಾರ್ವೆ ಸಂಸತ್ತಿನಲ್ಲಿ 1990ರ ಮೇ ತಿಂಗಳಲ್ಲಿ ‘ಗವರ್ನಮೆಂಟ್ ಪೆಟ್ರೋಲಿಯಂ ಫಂಡ್ ಆಕ್ಟ್’ ಅಂಗೀಕಾರಗೊಂಡಿತು. ಇದರ ಪ್ರಕಾರ, ತೈಲದಿಂದ ಬರುವ ಹೆಚ್ಚುವರಿ ಆದಾಯವನ್ನು ಪ್ರತ್ಯೇಕ ನಿಧಿಯಲ್ಲಿ ಇರಿಸಲಾಗುವುದು ಮತ್ತು ಸರ್ಕಾರ ಅದನ್ನು ನೇರವಾಗಿ ಖರ್ಚು ಮಾಡುವಂತಿಲ್ಲ ಎಂದು ತೀರ್ಮಾನಿಸಲಾಯಿತು. ಆಗ ಜನ್ಮ ತಳೆದಿದ್ದೇ- ಸಾವರಿನ್ ವೆಲ್ತ್ ಫಂಡ್- ಗವರ್ನಮೆಂಟ್ ಪೆನ್ಷನ್ ಫಂಡ್. ಈ ಮೂಲಕ ಆಗಿನ ಸರ್ಕಾರ ದಿಟ್ಟ ಹಾಗೂ ಮಾದರಿಯಾದ ನಿರ್ಣಯವನ್ನು ಅಂಗೀಕರಿಸಿತು. ‘‘ಸಮುದ್ರದಡಿ ನಮಗೆ ಸಿಕ್ಕಿರುವ ತೈಲ ನಮ್ಮ ಸ್ವಂತ ಆಸ್ತಿಯಲ್ಲ. ಇದು ನಮ್ಮ ಪೂರ್ವಜರ ಶ್ರಮದಿಂದ ದೊರೆತಿದ್ದು, ಮುಂದಿನ ಪೀಳಿಗೆಗಾಗಿ ಕಾದಿರಿಸಬೇಕು. ತೈಲ ಇಂದು ಇರಬಹುದು, ನಾಳೆ ಮುಗಿದುಹೋಗಬಹುದು. ಆದ್ದರಿಂದ ನಾವು ಈ ‘ಕಪ್ಪುಚಿನ್ನ’ವನ್ನು (ತೈಲ) ‘ಅಕ್ಷಯಧನ’ವಾಗಿ (ಫಂಡ್) ಬದಲಾಯಿಸಬೇಕು. ಇದರಿಂದ ತೈಲ ಮುಗಿದ ಮೇಲೂ ನಮ್ಮ ಮುಂದಿನ ಪೀಳಿಗೆ ಇದೇ ಶ್ರೀಮಂತಿಕೆ ಮತ್ತು ಭದ್ರತೆಯೊಂದಿಗೆ ಬದುಕಬಹುದು’ ಎಂಬ ನಾರ್ವೆ ಸರ್ಕಾರದ ನಿರ್ಣಯವು ನಾರ್ವೆಯ ಆರ್ಥಿಕ ದಿಕ್ಕನ್ನೇ ಬದಲಿಸಿತು. 1996ರಲ್ಲಿ ಕೇವಲ 400 ಮಿಲಿಯನ್ ಡಾಲರ್‌ನಿಂದ ಪ್ರಾರಂಭವಾದ ಈ ಫಂಡ್, ಇಂದು 2.1 ಟ್ರಿಲಿಯನ್ ಡಾಲರ್‌ಗೆ ತಲುಪಿದೆ. ಇದರ ನಿರ್ವಹಣೆಯನ್ನು ನಾರ್ವೆಯ ಸೆಂಟ್ರಲ್ ಬ್ಯಾಂಕ್ ಆದ ನಾರ್ಜಸ್ ಬ್ಯಾಂಕ್‌ನ ವಿಶೇಷ ವಿಭಾಗ ನೋಡಿಕೊಳ್ಳುತ್ತಿದೆ.
ಭಾರತಕ್ಕೆ ಆಹ್ವಾನ:
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನಾರ್ವೆಗೆ ಭೇಟಿ ನೀಡಿದಾಗ, ಭಾರತದ ಸ್ವಚ್ಛ ಇಂಧನ ವಲಯದಲ್ಲಿ ಇದೇ ಸರ್ಕಾರಿ ನಿಧಿಯಿಂದ ಹೂಡಿಕೆ ಮಾಡುವಂತೆ ನಾರ್ವೆ ಸರ್ಕಾರಕ್ಕೆ ಆಹ್ವಾನ ನೀಡಿದ್ದಾರೆ. ಇದಕ್ಕೆ ನಾರ್ವೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಮುಂಬರುವ ದಿನಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಮತ್ತು ಮೂಲಸೌಕರ್ಯ ವಲಯದಲ್ಲಿ ತನ್ನ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ.
ಮೂರು ನಿಯಮಗಳು
ಹಣವನ್ನು ದೇಶದ ಹೊರಗೆ ಹೂಡಿಕೆ ಮಾಡುವುದು: ತೈಲದ ಆದಾಯದ ಒಂದು ಪೈಸೆಯನ್ನೂ ನಾರ್ವೆಯ ಒಳಗಿನ ರಸ್ತೆ, ಸೇತುವೆ, ಮಾಲ್ ಅಥವಾ ಆಸ್ಪತ್ರೆಗಳ ನಿರ್ಮಾಣಕ್ಕೆ ನೇರವಾಗಿ ಬಳಸುವಂತಿಲ್ಲ. ಈ ಹಣವನ್ನು ಡಾಲರ್, ಯೂರೋ, ಪೌಂಡ್‌ನಂತಹ ವಿದೇಶಿ ಕರೆನ್ಸಿಗೆ ಬದಲಾಯಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಿಂದ ದೇಶದೊಳಗೆ ಹಣದುಬ್ಬರ ನಿಯಂತ್ರಣದಲ್ಲಿರುತ್ತದೆ.
ಮೌಲ್ಯದ 3% ಮಾತ್ರ ಖರ್ಚು ಮಾಡುವುದು: ಸರ್ಕಾರವು 2001ರ ನಿಯಮದ ಪ್ರಕಾರ, ಈ ಫಂಡ್‌ನ ಅಸಲು ಹಣವನ್ನು ಮುಟ್ಟುವಂತಿಲ್ಲ. ವರ್ಷಕ್ಕೆ ಬರುವ ಲಾಭದ ಪೈಕಿ 3% ಹಣವನ್ನು ಮಾತ್ರ ಬಜೆಟ್ ಕೊರತೆ ನೀಗಿಸಲು ಬಳಸಬಹುದು. ನಾರ್ವೆಯ ಈ ದೂರದೃಷ್ಟಿಯ ಆರ್ಥಿಕ ಮಾದರಿ ಜಗತ್ತಿನ ಎಲ್ಲ ದೇಶಗಳಿಗೂ ಅತ್ಯುತ್ತಮ ಪಾಠವಾಗಿದೆ.
ನೈತಿಕ ಹೂಡಿಕೆ: ಕೇವಲ ಲಾಭಕ್ಕಾಗಿ ನಾರ್ವೆ ಎಲ್ಲೆಂದರಲ್ಲಿ ಹೂಡಿಕೆ ಮಾಡುವುದಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ಮಾಡುವ, ಬಾಲಕಾರ್ಮಿಕ ಪದ್ಧತಿ ಪ್ರೋತ್ಸಾಹಿಸುವ, ತಂಬಾಕು/ಗಾಂಜಾ ತಯಾರಿಸುವ ಮತ್ತು ಅಣುಬಾಂಬ್ ಅಥವಾ ಮಾರಕ ಆಯುಧಗಳನ್ನು ತಯಾರಿಸುವ ಕಂಪನಿಗಳನ್ನು ಈ ಫಂಡ್ ಕಪ್ಪುಪಟ್ಟಿಗೆ ಸೇರಿಸಿದೆ. (ಉದಾಹರಣೆಗೆ: ಬೋಯಿಂಗ್, ಏರ್‌ಬಸ್, ಬ್ರಿಟಿಷ್ ಅಮೆರಿಕನ್ ಟೊಬ್ಯಾಕೋ ಇತ್ಯಾದಿ). ಇದೇ ನೈತಿಕ ನಿಯಮಗಳ ಅಡಿಯಲ್ಲಿ ನಾರ್ವೆಯ ಈ ಫಂಡ್ ಭಾರತದ ಅದಾನಿ ಸಮೂಹದ ಕೆಲವು ಕಂಪನಿಗಳ ಮೇಲೂ ಕ್ರಮ ಕೈಗೊಂಡಿದೆ.