ಮಧ್ಯಪ್ರಾಚ್ಯದಲ್ಲಿ ಮತ್ತೆ ಮೊಳಗಿದ ಯುದ್ಧದ ಕಹಳೆ! ಅಮೆರಿಕದ ವಶದಲ್ಲಿ ಇರಾನ್ ಹಡಗು: ಒಮನ್ ಕೊಲ್ಲಿಯಲ್ಲಿ ನಡೆದಿದ್ದೇನು..?
ಟೆಹ್ರಾನ್: ಒಮನ್ ಕೊಲ್ಲಿಯ ಅಲೆಗಳ ಮೇಲೆ ಈಗ ಯುದ್ಧದ ಕಿಡಿ ಹಾರುತ್ತಿದೆ. ಅಮೆರಿಕದ ನೌಕಾಪಡೆಯು ಇರಾನ್‌ನ(Iranian ship in US custody) ದೈತ್ಯ ಸರಕು ಸಾಗಣೆ ಹಡಗನ್ನು ಬೆನ್ನಟ್ಟಿ, ಅದರ ಎಂಜಿನ್ ರೂಮ್ ಮೇಲೆ ಗುಂಡಿನ ದಾಳಿ ನಡೆಸಿ ವಶಪಡಿಸಿಕೊಂಡಿರುವುದು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಘಟನೆಯ ವಿಡಿಯೋ ತುಣುಕುಗಳನ್ನು ಅಮೆರಿಕ ಬಿಡುಗಡೆ ಮಾಡಿದ್ದು, ಇರಾನ್ ಕಟುವಾದ ಪ್ರತೀಕಾರದ ಎಚ್ಚರಿಕೆ ನೀಡಿದೆ.
ಘಟನೆಯ ಹಿನ್ನೆಲೆ: ಏನಾಯಿತು ಒಮನ್ ಕೊಲ್ಲಿಯಲ್ಲಿ..?
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಸುಮಾರು 900 ಅಡಿ ಉದ್ದದ ಇರಾನ್‌ನ ದೈತ್ಯ ಟೌಸ್ಕಾ ಹಡಗು ಅಂತಾರಾಷ್ಟ್ರೀಯ ದಿಗ್ಬಂಧನವನ್ನು ಉಲ್ಲಂಘಿಸಲು ಯತ್ನಿಸಿತ್ತು. ಉತ್ತರ ಅರೇಬಿಯನ್ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕದ ಕ್ಷಿಪಣಿ ವಿಧ್ವಂಸಕ ನೌಕೆ USS ಸ್ಪ್ರೂಯನ್ಸ್ ಈ ಹಡಗನ್ನು ಪತ್ತೆಹಚ್ಚಿ ಬೆನ್ನಟ್ಟಿದೆ.
ಹಲವು ಬಾರಿ ಎಚ್ಚರಿಕೆ ನೀಡಿದರೂ ಟೌಸ್ಕಾ ಹಡಗು ತನ್ನ ವೇಗವನ್ನು ಕಡಿಮೆ ಮಾಡಲಿಲ್ಲ. ಅಂತಿಮವಾಗಿ, ಅಮೆರಿಕದ ಪಡೆಗಳು ಹಡಗಿನ ಸಿಬ್ಬಂದಿಗೆ ಎಂಜಿನ್ ಕೋಣೆಯನ್ನು ಖಾಲಿ ಮಾಡುವಂತೆ ಸೂಚನೆ ನೀಡಿ, ತದನಂತರ ನೇರ ದಾಳಿ ನಡೆಸಿವೆ. ಹಡಗಿನ ಚಾಲನಾ ವ್ಯವಸ್ಥೆ ಧ್ವಂಸಗೊಂಡು ಹಡಗು ಸಮುದ್ರದ ಮಧ್ಯದಲ್ಲೇ ಸ್ಥಗಿತಗೊಂಡಿತು. ತದನಂತರ ಅಮೆರಿಕದ ಮರೀನ್ ಪಡೆಗಳು ಹಡಗನ್ನು ಹತ್ತಿ ಪೂರ್ಣವಾಗಿ ತಮ್ಮ ವಶಕ್ಕೆ ಪಡೆದಿವೆ.
ಡೊನಾಲ್ಡ್ ಟ್ರಂಪ್ ಅವರ ತೀಕ್ಷ್ಣ ಪ್ರತಿಕ್ರಿಯೆ
ಈ ಕಾರ್ಯಾಚರಣೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
ಟೌಸ್ಕಾ ಹಡಗು ಬಹುತೇಕ ವಿಮಾನವಾಹಕ ನೌಕೆಯಷ್ಟೇ ತೂಕ ಹೊಂದಿತ್ತು. ನಮ್ಮ ನೌಕಾಪಡೆಯ ದಿಗ್ಬಂಧನವನ್ನು ದಾಟಲು ಅದು ಯತ್ನಿಸಿತು, ಆದರೆ ಅದು ಅವರಿಗೆ ದುಬಾರಿಯಾಗಿ ಪರಿಣಮಿಸಿದೆ. USS ಸ್ಪ್ರೂಯನ್ಸ್ ನೀಡಿದ ಎಚ್ಚರಿಕೆಯನ್ನು ಇರಾನ್ ಸಿಬ್ಬಂದಿ ನಿರ್ಲಕ್ಷಿಸಿದ ಕಾರಣ, ನಮ್ಮ ನೌಕಾಪಡೆಯು ಹಡಗಿನ ಎಂಜಿನ್ ರೂಮ್‌ಗೆ ರಂಧ್ರ ಕೊರೆಯುವ ಮೂಲಕ ಅದನ್ನು ಸ್ಥಗಿತಗೊಳಿಸಿದೆ ಎಂದು ಟ್ರಂಪ್ ಬರೆದಿದ್ದಾರೆ.
ಅಲ್ಲದೆ, ಈ ಹಡಗು ಈ ಹಿಂದೆಯೇ ಅಮೆರಿಕದ ಖಜಾನೆ ಇಲಾಖೆಯಿಂದ ನಿರ್ಬಂಧಕ್ಕೆ ಒಳಗಾಗಿತ್ತು ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು ಎಂದು ಟ್ರಂಪ್ ಆರೋಪಿಸಿದ್ದಾರೆ.
ಇರಾನ್‌ನ ಪ್ರತೀಕಾರದ ಗುಡುಗು: ಇದು ಕಡಲಗಳ್ಳತನ
ಅಮೆರಿಕದ ಈ ನಡೆಯನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಇದನ್ನು ಸಶಸ್ತ್ರ ಕಡಲಗಳ್ಳತನ ಎಂದು ಕರೆದಿರುವ ಇರಾನ್‌ನ ಹಜರತ್ ಖಾತಮ್ ಅಲ್-ಅನ್ಬಿಯಾ ಮಿಲಿಟರಿ ಪ್ರಧಾನ ಕಚೇರಿಯು, ಶೀಘ್ರದಲ್ಲೇ ಅಮೆರಿಕಕ್ಕೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದೆ.
ನಮ್ಮ ಸಶಸ್ತ್ರ ಪಡೆಗಳು ಅಮೆರಿಕದ ಈ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರ ನೀಡಲಿವೆ. ನಮ್ಮ ಸಾರ್ವಭೌಮತ್ವದ ಮೇಲಿನ ಈ ದಾಳಿಯನ್ನು ನಾವು ಸಹಿಸುವುದಿಲ್ಲ ಎಂದು ಟೆಹ್ರಾನ್ ಪ್ರಕಟಣೆಯಲ್ಲಿ ತಿಳಿಸಿದೆ.
ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ?
ಒಮನ್ ಕೊಲ್ಲಿ ಮತ್ತು ಹೊರ್ಮುಜ್ ಜಲಸಂಧಿಯು ಜಾಗತಿಕ ತೈಲ ವ್ಯಾಪಾರದ ಪ್ರಮುಖ ಮಾರ್ಗಗಳಾಗಿವೆ. ಈ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವುದು ಕಚ್ಚಾ ತೈಲ ಬೆಲೆಯ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂದು ವೇಳೆ ಇರಾನ್ ಪ್ರತಿಯಾಗಿ ಅಮೆರಿಕದ ಹಡಗುಗಳ ಮೇಲೆ ಅಥವಾ ಮಿತ್ರ ರಾಷ್ಟ್ರಗಳ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದರೆ, ಅದು ಪೂರ್ಣ ಪ್ರಮಾಣದ ಪ್ರಾದೇಶಿಕ ಯುದ್ಧಕ್ಕೆ ನಾಂದಿ ಹಾಡಬಹುದು ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).