ಹಣಕಾಸು ಯುದ್ಧ"ಕ್ಕೆ ಮುಹೂರ್ತ ಫಿಕ್ಸ್! ದುಬೈ, ಸೌದಿಗೆ ನಡುಕ; ಅಮೆರಿಕದ ಬ್ಯಾಂಕ್‌ಗಳನ್ನು ಧ್ವಂಸ ಮಾಡಲು ಸಜ್ಜಾಯ್ತಾ ಇರಾನ್ ಸೈನ್ಯ..?
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಸಂಭವಿಸುತ್ತಿರುವ ಬೆಳವಣಿಗೆಗಳು ಜಗತ್ತನ್ನು ಆರ್ಥಿಕ ಮುಷ್ಕರದತ್ತ ದೂಡುತ್ತಿವೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿರುವ ಬ್ಯಾಂಕ್(Iran) ಒಂದರ ಮೇಲೆ ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಸಿಬ್ಬಂದಿಯನ್ನು ಕೊಂದ ಬೆನ್ನಲ್ಲೇ, ಇರಾನ್ ಮಿಲಿಟರಿ ಆರ್ಥಿಕ ಪ್ರತೀಕಾರಕ್ಕೆ ಕರೆ ನೀಡಿದೆ. ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕ ಮತ್ತು ಇಸ್ರೇಲ್ ಮೂಲದ ಬ್ಯಾಂಕ್‌ಗಳು ಹಾಗೂ ಆರ್ಥಿಕ ಕೇಂದ್ರಗಳನ್ನು ಧ್ವಂಸಗೊಳಿಸುವುದಾಗಿ ಇರಾನ್ ಎಚ್ಚರಿಸಿದೆ.
ಬ್ಯಾಂಕ್‌ಗಳಿಂದ 1 ಕಿಲೋಮೀಟರ್ ದೂರವಿರಿ: ಇರಾನ್ ಖಡಕ್ ವಾರ್ನಿಂಗ್
ಇರಾನ್‌ನ ಸೇನಾ ಕಾರ್ಯಾಚರಣೆಯ ಕೇಂದ್ರವಾದ ಖಾತಮ್ ಅಲ್-ಅನ್ಬಿಯಾ ಹೊರಡಿಸಿರುವ ಹೇಳಿಕೆಯು ಇಡೀ ಗಲ್ಫ್ ರಾಷ್ಟ್ರಗಳಲ್ಲಿ ನಡುಕ ಹುಟ್ಟಿಸಿದೆ.
ಮುಕ್ತ ಅವಕಾಶ: ಶತ್ರುಗಳು ನಮ್ಮ ಬ್ಯಾಂಕುಗಳ ಮೇಲೆ ದಾಳಿ ಮಾಡುವ ಮೂಲಕ ನಮಗೆ ಅವರ ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಲು ಮುಕ್ತ ಅವಕಾಶ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ಗೆ ಸೇರಿದ ಬ್ಯಾಂಕ್‌ಗಳು ನಮ್ಮ ಮುಂದಿನ ಟಾರ್ಗೆಟ್ ಎಂದು ಇರಾನ್ ಸೇನೆ ಘೋಷಿಸಿದೆ.
ಜೀವಕ್ಕೆ ಅಪಾಯ: ಗಲ್ಫ್ ಪ್ರಾಂತ್ಯದ ಜನರಿಗೆ ಇರಾನ್ ಒಂದು ಕಠಿಣ ಎಚ್ಚರಿಕೆ ನೀಡಿದೆ. ಯಾವುದೇ ಅಮೆರಿಕನ್ ಅಥವಾ ಇಸ್ರೇಲಿ ಬ್ಯಾಂಕ್‌ಗಳಿಂದ ಕನಿಷ್ಠ 1,000 ಮೀಟರ್ ದೂರವಿರಿ. ಇದು ಯಾವುದೇ ಕ್ಷಣದಲ್ಲಿ ಬ್ಯಾಂಕ್‌ಗಳ ಮೇಲೆ ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆಯಬಹುದು ಎಂಬ ಮುನ್ಸೂಚನೆಯಾಗಿದೆ.
ದುಬೈ ಮತ್ತು ಸೌದಿ ಅರೇಬಿಯಾಗೆ ಶುರುವಾಯ್ತು ಕಂಟಕ!
ಇರಾನ್‌ನ ಈ ಎಚ್ಚರಿಕೆಯು ಅಂತಾರಾಷ್ಟ್ರೀಯ ಹಣಕಾಸು ಹಬ್ ಆಗಿರುವ ದುಬೈ ಮೇಲೆ ನೇರ ಪರಿಣಾಮ ಬೀರಲಿದೆ. ದುಬೈನಲ್ಲಿ ನೂರಾರು ಅಂತಾರಾಷ್ಟ್ರೀಯ ಬ್ಯಾಂಕ್‌ಗಳ ಪ್ರಧಾನ ಕಚೇರಿಗಳಿವೆ. ಇದರೊಂದಿಗೆ ಸೌದಿ ಅರೇಬಿಯಾ ಮತ್ತು ಬಹ್ರೇನ್‌ನಲ್ಲಿರುವ ಹಣಕಾಸು ಕೇಂದ್ರಗಳೂ ಈಗ ಇರಾನ್‌ನ ರಾಡಾರ್‌ನಲ್ಲಿವೆ.
ದಾಳಿಯ ತೀವ್ರತೆ: ದುಬೈ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಬಳಿ ಇರಾನ್ ಡ್ರೋನ್‌ಗಳು ದಾಳಿ ನಡೆಸಿವೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ತೈಲ ಕೇಂದ್ರಗಳ ಮೇಲೆ ಕಣ್ಣು: ಸೌದಿ ಅರೇಬಿಯಾದ ಶೈಬಾ ತೈಲ ಕ್ಷೇತ್ರ ಮತ್ತು ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ಕ್ಷಿಪಣಿಗಳನ್ನು ಉಡಾಯಿಸಿದೆ. ಅದೃಷ್ಟವಶಾತ್, ಸೌದಿ ರಕ್ಷಣಾ ಪಡೆಗಳು ಇವುಗಳನ್ನು ಹೊಡೆದುರುಳಿಸಿವೆ.
ಹಾರ್ಮುಜ್ ಜಲಸಂಧಿ ಬಂದ್: ಜಗತ್ತಿಗೆ ತೈಲ ಬರ..?
ಇರಾನ್ ಕೇವಲ ಬ್ಯಾಂಕ್‌ಗಳನ್ನಷ್ಟೇ ಅಲ್ಲ, ಸಮುದ್ರ ಮಾರ್ಗವನ್ನೂ ಬಂದ್ ಮಾಡಿದೆ. ಜಗತ್ತಿನ ಐದನೇ ಒಂದು ಭಾಗದಷ್ಟು ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳ ಮೇಲೆ ದಾಳಿ ಮಾಡುತ್ತಿದೆ.
ಓಮನ್ ಕರಾವಳಿಯಲ್ಲಿ ಅಮೆರಿಕಕ್ಕೆ ಸೇರಿದ ಕಂಟೈನರ್ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಹಡಗು ಹೊತ್ತಿ ಉರಿಯುತ್ತಿದೆ.
ಈ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿದೆ. ಇದು ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಗಗನಕ್ಕೇರಿಸುವ ಸಾಧ್ಯತೆಯಿದೆ.
ಆರ್ಥಿಕ ದಿಗ್ಬಂಧನದ ತಂತ್ರ
ವಿಶ್ಲೇಷಕರ ಪ್ರಕಾರ, ಇರಾನ್ ಉದ್ದೇಶಪೂರ್ವಕವಾಗಿ ಗಲ್ಫ್ ರಾಷ್ಟ್ರಗಳ ಆರ್ಥಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಿದೆ. ವಾಷಿಂಗ್ಟನ್ ಮತ್ತು ಇಸ್ರೇಲ್ ಮೇಲೆ ಜಾಗತಿಕ ಆರ್ಥಿಕ ಒತ್ತಡ ಹೇರಿ, ಯುದ್ಧವನ್ನು ನಿಲ್ಲಿಸುವಂತೆ ಮಾಡುವುದು ಇರಾನ್‌ನ ತಂತ್ರವಾಗಿದೆ. ಆದರೆ, ಇದು ಜಗತ್ತನ್ನು ಮತ್ತೊಂದು ಮಹಾ ಆರ್ಥಿಕ ಕುಸಿತಕ್ಕೆ ತಳ್ಳುವ ಅಪಾಯವಿದೆ,(ಏಜೆನ್ಸೀಸ್).